ನಗರದ ರೈಲ್ವೆ ನಿಲ್ದಾಣ ವೃತ್ತದಿಂದ ಮಂಡಿಪೇಟೆವರೆಗಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ತಕ್ಷಣ ದುರಸ್ತಿ ಮಾಡುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ನಗರದ ರೈಲ್ವೆ ನಿಲ್ದಾಣ ವೃತ್ತದಿಂದ ಮಂಡಿಪೇಟೆವರೆಗಿನ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ತಕ್ಷಣ ದುರಸ್ತಿ ಮಾಡುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ಮುಖ್ಯ ರಸ್ತೆಯಾದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಸೇರಿದ ಎಸ್‌ಡಿಪಿಐ ಕಾರ್ಯಕರ್ತರು ಶಾಸಕ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಕೂಡಲೇ ರಸ್ತೆ ದುರಸ್ತಿಗೊಳಿಸಿ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮ್ಜದ್ ಷರೀಫ್ ಮಾತನಾಡಿ, ರೈಲ್ವೆ ಸ್ಟೇಷನ್ ರಸ್ತೆಯು ನಗರದ ಪ್ರಮುಖ ರಸ್ತೆಯಾಗಿದೆ. ರೈಲು ಪ್ರಯಾಣಿಕರೂ ಸೇರಿದಂತೆ ಈ ರಸ್ತೆಯಲ್ಲಿ ಸಾವಿರಾರು ಮಂದಿ ಪ್ರತಿನಿತ್ಯ ಪ್ರಯಾಣಿಸುತ್ತಾರೆ. ಚೆನ್ನಾಗಿದ್ದ ರಸ್ತೆಯನ್ನು ಪೈಪ್‌ಲೈನ್ ಕಾಮಗಾರಿಗೆ ಅಗೆದರು. ಆದರೆ, ಅದನ್ನು ಹಿಂದಿನಂತೆ ದುರಸ್ಥಿ ಮಾಡದ ಪರಿಣಾಮ ರಸ್ತೆಯಲ್ಲಿ ಮಂಡಿಯುದ್ದ ಗುಂಡಿ ಬಿದ್ದು, ಧೂಳುಮಯವಾಗಿದೆ ಎಂದು ದೂರಿದರು.

ರಸ್ತೆ ಗುಂಡಿಬಿದ್ದ ಪರಿಣಾಮ ಸಾಕಷ್ಟು ಅಪಘಾತಗಳು ನಡೆದು, ವಾಹನ ಸವಾರರು ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ. ರಸ್ತೆಯನ್ನು ಸರಿಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಐದಾರು ಬಾರಿ ಮನವಿ ಸಲ್ಲಿಸಿದರೂ ಸಹ ಬೇಜವಾಬ್ದಾರಿ ತೋರಿದ್ದಾರೆ ಎಂದು ಕಿಡಿಕಾರಿದರು.

ಹಬ್ಬ ಹರಿದಿನಗಳ ನೆಪದಲ್ಲಿ ಹಲವು ರಸ್ತೆಗಳನ್ನು ನಗರಸಭೆ ದುರಸ್ತಿ ಪಡಿಸಿದೆ. ಆದರೆ, ಪ್ರಮುಖ ರಸ್ತೆಯಾದ ರೈಲ್ವೆ ನಿಲ್ದಾಣದ ರಸ್ತೆಯ ದುರಸ್ತಿಗೆ ನಗರಸಭೆ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ. ವಾಹನ ಸವಾರರು ಎದ್ದು, ಬಿದ್ದು ಸಾಗುವ ದುಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಹಲವು ಅಪಘಾತವಾಗಿ ಗಾಯ ಮಾಡಿಕೊಂಡಿದ್ದಾರೆ. ಆಂಬ್ಯುಲೆನ್ಸ್, ಶಾಲಾ ವಾಹನ ಇಲ್ಲಿ ಸಂಚರಿಸಲು ಸಾಧ್ಯವಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ರಸ್ತೆ ದುರಸ್ತಿ ಕಾಮಗಾರಿ ಆರಂಭಿಸಬೇಕು ಇಲ್ಲದಿದ್ದರೆ ನಗರಸಭೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಸೈಯದ್ ಮತೀನ್, ಜಿಲ್ಲಾ ಕಾರ್ಯದರ್ಶಿ ಸೈಯದ್ ಅಸಾದುಲ್ಲಾ, ತಾಲ್ಲೂಕು ಅಧ್ಯಕ್ಷ ಸುಲ್ತಾನ್ ಅಲಿ ಖಾನ್, ಮುಖಂಡರಾದ ಆರೀಫ್ ಪಾಷ, ನದೀಮ್ ಖಾನ್, ಮೆಹಬೂಬ್ ಪಾಷಾ, ಮೊಹಮ್ಮದ್ ಮತೀನ್, ರಿಜ್ವಾನ್ ಪಾಷ ಮತ್ತಿತರರು ಭಾಗವಹಿಸಿದ್ದರು.