SDMC chairman transferred money to wife's account?
-ಗೊಬ್ಬುರ(ಬಿ) ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಅಂತರಗಂಗಿಯಿಂದ ಲಕ್ಷಾಂತರ ರುಪಾಯಿ ಗೋಲ್ಮಾಲ್
-----ಕನ್ನಡಪ್ರಭ ವಾರ್ತೆ /ಕರಜಗಿ
ಸರ್ಕಾರದ ಮಹತ್ವಾಕಾಂಕ್ಷಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿನ ಅನುದಾನದ ಖಾತೆಯಿಂದ ಬ್ಯಾಂಕ್ ಚೆಕ್ ಕದ್ದು, ಮುಖ್ಯ ಗುರುಗಳ ನಕಲಿ ಸಹಿ ಹಾಕಿ ಬರೋಬ್ಬರಿ ಒಂದು ಲಕ್ಷದ 23 ಸಾವಿರ ಹಣವನ್ನು ಎಸ್‌ಡಿಎಂಸಿ ಅಧ್ಯಕ್ಷರು ತಮ್ಮ ಪತ್ನಿಯ ವೈಯಕ್ತಿಕ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿರುವ ಗಂಭೀರ ವಂಚನೆ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.ಅಫಜಲಪುರ ತಾಲೂಕಿನ ಗೊಬ್ಬುರ(ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಅಂತರಗಂಗಿ ಇದನ್ನು ಮಾಡಿದ್ದು ಸರ್ಕಾರಕ್ಕೆ ವಂಚಿಸಿದ್ದಾರೆಂದು ಹೇಳಲಾಗುತ್ತಿದೆ.
ಶಾಲೆಯ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಹಾಗೂ ಬಿಸಿಯೂಟದ ನಿರ್ವಹಣೆಗಾಗಿ ಶಿಕ್ಷಣ ಇಲಾಖೆಯ ನಿಯಮಾವಳಿಗಳ ಅನ್ವಯ ಮುಖ್ಯ ಗುರುಗಳು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಜಂಟಿ ಬ್ಯಾಂಕ್ ಖಾತೆಯನ್ನು ತೆರೆದಿದ್ದಾರೆ. ಇದರ ಸಂಪೂರ್ಣ ಲಾಭ ಪಡೆದ ಎಸ್‌ಡಿಎಂಸಿ ಬಸವರಾಜ ಶಾಲೆಯ ಪ್ರಭಾರಿ ಮುಖ್ಯಗುರುಗಳಾಗಿದ್ದ ಗುರಪ್ಪ ಅಳ್ಳಗಿ ಅವರಿಗೆ ಮರೆ ಮಾಚಿ ಶಾಲೆಯ ಕಚೇರಿಯಲ್ಲಿದ್ದ ಬ್ಯಾಂಕ್ ಚೆಕ್ ಪುಸ್ತಕದಿಂದ ರಹಸ್ಯವಾಗಿ ಚೆಕ್ ಒಂದನ್ನು ಜನವರಿಯಲ್ಲೇ ಕದ್ದಿದ್ದಾರೆ.ಬಳಿಕ ಮೂರ್ನಾಲ್ಕು ತಿಂಗಳ ನಂತರ ಏಪ್ರಿಲ್ 10 ರಂದು ಮುಖ್ಯಗುರುಗಳ ಸಹಿಯನ್ನೇ ನಕಲು ಮಾಡಿ, ಯಾರಿಗೂ ಅನುಮಾನ ಬಾರದಂತೆ ಬರೋಬ್ಬರಿ ಒಂದು ಲಕ್ಷದ 23 ಸಾವಿರ ರುಪಾಯಿ ನೇರವಾಗಿ ತಮ್ಮ ಧರ್ಮಪತ್ನಿ ಅಂಬಿಕಾ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದಾರೆ.
ಈ ವಿಷಯ ಕಳೆದ 7 ಜೂನ್ ರಂದು ತಿಳಿದಿದ್ದರೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ಮುಚ್ಚಿಡಲು ಯತ್ನಿಸಿದ ಮುಖ್ಯಗುರುಗಳ ಧೋರಣೆ ಜನಾಕ್ರೋಶಕ್ಕೆಕಾರಣವಾಗಿದೆ.
..ಬಾಕ್ಸ್..ಪ್ರಕರಣದ ಪರಿಶೀಲನೆ
ಈ ಪ್ರಕರಣದ ಬಗ್ಗೆ ಬಿಇಒ ಕಚೇರಿಯಿಂದ ಪರಿಶೀಲನೆ ನಡೆದಿದೆ. ಒಂದು ತಂಡ ಈಗಾಗಲೇ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ಬಿಇಒ ಕಛೇರಿ ಮೂಲಗಳು ಹೇಳಿವೆ. ಎಸ್ ಡಿಎಂಸಿ ಅಧ್ಯಕ್ಷ ರ ವಿರುದ್ಧ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಜುಲೈ 16ರಂದು ಸಾಯಂಕಾಲ ಅರ್ಜಿ ಕೊಟ್ಟು ಮರುದಿನವೇ ವಾಪಾಸ್ ಪಡೆಯಲಾಗಿದೆ ಎಂದು ಗೊತ್ತಾಗಿದ್ದು, ಇವೆಲ್ಲ ಬೆಳವಣಿಗೆ ಪ್ರಕರಣದಲ್ಲಿ ಶಂಕೆ ಹುಟ್ಟುಹಾಕಿವೆ...ಬಾಕ್ಸ್..
ಕಠಿಣ ಕ್ರಮಕ್ಕೆ ಪೋಷಕರ ಆಗ್ರಹಬಡ ಮಕ್ಕಳ ವಿದ್ಯಾಭ್ಯಾಸ ಹಾಗೂ ಶಾಲೆಯ ಅನ್ನದಾಸೋಹಕ್ಕೆ ಬಳಸಬೇಕಿದ್ದ ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಎಸ್‌ಡಿಎಂಸಿ ಅಧ್ಯಕ್ಷನ ವಿರುದ್ಧ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಜತೆಗೆ ಕರ್ತವ್ಯ ಲೋಪ ಎಸಗಿರುವ ಮುಖ್ಯಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಒಳಪಡಿಸಬೇಕು ಎಂದು ಪೋಷಕರು ಮತ್ತು ಸ್ಥಳೀಯರಾದ ಬಸವರಾಜ ಪಡಶೆಟ್ಟಿ, ಬಸವರಾಜ ದೇವತ್ಕಲ್, ಪ್ರವೀಣ ವಗ್ಗೆ, ನಾಗಣ್ಣ ನಂದೂರ ಒತ್ತಾಯಿಸಿದ್ದಾರೆ.
--..ಕೋಟ್..
ಗೊಬ್ಬುರ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಶಾಲೆಯ ಮುಖ್ಯ ಗುರುಗಳ ನಕಲಿ ಸಹಿ ಮಾಡಿ ತನ್ನ ಪತ್ನಿ ಖಾತೆಗೆ ಹಣ ವರ್ಗಾಯಿಸಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಖುದ್ದಾಗಿ ನಮ್ಮ ಕಚೇರಿ ತಂಡ ಶಾಲೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿದೆ. ತಂಡದ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.-ಪ್ರತಿಭಾ ಪ್ರಿಯದರ್ಶಿನಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಫಜಲಪುರ.
