ಸಾರಾಂಶ
ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಧಾರವಾಡಇನ್ನೊಂದು ವಾರದಲ್ಲಿ ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ಧಾರವಾಡ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಸುವುದಾಗಿ ಹೇಳಿದ್ದ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ ಇನ್ನೂ ಪತ್ತೆ ಇಲ್ಲ.
ಇತ್ತೀಚೆಗೆ ಧಾರವಾಡಕ್ಕೆ ಬಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ, ತಾವು ಶೀಘ್ರದಲ್ಲಿಯೇ ಮತ್ತೆ ಹುಬ್ಬಳ್ಳಿ-ಧಾರವಾಡಕ್ಕೆ ಬಂದು ಆಕಾಂಕ್ಷಿಗಳು ಹಾಗೂ ಪಕ್ಷದ ಮುಖಂಡರ ಜೊತೆಗೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದರು. ಆದರೆ, ಸುಮಾರು ಹದಿನೈದು ದಿನಗಳು ಕಳೆದರೂ ಸಚಿವರು ಸಭೆ ಮಾಡುವ ಬಗ್ಗೆ ಸುಳಿವಿಲ್ಲ.ರಾಜ್ಯದಲ್ಲಿ ಲೋಕಸಭೆ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಹಂತವನ್ನು ನಿರ್ವಹಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕ್ಯಾಬಿನೆಟ್ ಸಚಿವರಿಗೆ ಜವಾಬ್ದಾರಿ ವಹಿಸಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ನೇಮಕಗೊಂಡಿದ್ದಾರೆ. ಅನೇಕ ಸಚಿವರು ತಮಗೆ ವಹಿಸಿರುವ ಕ್ಷೇತ್ರಕ್ಕೆ ಭೇಟಿ ನೀಡಿ ಕೆಪಿಸಿಸಿ ಸೂಚನೆಯಂತೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದು, ಲಕ್ಷ್ಮೀ ಹೆಬ್ಬಾಳಕರ ಧಾರವಾಡ ಕ್ಷೇತ್ರಕ್ಕೆ ಇನ್ನೂ ಭೇಟಿ ನೀಡಿಲ್ಲ. ಆಕಾಂಕ್ಷಿಗಳ ಹುಡುಕಾಟ ವಿಳಂಬವಾಗಿದ್ದು, ಅನೇಕ ಆಕಾಂಕ್ಷಿಗಳು ಪಕ್ಷದ ಟಿಕೆಟ್ ಕೋರಿ ಪಕ್ಷದ ಧುರೀಣರ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸಿದ್ದಾರೆ.
ಯಾರ್‍ಯಾರು ಆಕಾಂಕ್ಷಿಗಳು..ಹುಬ್ಬಳ್ಳಿಯ ರಜತ ಉಳ್ಳಾಗಡ್ಡಿಮಠ ಈ ಸಲದ ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ತಮಗೇ ಗ್ಯಾರಂಟಿ ಎಂದು ಆತ್ಮವಿಶ್ವಾಸದಲ್ಲಿದ್ದಾರೆ. ರಜತ್ ಲಕ್ಷ್ಮೀ ಹೆಬ್ಬಾಳ್ಕರ ಅವರ ಸಂಬಂಧಿಯು ಹೌದು. ಏತನ್ಮಧ್ಯೆ, ಕಾಂಗ್ರೆಸ್ ಯುವ ನಾಯಕರಾದ ಶಾಕೀರ ಸನದಿ, ಅನಿಲಕುಮಾರ ಪಾಟೀಲ, ಹಿರಿಯರಾದ ಮೋಹನ ಲಿಂಬಿಕಾಯಿ, ಲೋಹಿತ ನಾಯ್ಕರ, ಶಾಸಕ ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಶಿಕ್ಷಕರ ಸಂಘದ ನಾಯಕ ಬಸವರಾಜ ಗುರಿಕಾರ ಧಾರವಾಡ ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಗಳಾಗಿದ್ದು ತಮಗೆ ಹತ್ತಿರವಾಗಿರುವ ಪಕ್ಷದ ಧುರೀಣರ ದುಂಬಾಲು ಬಿದ್ದಿದ್ದಾರೆ.
