ಸಾರಾಂಶ
ರಾಮನಗರ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಮತ್ತು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಜಂಟಿ ಸಭೆಯಲ್ಲಿ ಮುಂದಿನ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧೆ ಮಾಡುವ ಬಗ್ಗೆ ಜಿಲ್ಲಾ ಮತ್ತು ಕ್ಷೇತ್ರ ಸಮಿತಿ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
ಬಳಿಕ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಮಜೀದ್, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಉದ್ದೇಶದೊಂದಿಗೆ ದಲಿತ ಮತ್ತು ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿತು. ಆದರೆ ಅಲ್ಪಸಂಖ್ಯಾತರ ಮತಗಳನ್ನು ಪಡೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಟೀಕಿಸಿದರು.45 ವಿಶ್ವ ವಿದ್ಯಾಲಯಗಳಲ್ಲಿ, ಒಬ್ಬನೇ ಒಬ್ಬ ಮುಸ್ಲಿಂ ಉಪ ಕುಲಪತಿ ಇಲ್ಲ. ಸರ್ಕಾರದ ಈ ನಿಲುವು ಅತ್ಯಂತ ಖಂಡನೀಯ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನಾವು ಮೌನವಹಿಸಿ ಸುಮ್ಮನೆ ಕುಳಿತು ಕೊಳ್ಳಲು ಸಾಧ್ಯವಿಲ್ಲ. ನಮ್ಮ ಪಕ್ಷ ಹೋರಾಟ ಮತ್ತು ಚುನಾವಣಾ ರಾಜಕಾರಣ ಈ ಎರಡರಲ್ಲೂ ಬಹಳ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದು ಹೇಳಿದರು.
ಶೀಘ್ರದಲ್ಲೇ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಉಪ ಚುನಾವಣೆಯಲ್ಲಿ ಎಸ್ ಡಿಪಿಐ ತನ್ನದೇ ಆದ ಅಭ್ಯರ್ಥಿಯನ್ನು ಸ್ಪರ್ಧಿಸುವ ಕುರಿತು ರಾಜ್ಯ ಸಮಿತಿಯಲ್ಲಿ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಉಪ ಚುನಾವಣೆಯನ್ನು ಎದುರಿಸಲು ಸಿದ್ಧರಾಗಬೇಕು ಎಂದು ಮಜೀದ್ ಕರೆ ನೀಡಿದರು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ, ರಾಜ್ಯ ಸಮಿತಿ ಸದಸ್ಯರಾದ ಅಬ್ರಾರ್ ಆಹಮ್ಮದ್, ಜಿಲ್ಲಾಧ್ಯಕ್ಷರಾದ ಶಹಬಾಜ್, ಪ್ರಧಾನ ಕಾರ್ಯದರ್ಶಿಯಾದ ಅಮ್ಜದ್ , ಕಾರ್ಯದರ್ಶಿಯಾದ ವಸೀಂ ಪಾಷ, ಜಿಲ್ಲಾ ಸಮಿತಿ ಸದಸ್ಯರಾದ ನಿಸಾರ್ ಆಹಮ್ಮದ್, ವಸೀಮ್ ಖಾನ್, ಚನ್ನಪಟ್ಟಣ ತಾಲೂಕು ಅಧ್ಯಕ್ಷರಾದ ಮೊಹಮ್ಮದ್ ಫಾಜೀಲ್, ಕಾರ್ಯದರ್ಶಿಯಾದ ಆಹಮ್ಮದ್ ಷರೀಫ್ ಹಾಗೂ ತಾಲೂಕು ಸಮಿತಿ ಸದಸ್ಯರು ಉಪಸ್ಥಿರಿದ್ದರು.
23ಕೆಆರ್ ಎಂಎನ್ 1.ಜೆಪಿಜಿಎಸ್ ಡಿಪಿಐ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಮತ್ತು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರ ಸಮಿತಿಯ ಜಂಟಿ ಸಭೆ ನಡೆಯಿತು.