ಲೋಕಸಭಾ ಚುನಾವಣೆ: ಎಸ್‌ಡಿಪಿಐ ಸ್ಪರ್ಧಿಸದೆ ಮತವಿಭಜನೆ ತಡೆ ತಂತ್ರಗಾರಿಕೆ!

| Published : Apr 07 2024, 01:50 AM IST

ಲೋಕಸಭಾ ಚುನಾವಣೆ: ಎಸ್‌ಡಿಪಿಐ ಸ್ಪರ್ಧಿಸದೆ ಮತವಿಭಜನೆ ತಡೆ ತಂತ್ರಗಾರಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

2023ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಸ್ಲಿಂ ಮತಗಳು ಧ್ರುವೀಕರಣಗೊಂಡಿದ್ದವು. ರಾಜ್ಯದ 16 ಕಡೆ ಎಸ್‌ಡಿಪಿಐ ಸ್ಪರ್ಧಿಸಿದರೂ ಗಮನಾರ್ಹ ಮತ ಸೆಳೆದಿರಲಿಲ್ಲ. ಅವಿಭಜಿತ ದ.ಕ. ಜಿಲ್ಲೆಯ ಆರು ಕಡೆಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸಿತ್ತು.

ಆತ್ಮಭೂಷಣ್‌

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಲೋಕಸಭಾ ಕ್ಷೇತ್ರ ಸೇರಿದಂತೆ ಕರ್ನಾಟಕದಲ್ಲಿ ನಾಮಪತ್ರ ಸಲ್ಲಿಕೆ ಕೊನೆಗೊಂಡಿದೆ. ಬಹುತೇಕ ಕಡೆಗಳಲ್ಲಿ ಬಿಜೆಪಿ-ಕಾಂಗ್ರೆಸ್‌, ಜೆಡಿಎಸ್‌ ನಡುವೆ ಹಣಾಹಣಿಗೆ ವೇದಿಕೆ ಸಿದ್ಧವಾದರೂ ಈ ಬಾರಿ ಎಸ್‌ಡಿಪಿಐ(ಸೋಶಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ) ಸ್ಪರ್ಧಿಸದೆ ಮುಸ್ಲಿಂ ಮತ ವಿಭಜನೆ ತಡೆಗೆ ತಂತ್ರಗಾರಿಕೆ ನಡೆಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಬಿಜೆಪಿಯ ಭದ್ರಕೋಟೆ ಎನಿಸಿದ ಕರಾವಳಿ ಜಿಲ್ಲೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಮಣಿಸಲು ಈ ತಂತ್ರಗಾರಿಕೆ ಬಳಸಲು ಎಸ್‌ಡಿಪಿಐ ಮುಖಂಡರು ಮುಂದಾಗಿದ್ದಾರೆ. ಅದರಲ್ಲೂ ಎಸ್‌ಡಿಪಿಐ ತಳವೂರುತ್ತಿರುವ ದ.ಕ.ಜಿಲ್ಲೆಯಲ್ಲಿ ಈ ಬಾರಿ ಹೇಗಾದರೂ ಮಾಡಿ ಮುಸ್ಲಿಂ ಮತ ವಿಭಜನೆಯನ್ನು ತಡೆದು ಬಿಜೆಪಿ ಗೆಲುವಿಗೆ ಲಗಾಮು ಹಾಕಲು ಎಸ್‌ಡಿಪಿಐ ಹೊರಟಿದೆ.

1991ರಿಂದ ಇಲ್ಲಿವರೆಗೂ ಲೋಕಸಭಾ ಚುನಾವಣೆಯಲ್ಲಿ ದ.ಕ.ದಲ್ಲಿ ಬಿಜೆಪಿ ಗೆಲ್ಲುತ್ತಲೇ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಈ ಬಾರಿ ಶತಾಯಗತಾಯ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್‌ ಹೊರತುಪಡಿಸಿ ಸಮಾನ ಮನಸ್ಕ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಮತ ವಿಭಜನೆ ತಡೆಯಲು ತಂತ್ರಗಾರಿಕೆ ನಡೆಸಿವೆ. ಇದರ ಫಲವೇ ಎಸ್‌ಡಿಪಿಐ, ಸಿಪಿಎಂ ಪಕ್ಷಗಳು ತಮ್ಮ ಉಮೇದುವಾರಿಕೆ ನಿಲ್ಲಿಸಿಲ್ಲ.

ಕಳೆದ ಎರಡು ಚುನಾವಣೆಯಲ್ಲಿ ಮುಸ್ಲಿಮರ ಪರವಾಗಿ ಧ್ವನಿ ಎತ್ತಿದ್ದ ಎಸ್‌ಡಿಪಿಐ ಈ ಬಾರಿ ಕೇರಳದಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಿದೆ. ದೇಶದ 18 ಕಡೆ ಮಾತ್ರ ಸ್ಪರ್ಧಿಸುವುದಾಗಿ ಎಸ್‌ಡಿಪಿಐ ಮುಖಂಡರು ಹೇಳಿದ್ದು, ದ.ಕ.ದಲ್ಲಿ ನಾಮಪತ್ರ ಸಲ್ಲಿಕೆ ಅಂತಿಮ ದಿನದಲ್ಲೂ ಎಸ್‌ಡಿಪಿಐ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.

