- ದೆಹಲಿ ಹೋರಾಟನಿರತರ ಮೇಲೆ ದೌರ್ಜನ್ಯಕ್ಕೆ ಅಫ್ಸರ್ ಕೊಡ್ಲಿಪೇಟೆ ತೀವ್ರ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಸಮಗ್ರ ತನಿಖೆಗೆ ಒಪ್ಪಿಸುವಂತೆ ಹಾಗೂ ದೆಹಲಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಟನಿರತ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಎಸ್‌ಡಿಪಿಐ, ಯಂಗ್ ಡೆಮಾಕ್ರೆಟಿಕ್ಸ್‌ ಸಂಘಟನೆ, ದಲಿತ ಸಂಘರ್ಷ ಸಮಿತಿ ಇತರೆ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಜಿಲ್ಲಾಧ್ಯಕ್ಷ ಎ.ಆರ್.ತಾಹೀರ್‌, ಯಂಗ್‌ ಡೆಮಾಕ್ರೆಟಿಕ್ಸ್ ಸಂಘಟನೆಯ ಸಲೀಂ ಮಲ್ಲಿಕ್‌, ಡಿಎಸ್‌ಎಸ್‌ನ ಮಲ್ಲಿಕಾರ್ಜುನ ಇತರರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.

ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಸಮಗ್ರ ತನಿಖೆಗೊಳಪಡಿಸಬೇಕು. ಪ್ರಕರಣದಲ್ಲಿರುವ ಎಲ್ಲ ಆರೋಪಿಗಳನ್ನು ಪತ್ತೆ ಮಾಡಿ, ಅತ್ಯಂತ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮೇಲೆ 22 ವಿದ್ಯಾರ್ಥಿಗಳ ಸಾವಿಗೆ ಕಾರಣರಾದ ಹಿನ್ನೆಲೆ ಕೊಲೆ ಆರೋಪದಡಿ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನೀಟ್ ಹಗರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಕುಟುಂಬಕ್ಕೆ ನ್ಯಾಯ ಮತ್ತು ಸೂಕ್ತ ಪರಿಹಾರ ಒದಗಿಸಬೇಕು. ದೌರ್ಜನ್ಯದ ಬಗ್ಗೆ ಸ್ವತಂತ್ರವಾಗಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು. ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರತಿಭಟನಾಕಾರರ ಮೇಲೆ ದಾಖಲಿಸಿದ ಸುಳ್ಳು ಕೇಸ್‌ಗಳನ್ನು ಹಿಂಪಡೆಯಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ತೀವ್ರ ಸ್ವರೂಪದ ಹೋರಾಟ ಇಡೀ ದೇಶಾದ್ಯಂತ ನಡೆಯಲಿದೆ ಎಂದು ಅವರು ಎಚ್ಚರಿಸಿದರು.


ಎಸ್‌ಡಿಪಿಐ ಉಪಾಧ್ಯಕ್ಷ ರಿಯಾಜ್ ಅಹಮದ್ ರಿಝಿ, ಕಾರ್ಯದರ್ಶಿ ಮಹಮ್ಮದ್ ಸಾದ್, ಮಹಮ್ಮದ್ ಮೊಹಸೀನ್, ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹಮದ್, ಯಂಗ್ ಡೆಮಾಕ್ರೆಟ್ಸ್ ರಾಜ್ಯ ಸಮಿತಿ ಸದಸ್ಯ ಸಲೀಂ ಮಲಿಕ್, ಡಿಎಸ್ಸೆಸ್ ನ ಮಲ್ಲಿಕಾರ್ಜುನ, ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಮುಕಂಡರು, ಪದಾಧಿಕಾರಿಗಳು ಹೋರಾಟದಲ್ಲಿ ಭಾಗಿಯಾಗಿ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

- - -

(ಟಾಪ್‌ ಕೋಟ್‌) ನೀಟ್ ವ್ಯವಸ್ಥೆಯನ್ನೇ ದೇಶದಲ್ಲಿ ರದ್ದುಗೊಳಿಸಬೇಕು. ರಾಜ್ಯಮಟ್ಟದ ಪ್ರವೇಶ ಪರೀಕ್ಷೆ ಮೂಲಕ ಪ್ರವೇಶ ನಡೆಸಲು ರಾಜ್ಯಗಳಿಗೆ ಇರುವ ಹಕ್ಕನ್ನು ಪುನಃ ಸ್ಥಾಪಿಸಬೇಕು. ಪರೀಕ್ಷೆಗಳನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರದಡಿ ನಡೆಸಬೇಕು. ಸಮಾನತೆ, ಪಾರದರ್ಶಕತೆ ಮತ್ತು ವಿದ್ಯಾರ್ಥಿಸ್ನೇಹಿಯಾದ ವೈದ್ಯಕೀಯ ಪ್ರವೇಶ ವ್ಯವಸ್ಥೆ ಖಚಿತಪಡಿಸಬೇಕು. ಅದು ಫೆಡರಲ್ ವ್ಯವಸ್ಥೆ ಮತ್ತು ಸಮಾನ ಶೈಕ್ಷಣಿಕ ಅವಕಾಶಗಳಿಗೆ ಗೌರವ ನೀಡುವಂತಿರಬೇಕು.

- ಅಫ್ಸರ್ ಕೊಡ್ಲಿಪೇಟೆ, ಎಸ್‌ಡಿಪಿಐ ಮುಖಂಡ.

- - -

-25ಕೆಡಿವಿಜಿ3, 4: ದಾವಣಗೆರೆಯಲ್ಲಿ ಶನಿವಾರ ಎಸ್‌ಡಿಪಿಐ, ಯಂಗ್ ಡೆಮಾಕ್ರೆಟ್ಸ್ ಸಂಘಟನೆ, ಡಿಎಸ್ಸೆಸ್ ಇತರೆ ಸಂಘಟನೆಗಳು ದೆಹಲಿಯ ವಿದ್ಯಾರ್ಥಿ ಹೋರಾಟ ಬೆಂಬಲಿಸಿ, ಪ್ರತಿಭಟನೆ ನಡೆಸಿದರು.