ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರರಾಜ್ಯ ಸರ್ಕಾರ ಸರ್ಕಾರಿ ಬಸ್ ಪ್ರಯಾಣ ದರವನ್ನು ಶೇ.೧೫ ರಷ್ಟು ಏರಿಕೆ ಮಾಡಲು ತೆಗೆದುಕೊಂಡಿರುವ ನಿರ್ಧಾರವನ್ನು ಖಂಡಿಸಿ ನಗರದಲ್ಲಿ ಶನಿವಾರ ಸೋಷಿಯಲ್ ಡೆಮಾಕ್ರಟಿಕ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಸಾರಿಗೆ ಸಚಿವ ರಾಮಲಿಂಗರೆಡ್ಡಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು, ಪ್ರಯಾಣಿಕರಿಗೆ ಕರಪತ್ರ ಹಂಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಸೈಯದ ಆರೀಫ್ ಅವರು, ಈ ಅನ್ಯಾಯದ ದರ ಏರಿಕೆಗೆ ಜನ ಸಾಮಾನ್ಯರು, ವಿಶೇಷವಾಗಿ ಕಾರ್ಮಿಕ ವರ್ಗ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿರುವ ದೈನಂದಿನ ಪ್ರಯಾಣಿಕರಿಗೆ ದೊಡ್ಡ ಹೊರೆಯಾಗಿದೆ ಎಂದರು.
ಜನರು, ಈಗಾಗಲೇ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ನಿರ್ವಹಣಾ ವೆಚ್ಚಗಳಿಂದ ಹೆಣಗಾಡುತ್ತಿದ್ದಾರೆ. ಅದರ ಜೊತೆಗೆ ಬಸ್ ದರ ಏರಿಕೆಯು ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ ಎಂದರು. ಈ ಏರಿಕೆಯಿಂದ ಶಕ್ತಿ ಯೋಜನೆಯ ಪಲಾನುಭವಿ ಮಹಿಳೆಯರಿಗೆ ಉಚಿತ ಬಸ್ ಯೋಜನೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. ಇದೊಂದು ಪೊಳ್ಳು ವಾದ. ಏಕೆಂದರೆ ಅತ್ಯಧಿಕ ಬಸ್ ಪ್ರಯಾಣಿಕರು ಪುರುಷರೇ ಆಗಿದ್ದು ಅವರು ಈ ಹೆಚ್ಚಳದ ಭಾರವನ್ನು ಹೊರಬೇಕಾಗಿದೆ. ಇದು ಪ್ರತಿ ಕುಟುಂಬಕ್ಕೂ ಹೊರೆ ಆಗಲಿದೆ ಎಂದರು.ಸಾರ್ವಜನಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ಸರ್ಕಾರ ಈ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು, ಸಾರಿಗೆ ಕ್ಷೇತ್ರದ ಆರ್ಥಿಕ ಕೊರತೆಯನ್ನು ನಿರ್ವಹಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಹೇಶ್, ಮುಖಂಡರಾದ ಖಲೀಲ್ ಅಹಮ್ಮದ್, ನಯಾಜ್, ಸಿ.ಕೆ. ಉಮರ್, ಇರ್ಪಾನ್ ಇತರರು ಭಾಗವಹಿಸಿದ್ದರು.