ಪ್ರತಿ ಬಾರಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಬರುವ ವರೆಗೆ ತನ್ನ ಅಭ್ಯರ್ಥಿಯನ್ನು ಘೋಷಿಸದೇ ಎಲ್ಲ ಆಕಾಂಕ್ಷಿಗಳ ಮೂಗಿಗೆ ತುಪ್ಪ ಸವರಿ ಕೊನೆ ಗಳಿಗೆಯಲ್ಲಿ ಅಭ್ಯರ್ಥಿಯನ್ನು ಘೋಷಿಸುವುದು ಕಾಂಗ್ರೆಸ್ಸಿನ ಪರಿಪಾಠ. ಇತ್ತ, ಬಿಜೆಪಿ ಸಾಕಷ್ಟು ಮೊದಲೇ ಅಭ್ಯರ್ಥಿಯನ್ನು ಪ್ರಕಟಿಸಿ ಚುನಾವಣಾ ಘೋಷಣೆಗೆ ಮೊದಲೇ ಅಭ್ಯರ್ಥಿಗಳು ಕ್ಷೇತ್ರದ ತುಂಬೆಲ್ಲಾ ಅಡ್ಡಾಡಿ ಪ್ರಚಾರ ಮಾಡಿರುತ್ತಿದ್ದರು. ಈಗಂತೂ ಬಿಜೆಪಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಅಭ್ಯರ್ಥಿಯಾಗುವುದು ಖಚಿತ. ಮತ್ತು ಅವರು ಸಂಸದರಾಗಿ, ಸಚಿವರಾಗಿ ಕ್ಷೇತ್ರದಲ್ಲಿ ಓಡಾಡುವುದರಿಂದ ಅವರಿಗೆ ಜನಸಂಪರ್ಕ ಹೆಚ್ಚು. ಕಾಂಗ್ರೆಸ್ ಅಭ್ಯರ್ಥಿಗೆ ಪ್ರಚಾರಕ್ಕಾಗಿ ಸಾಕಷ್ಟು ಸಮಯಾವಕಾಶ ನೀಡಿ ಗೆಲ್ಲುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಹೆಚ್ಚು ಸ್ಥಾನಗಳನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಉದ್ದೇಶದಿಂದ ಕೆಪಿಸಿಸಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಬೇಗನೆ ಮುಗಿಯಬೇಕು ಎಂದು ಯೋಜನೆ ರೂಪಿಸಿದೆ. ಆದರೆ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸುವ ಕಠಿಣ ಸವಾಲು ಹೊಂದಿರುವ ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಆಯ್ಕೆಯ ಪ್ರಾಥಮಿಕ ಪ್ರಕ್ರಿಯೆಯನ್ನೂ ಆರಂಭಿಸದಿರುವುದು ಆಕಾಂಕ್ಷಿಗಳಿಗೆ ಮತ್ತು ಕಾರ್ಯಕರ್ತರಿಗೆ ಬೇಸರ ತಂದಿದೆ.ಲಿಂಗಾಯತರ ಲಗ್ಗೆ ಪ್ರಬಲ
1996ರ ವರೆಗೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಧಾರವಾಡ ಲೋಕಸಭಾ ಕ್ಷೇತ್ರ ನಂತರದಲ್ಲಿ ಬಿಜೆಪಿಯ ವಶವಾಗಿದೆ. 1996ರಲ್ಲಿ ವಿಜಯ ಸಂಕೇಶ್ವರ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಕಾಣುವ ಮೂಲಕ ಈ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಕಸಿದುಕೊಂಡರು. ನಂತರ ಪ್ರಹ್ಲಾದ ಜೋಶಿ ಸತತವಾಗಿ ನಾಲ್ಕು ಬಾರಿ ಆಯ್ಕೆಯಾಗುವ ಮೂಲಕ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಡಿಸಿದ್ದಾರೆ. ಜಗದೀಶ ಶೆಟ್ಟರ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡರು. ಆದರೆ, ಅವರಿಗೆ ಟಿಕೆಟ್ ತಪ್ಪಿದ್ದಕ್ಕಾಗಿ ಲಿಂಗಾಯತರು ಬಿಜೆಪಿಯಿಂದ ದೂರ ಸರಿದರು. ಇದು ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾರಣವಾಯಿತು ಎಂದು ಪ್ರಚಾರ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಪಕ್ಷದ ಪ್ರಚಾರ ಮಾಡುವ ಮೂಲಕ ಲಿಂಗಾಯತರ ಮತಗಳನ್ನು ಸೆಳೆದು ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಬೇಕು ಎಂಬ ವಿಚಾರಧಾರೆ ಪ್ರಚಲಿತವಾಗಿದೆ. ಇದರಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಲಿಂಗಾಯತರ ಲಗ್ಗೆ ಪ್ರಬಲವಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))