ಹಿಂದೆ ಮುಸ್ಲಿಂ ಮತ ಒಡೆದಿತ್ತು: 2019ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಮಹಮ್ಮದ್‌ ಇಲ್ಯಾಸ್‌ ತುಂಬೆ ಕಣಕ್ಕೆ ಇಳಿದಿದ್ದು, 46,839 ಗಮನಾರ್ಹ ಮತ ಪಡೆದಿದ್ದರು. ಆಗ ಮುಸ್ಲಿಂ ಮತ ವಿಭಜನೆಯಾಗಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಹನೀಫ್‌ ಖಾನ್‌ ಕೊಡಾಜೆ 27,254 ಮತ ಪಡೆದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ಮುಸ್ಲಿಂ ಮತಗಳು ಎಸ್‌ಡಿಪಿಐ ಪಾಲಾಗಿದ್ದು, ಇದು ಕಾಂಗ್ರೆಸ್‌ ಮತಗಳಿಗೆ ಕನ್ನ ಹಾಕಿರುವುದು ಸ್ಪಷ್ಟವಾಗಿತ್ತು. ಇದನ್ನು ತಡೆಯಲು ಈ ಬಾರಿ ಕಾಂಗ್ರೆಸ್‌ ಸಹಿತ ಎಡಪಕ್ಷಗಳು ತಂತ್ರಗಾರಿಕೆ ಮೊರೆ ಹೋಗಿವೆ.ಬೆಂಬಲ ಇನ್ನೂ ಅಂತಿಮವಾಗಿಲ್ಲ: ಮುಸ್ಲಿಂ ಮತ ವಿಭಜನೆ ತಡೆಯಲು, ಬಿಜೆಪಿ ವಿರುದ್ಧ ಈ ಬಾರಿ ಕರ್ನಾಟಕ ಹಾಗೂ ಕೇರಳದಲ್ಲಿ ಎಸ್‌ಡಿಪಿಐ ಸ್ಪರ್ಧಿಸುತ್ತಿಲ್ಲ. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಹೊರತುಪಡಿಸಿ ಕಾಂಗ್ರೆಸ್‌, ಸಿಪಿಎಂ, ಬಿಎಸ್ಪಿ, ಪಕ್ಷೇತರರು ನಮ್ಮ ಬೆಂಬಲ ಕೋರುತ್ತಿದ್ದಾರೆ. ಇನ್ನೂ ನಾವು ಯಾವುದೇ ಪಕ್ಷಕ್ಕೆ ಬೆಂಬಲ ಘೋಷಿಸಿಲ್ಲ. ಚುನಾವಣೆ ಸಮೀಪಿಸಿದಾಗ ನಿರ್ಧರಿಸುತ್ತೇವೆ ಎನ್ನುತ್ತಾರೆ ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅನ್ವರ್‌ ಸಾದತ್‌.

ಅಸೆಂಬ್ಲಿ ಚುನಾವಣೆಯಂತೆ ಮತ ಧ್ರುವೀಕರಣ ಪ್ರಯತ್ನ

2023ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಮುಸ್ಲಿಂ ಮತಗಳು ಧ್ರುವೀಕರಣಗೊಂಡಿದ್ದವು. ರಾಜ್ಯದ 16 ಕಡೆ ಎಸ್‌ಡಿಪಿಐ ಸ್ಪರ್ಧಿಸಿದರೂ ಗಮನಾರ್ಹ ಮತ ಸೆಳೆದಿರಲಿಲ್ಲ. ಅವಿಭಜಿತ ದ.ಕ. ಜಿಲ್ಲೆಯ ಆರು ಕಡೆಗಳಲ್ಲಿ ಎಸ್‌ಡಿಪಿಐ ಸ್ಪರ್ಧಿಸಿತ್ತು.

ರಾಜ್ಯದಲ್ಲಿ ಬಿಜೆಪಿ ಆಡಳಿತದ ವಿರೋಧಿ ಅಲೆ, ಗ್ಯಾರಂಟಿ ಭರವಸೆಗಳು ಕಾಂಗ್ರೆಸ್‌ ಗೆಲುವಿನ ದಡ ತಲುಪಿತ್ತು. ಮುಖ್ಯವಾಗಿ ಬಿಜೆಪಿಯ ಹಿಂದುತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಮುಸ್ಲಿಂ ಮತಗಳು ಸದ್ದಿಲ್ಲದೆ ಧ್ರುವೀಕರಣಗೊಂಡಿದ್ದವು. ಒಂದು ವರ್ಗದ ಮತಗಳು ಒಂದು ಪಕ್ಷಕ್ಕೆ ವಾಲಿದ ಕಾರಣ ಕಾಂಗ್ರೆಸ್‌ಗೆ ಬಹುಮತದ ಅಧಿಕಾರ ಸಾಧ್ಯವಾಗಿತ್ತು. ಈ ಬಾರಿ ಅಸಂಬ್ಲಿ ಚುನಾವಣೆಯಲ್ಲಿ ಆದಂತೆ ಮುಸ್ಲಿಂ ಮತಗಳ ವಿಭಜನೆ ತಡೆ ಯ ಭಾಗವಾಗಿ ಎಸ್‌ಡಿಪಿಐ ಲೋಕಸಭಾ ಚುನಾವಣಾ ಸ್ಪರ್ಧೆಯಿಂದ ದೂರ ಸರಿದಿದೆ ಎನ್ನುವುದು ಮುಖಂಡರ ಅಭಿಪ್ರಾಯ.