ರಾಜ್ಯ ಬಜೆಟ್ ನಲ್ಲಿ ಮೂಲಭೂತ ಸೌಕರ್ಯಗಳ ಆದ್ಯತೆಗೆ ಎಸ್‌ಡಿಪಿಐ ಆಗ್ರಹ

| Published : Mar 04 2025, 12:34 AM IST

ಸಾರಾಂಶ

ರಾಜ್ಯ ಸರ್ಕಾರ ಮಾ. 7ರಂದು ಮಂಡಿಸುವ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬಲ ತುಂಬಬೇಕು ಹಾಗೂ ಕೊಡಗಿನ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಮಾ.7 ರಂದು ಮಂಡಿಸುವ ಬಜೆಟ್ ನಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬಲ ತುಂಬಬೇಕು ಹಾಗೂ ಕೊಡಗಿನ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲೆಯ ಜನತಾ ಬಜೆಟ್-2025 ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಅಮಿನ್ ಮೊಹಿಸಿನ್, ಕಲ್ಯಾಣ ರಾಜ್ಯಕ್ಕಾಗಿ ಜನತಾ ಬಜೆಟ್-2025 ಎನ್ನುವ ಬೇಡಿಕೆಗಳ ಕೈಪಿಡಿಯನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಬಿಡುಗಡೆ ಮಾಡಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನಕ್ಕೆ ಪಕ್ಷ ಮುಂದಾಗಿದೆ ಎಂದರು.

ಕೊಡಗು ವಿವಿ ಉಳಿಸಿ:

ಕೊಡಗು ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದ ಒಟ್ಟು 9 ನೂತನ ವಿವಿಗಳನ್ನು ಮುಚ್ಚುವ ದೂರದೃಷ್ಟಿ ರಹಿತವಾದ ಚಿಂತನೆಯನ್ನು ಸರ್ಕಾರ ಮಾಡಿದೆ. ಶಿಕ್ಷಣ ಕ್ಷೇತ್ರದ ಪ್ರಗತಿಯ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗಬೇಕಾದ ಸರ್ಕಾರ ವಿವಿಗಳನ್ನು ಮುಚ್ಚುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಕೊಡಗು ವಿವಿ ರದ್ದುಗೊಳಿಸುವ ಸಚಿವ ಸಂಪುಟ ಸಮಿತಿಯ ಪ್ರಸ್ತಾಪವನ್ನು ಕೈಬಿಡಬೇಕೆಂದು ಒತ್ತಾಯಿಸಿದರು.

ಕಾನೂನು ಕಾಲೇಜು ಬೇಕು:

ಕೊಡಗಿನ ಆಸಕ್ತ ವಿದ್ಯಾರ್ಥಿಗಳು ಕಾನೂನಿನ ಶಿಕ್ಷಣವನ್ನು ಪಡೆಯುವ ಸಲುವಾಗಿ ದೂರದೂರುಗಳನ್ನು ಅವಲಂಬಿಸಬೇಕಾಗಿದೆ. ಆದ್ದರಿಂದ ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಜೆಟ್‌ನಲ್ಲಿ ಕೊಡಗಿಗೊಂದು ಕಾನೂನು ಕಾಲೇಜು ಘೋಷಿಸಬೇಕು. ಐಪಿಎಸ್, ಐಎಎಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಈ ಹಿಂದಿನ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಶೇ.4 ಹಣಕಾಸನ್ನು ಮೀಸಲಿಡಲಾಗಿತ್ತು, ಪ್ರಸ್ತುತ ಶೇ.15 ರಷ್ಟು ಹಣವನ್ನು ಒದಗಿಸಬೇಕು. ಮಡಿಕೇರಿಯಲ್ಲಿ ನೂತನ

ಎಂಆ‌‍ರ್‌ಐ ಸ್ಕ್ಯಾನಿಂಗ್ ಅಳವಡಿಸಿದ್ದರು, ರೋಗಿಗಳು ಸೌಲಭ್ಯಕ್ಕಾಗಿ ಮೂರು ನಾಲ್ಕು ವಾರಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಸಮಸ್ಯೆಗೆ ಪರಿಹಾರ ಒದಗಿಸುವ ಅಗತ್ಯವಿದೆ. ಕೊಡಗು ಜಿಲ್ಲೆಯಲ್ಲಿ ಕ್ಯಾನ್ಸರ್ ಸೆಂಟರ್ ತೆರೆಯಲು ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಬೇಕು.

ಎಸ್‌ಡಿಪಿಐ ಪ್ರಧಾನ‌ ಕಾರ್ಯದರ್ಶಿ ಉಸ್ಮಾನ್ ಸುಂಟಿಕೊಪ್ಪ, ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ, ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾ‌, ಜಿಲ್ಲಾ ಸಮಿತಿ ಸದಸ್ಯರಾದ ಮೇರಿ ವೇಗಸ್ ಸುದ್ದಿಗೋಷ್ಠಿಯಲ್ಲಿದ್ದರು.