ಸಾರಾಂಶ
ಸ್ವಂತ ಖರ್ಚಿನಲ್ಲಿ ಬೋರ್‌ವೆಲ್ ಕೊರೆತು, ನೀರಿನ ಕೊರತೆಗೆ ಪರಿಹಾರ
ಕನ್ನಡಪ್ರಭ ವಾರ್ತೆ ಯಲಬುರ್ಗಾತಾಲೂಕಿನ ಗಾಣದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮುದಕಪ್ಪ ಮಜ್ಜಿಗೆ ಶನಿವಾರ ರಾತ್ರಿ ಶಾಲೆಯಲ್ಲಿ ಬೋರೆವೆಲ್ ಕೊರೆಯಿಸಿ ವಿದ್ಯಾರ್ಥಿಗಳಿಗೆ ನೀರಿನ ದಾಹ ಇಂಗಿಸಿದ್ದಾರೆ.
ಶಾಲೆಯಲ್ಲಿ ೧ರಿಂದ ೮ನೇ ತರಗತಿ ವರೆಗೆ ನಡೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಬರೋಬ್ಬರಿ ೭೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಾಲೂಕು ಕೇಂದ್ರದಿಂದ ಸುಮಾರು ೫೦ ಕಿಮೀ ದೂರದಲ್ಲಿರುವ ಗಡಿ ಗ್ರಾಮವಾದ ತೀರಾ ಹಿಂದುಳಿದ ಗ್ರಾಮೀಣ ಭಾಗದ ಶಾಲೆಗಳಲ್ಲಿ ಬಹುದಿನಗಳಿಂದ ನೀರಿನ ಅಭಾವ ಕಾಣಿಸಿತ್ತು. ಕಳೆದ ವಾರದ ಹಿಂದೆ ಶಾಲೆಯಲ್ಲಿ ಶಾಲಾ ಮೇಲುಸ್ತುವಾರಿ ಅಭಿವೃದ್ಧಿ ಸಮಿತಿ ರಚಿಸಿದ ಬಳಿಕ ಅಧ್ಯಕ್ಷರು ತಮ್ಮ ಸ್ವಂತ ಖರ್ಚಿನಲ್ಲಿ ಇಂತಹದೊಂದು ವಿನೂತನ ಕಾರ್ಯ ಮಾಡಿದ್ದಾರೆ.₹೫೦ರಿಂದ ೬೦ ಸಾವಿರ:
ಇಂದಿನ ದುಬಾರಿ ಕಾಲದಲ್ಲಿ ಸ್ವಯಂ ಪ್ರೇರತವಾಗಿ ನಿರ್ಣಯ ತೆಗೆದುಕೊಳ್ಳುವುದು ವಿರಳ. ದುಡ್ಡು ಖರ್ಚು ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲೂ ಮಕ್ಕಳ ಹಿತದೃಷ್ಟಿಯಿಂದ ಎಸ್‌ಡಿಎಂಸಿ ಅಧ್ಯಕ್ಷ ಶಾಲೆಯ ಆವರಣದಲ್ಲಿ ೨೫೦ ಅಡಿ ಬೋರ್‌ವೆಲ್ ಕೊರೆಯಿಸಿ, ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಕುಡಿಯಲು ಯೋಗ್ಯ ನೀರನ್ನು ದೊರಕಿಸಿಕೊಟ್ಟಿದ್ದಾರೆ. ಸುಮಾರು ₹೫೦ರಿಂದ ೬೦ ಸಾವಿರ ಖರ್ಚು ಮಾಡಿದ್ದಾರೆ. ಸ್ವಯಂ ಪ್ರೇರಿತವಾಗಿ ಶಾಲಾ ಅಭಿವೃದ್ಧಿಗೆ ಶ್ರಮಿಸಲು ಪಣ ತೊಡಲಾಗಿದೆ.ಗಾಣದಾಳ ಸ.ಹಿ.ಪ್ರಾ. ಶಾಲೆಯಲ್ಲಿ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಪ್ರಸಕ್ತ ವರ್ಷದಲ್ಲಿ ೭೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುದಿನಗಳ ನೀರಿನ ಸಮಸ್ಯೆ ನೀಗಿಸಿದ ಅಧ್ಯಕ್ಷರ ಕಾರ್ಯಕ್ಕೆ ಇಡೀ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.ಗಾಣದಾಳ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ನೀರಿನ ಸಮಸ್ಯೆ ನೀಗಿಸಲು ಮಕ್ಕಳಿಗೆ ಅನುಕೂಲ ಮಾಡಿದ್ದೇನೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದೆಂಬ ಕಳಿಕಳಿ ಇಟ್ಟುಕೊಂಡು ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಎಲ್ಲವನ್ನು ಸರ್ಕಾರವೇ ಮಾಡಬೇಕೆಂದರೆ ಹೇಗೆ? ನಾವು ಸರ್ಕಾರದ ಜತೆ ಕೈ ಜೋಡಿಸಬೇಕು ಎನ್ನುತ್ತಾರೆ
ಮುದಕಪ್ಪ ಮಜ್ಜಿಗೆ.