ಕೊಂಕಣಿ ಸಂಘಟನೆಗೆ ನೇತೃತ್ವದ ಹುಡುಕಾಟ: ಮುರಳೀಧರ ಪ್ರಭು

| Published : Feb 10 2024, 01:48 AM IST

ಕೊಂಕಣಿ ಸಂಘಟನೆಗೆ ನೇತೃತ್ವದ ಹುಡುಕಾಟ: ಮುರಳೀಧರ ಪ್ರಭು
Share this Article
  • FB
  • TW
  • Linkdin
  • Email

ಸಾರಾಂಶ

ಕೊಂಕಣಿ ಭಾಷಿಕರ ಸಂಘಟನೆ, ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಇನ್ನಿತರ ವಿಚಾರದಲ್ಲಿ ಸಾರಥ್ಯ ವಹಿಸಿಕೊಂಡು ಮುಂದೆ ಹೋಗಬೇಕಾದ ಅನಿವಾರ್ಯತೆ ಇದೆ.

ಕುಮಟಾ:

ಕೊಂಕಣಿ ಭಾಷಿಕರ ಸಂಘಟನೆ, ಭಾಷೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಹಾಗೂ ಇನ್ನಿತರ ವಿಚಾರದಲ್ಲಿ ಸಾರಥ್ಯ ವಹಿಸಿಕೊಂಡು ಮುಂದೆ ಹೋಗಬೇಕಾದ ಅನಿವಾರ್ಯತೆ ಇದೆ. ಕುಮಟಾದಲ್ಲಿ ಕೊಂಕಣಿ ಸಂಘಟನೆ ಸೂಕ್ತ ನೇತೃತ್ವದ ಹುಡುಕಾಟದಲ್ಲಿದೆ ಎಂದು ಕೊಂಕಣಿ ಪರಿಷತ್ ಅಧ್ಯಕ್ಷ ಮುರಳೀಧರ ಪ್ರಭು ಹೇಳಿದರು.

ಕೊಂಕಣ ಎಜುಕೇಶನ್ ಟ್ರಸ್ಟಿನ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಘರ್‌ಘರ್ ಕೊಂಕಣಿ ೧೫೦ನೇ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಹಿಂದೆ ಮಾಧವ ಮಂಜುನಾಥ ಶಾನಭಾಗ ಅವರು ಕೊಂಕಣಿ ಚಟುವಟಿಕೆಗಳ ಮೂಲಕ ಈ ಭಾಗದಲ್ಲಿ ಭಾಷಾ ಸಂಚಲನ ಉಂಟುಮಾಡಿದ್ದರು. ಇಂದು ಕಾಸರಗೋಡು ಚಿನ್ನಾ ಅವರು ಆ ಕೆಲಸ ಮಾಡುತ್ತಿದ್ದಾರೆ. ಕೊಂಕಣಿ ಭಾಷೆ ಉಳಿಸಿ ಬೆಳೆಸುವುದು ಕೊಂಕಣಿಗರ ಕರ್ತವ್ಯ ಎಂದರು.ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಈ ಭಾಗದಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ಭಾಷೆ ಕೊಂಕಣಿ. ಈ ಭಾಷಿಕರ ಭಾಷೆ, ಸಂಸ್ಕೃತಿಗೆ ಈ ಹಿಂದಿನಿಂದಲೂ ನಾವು ಗೌರವ ನೀಡುತ್ತಾ ಬಂದಿದ್ದೇವೆ. ಇಂತಹ ಕಾರ್ಯಕ್ರಮಗಳು ಭಾಷೆಯ ಹೆಸರಿನಲ್ಲಿ ಎಲ್ಲರನ್ನೂ ಒಗ್ಗೂಡಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ರಂಗಕರ್ಮಿ ಕಾಸರಗೋಡು ಚಿನ್ನಾ ಮಾತನಾಡಿ, ಕುಮಟಾವನ್ನು ಕೊಂಕಣಿಯ ಸಾಂಸ್ಕೃತಿಕ ಭೂಮಿಯಾಗಿ ಗಟ್ಟಿಗೊಳಿಸುವುದು ನನ್ನ ಗುರಿಯಾಗಿದೆ. ಭಾಷೆಯ ಆಧಾರದ ಮೇಲೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಂಕಣಿ ಭಾಷಿಕ ವಿವಿಧ ಸಮುದಾಯದ ಸಾಧಕರಾದ ರೂಪಾಲಿ ನಾಯ್ಕ ಕಾರವಾರ (ಸಮಾಜ ಸೇವೆ), ಗಾಯತ್ರಿ ಗಾವಡೆ (ದಿವ್ಯಾಂಗ ಶಿಕ್ಷಣ), ಶಕುಂತಲಾ ಆರ್. ಕಿಣಿ (ಸಾಂಸ್ಕೃತಿಕ ಕ್ಷೇತ್ರ) ಅರುಣ ಉಭಯಕರ್ (ಕೊಂಕಣಿ ಸಾಹಿತ್ಯ), ಗೋಕುಲದಾಸ್ ನಾಯಕ (ಕೊಂಕಣಿ ಸಂಘಟನೆ), ವೆಂಕಟೇಶ ನಾಯಕ (ಸಮಾಜ ಸೇವೆ), ದೀಪಕ ಶೆಣೈ (ಪತ್ರಿಕಾರಂಗ) ದೇವರಾಯ ಗಣೇಶ ಮರಾಠ (ಸಾಂಪ್ರದಾಯಿಕ ವೈದ್ಯ), ಶಶಿಭೂಷಣ ಕಿಣಿ (ರಂಗಕರ್ಮಿ), ಜೇಕಬ್ ಫರ್ನಾಂಡೀಸ್ (ಕೊಂಕಣಿ ನಾಟಕ), ಆರ್.ಎಸ್. ರಾಯ್ಕರ್ ಉಪ್ಪೋಣಿ (ಸಮಾಜ ಸೇವೆ) ಶ್ರೀಧರ ಕುಮಟಾಕರ (ಸಮಾಜಸೇವೆ), ಬಾಲಚಂದ್ರ ಗಾಮಸ್ಕರ ಉಡುಪಿ (ಮೂರ್ತಿಕಲಾಕಾರ), ಸ್ಟಿಫನ್ ಅಡಾ ಕುಮಟಾ (ಸಮಾಜ ಸೇವೆ) ಇವರನ್ನು ಪುರಸ್ಕರಿಸಲಾಯಿತು.

ಚಂದನ್ ದೈವಜ್ಞ (ದಿವ್ಯಾಂಗ ಕ್ರೀಡಾಪಟು), ವಿಲಾಸ್ ರತ್ನಾಕರ ಕ್ಷತೀಯ (ಚಲನಚಿತ್ರ ನಿರ್ದೇಶಕ), ಗೌರೀಶ ಭಂಡಾರಿ (ಕೊಂಕಣಿ ಭಾಷಾ ಶಿಕ್ಷಕ) ಇವರಿಗೆ ಯುವ ಪುರಸ್ಕಾರ ಪ್ರದಾನ ಮಾಡಲಾಯಿತು.ವಿನೋದ ಪ್ರಭು, ಸುಬ್ರಾಯ ವಾಳ್ಕೆ, ಚಿದಾನಂದ ಭಂಡಾರಿ, ಪಾಂಡುರಂಗ ವಾಗ್ರೇಕರ್ ಇದ್ದರು. ಬಳಿಕ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿತು.