ಅಮಿತ್‌ ಶಾ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಬೇಕು.

ಹೊಸಪೇಟೆ: ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಅವರನ್ನು ಸಂಸತ್‌ ಅಧಿವೇಶನದಲ್ಲಿ ಅಮಾನಿಸುವ ಹೇಳಿಕೆ ನೀಡಿದ್ದಾರೆ. ಕೂಡಲೇ ಅಮಿತ್‌ ಶಾ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಒತ್ತಾಯಿಸಿ ಎಸ್‌ಡಿಪಿಐ ಪಕ್ಷದ ವತಿಯಿಂದ ನಗರದ ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಭಾರತ ರತ್ನ ಅಂಬೇಡ್ಕರ್‌ ಅವರನ್ನು ಅವಮಾನಿಸಿದ ಆರೆಸ್ಸೆಸ್‌ ಮನಸ್ಥಿತಿಯ ಅಮಿತ್‌ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಸಮಾನತೆಯ ಹರಿಕಾರ ಅಂಬೇಡ್ಕರ್ ಅವರನ್ನು ಟೀಕಿಸುವ ಹಕ್ಕು ಅಮಿತ್‌ ಶಾ ಅವರಿಗೆ ಇಲ್ಲ. ಈ ಮೊದಲು ಅಮಿತ್‌ ಶಾ ಸಂವಿಧಾನ ಓದಲಿ. ಪ್ರಧಾನಿ ನರೇಂದ್ರ ಮೋದಿ ಅಮಿತ್‌ ಶಾ ಅವರ ರಾಜೀನಾಮೆ ಪಡೆಯಬೇಕು. ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಡುಗೆ ನೀಡಿರುವ ಅಂಬೇಡ್ಕರ್‌ ಅವರ ಬಗ್ಗೆ ಟೀಕೆ ಮಾಡಿರುವ ಅಮಿತ್‌ ಶಾ ಕೂಡಲೇ ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಅಮಿತ್‌ ಶಾ ಅವರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಅಂಬೇಡ್ಕರ್‌ ಜಿಂದಾಬಾದ್‌ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೇಂದ್ರ ಸಚಿವ ಅಮಿತ್‌ ಶಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷ ನೂರ್‌ ಅಹಮದ್‌, ಕಾರ್ಯದರ್ಶಿ ಸದ್ದಾಂ ಹುಸೇನ್, ಚಿತ್ರದುರ್ಗ ಎಸ್‌ಡಿಪಿಐ ಅಧ್ಯಕ್ಷ ಶ್ರೀನಿವಾಸ್‌ ಬಾಳೆಕಾಯಿ, ಮುಖಂಡರಾದ ಮಹಮ್ಮದ್‌ ಖಾಜಾ ನಿಯಾಜಿ, ಶಿವಕುಮಾರ, ಹನುಮೇಶ್‌, ಗೌಸಿಯಾ ಬೇಗಂ, ಖಾದರ್‌. ಹೊನ್ನೂರವಲಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಹೊಸಪೇಟೆಯಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.