ಬಳ್ಳಾರಿ ಜಿಲ್ಲೆಯಲ್ಲಿ 644, ವಿಜಯನಗರ 633, ರಾಯಚೂರು 1053, ಕೊಪ್ಪಳ 954 ಸೇರಿ ಒಟ್ಟು 3814 ರೌಡಿಶೀಟರ್‌ಗಳಿದ್ದು ಸಂಪೂರ್ಣ ನಿಗಾ ವಹಿಸಲಾಗುತ್ತಿದೆ.

ಬಳ್ಳಾರಿ: ಇಲ್ಲಿನ ಬಳ್ಳಾರಿ ವಲಯ ವ್ಯಾಪ್ತಿಯ ಬಳ್ಳಾರಿ, ಕೊಪ್ಪಳ, ವಿಜಯನಗರ, ರಾಯಚೂರು ಜಿಲ್ಲೆಗಳಲ್ಲಿ ರೌಡಿಗಳ ನಿಯಂತ್ರಣಕ್ಕಾಗಿ ನಾಲ್ಕು ಜಿಲ್ಲೆಗಳಲ್ಲಿ22 ರೌಡಿ ನಿಗ್ರಹ ದಳ ತಂಡಗಳನ್ನು ರಚಿಸಲಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ಡಾ.ಪಿ.ಎಸ್‌.ಹರ್ಷ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ 644, ವಿಜಯನಗರ 633, ರಾಯಚೂರು 1053, ಕೊಪ್ಪಳ 954 ಸೇರಿ ಒಟ್ಟು 3814 ರೌಡಿಶೀಟರ್‌ಗಳಿದ್ದು ಸಂಪೂರ್ಣ ನಿಗಾ ವಹಿಸಲಾಗುತ್ತಿದೆ. 13 ರೌಡಿ ಶೀಟರ್‌ಗಳು ಮೃತಪಟ್ಟಿದ್ದಾರೆ. ನಾಲ್ಕು ಜಿಲ್ಲೆಯ ಪೈಕಿ ಬಳ್ಳಾರಿ 126, ವಿಜಯನಗರ 71, ರಾಯಚೂರು 100, ಕೊಪ್ಪಳ 80 ರೌಡಿಶೀಟರ್‌ಗಳ ಮೇಲೆ ಕೊಲೆ ಕೇಸ್‌ ಪ್ರಕರಣವಿದೆ. ರಾಜ್ಯ ಸರ್ಕಾರ ಗಡಿಪಾರು ಅಧಿಕಾರವನ್ನು ಪೊಲೀಸ್‌ ಹಿರಿಯ ಅಧಿಕಾರಿಗೆ ವಹಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ ನಡೆಸಿ ಅನೇಕ ಸಲಹೆ, ಸೂಚನೆ ನೀಡಿದ್ದಾರೆ. ಇದರಲ್ಲಿ ರೌಡಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಕಾರ್ಯಾಚರಣೆ ಕೈಗೊಳ್ಳಲು ಸೂಚಿಸಲಾಗಿದೆ. ಈ ಹಿನ್ನೆಲೆ ಬಳ್ಳಾರಿ ವಲಯದ ನಾಲ್ಕು ಜಿಲ್ಲೆಗಳಲ್ಲಿ ರೌಡಿ ನಿಗ್ರಹ ದಳ ರಚಿಸಲಾಗಿದೆ ಎಂದು ತಿಳಿಸಿದರು.

ನಾಲ್ಕು ಜಿಲ್ಲೆಗಳಲ್ಲಿ ಗಡಿಪಾರಾಗಿ 53 ರೌಡಿಶೀಟರ್‌ಗಳ ಅರ್ಜಿ ಪ್ರಕ್ರಿಯೆಯಲ್ಲಿದ್ದು, 10 ಜನ ಗಡಿಪಾರಿಗೆ ಆದೇಶ ಮಾಡಲಾಗಿದೆ. ಸದ್ಯ ಜೈಲಿನಲ್ಲಿ ಬಳ್ಳಾರಿ 13, ವಿಜಯನಗರ 6, ರಾಯಚೂರು 10, ಕೊಪ್ಪಳ 19 ಸೇರಿ ಒಟ್ಟು 48 ರೌಡಿಶೀಟರ್‌ಗಳು ಜೈಲಿನಲ್ಲಿದ್ದಾರೆ.

ರೌಡಿ ನಿಗ್ರಹ ದಳದಿಂದ ಮೊದಲ ಹಂತದಲ್ಲಿ ನಾಲ್ಕು ಜಿಲ್ಲೆಯಲ್ಲಿ ಏಕಕಾಲಕ್ಕೆ ಬಳ್ಳಾರಿ 104, ವಿಜಯನಗರ 106, ರಾಯಚೂರು 103, ಕೊಪ್ಪಳ 68 ಸೇರಿ ಒಟ್ಟು 381 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ. ಈ ವೇಳೆ ರೌಡಿಗಳ ಮಾಹಿತಿ ಸಂಗ್ರಹ, ಕಾನೂನು ಬಾಹಿರ ಚಟುವಟಿಕೆಗಳಲ್ಲಿತೊಡಗಿಸಿಕೊಂಡಿರುವ ಕುರಿತು ಪರಿಶೀಲನೆ, ವೆಪನ್‌ಗಳು ಇಟ್ಟಿರುವುದು, ಸಾರ್ವಜನಿಕರ ದಾಖಲೆಗಳ ಸಂಗ್ರಹ, ಬೇನಾಮಿ ಆಸ್ತಿ, ಬಳಸುವ ವಾಹನ ಸೇರಿ ನಾನಾ ಮಾಹಿತಿ ಸಂಗ್ರಹಿಸಲಾಗಿದೆ. ಈ ಪೈಕಿ ಬಳ್ಳಾರಿಯ ರೌಡಿಶೀಟರ್‌ ಅಂದ್ರಾಳು ಸೀತಾರಾಮ ಮನೆಯಲ್ಲಿಏರ್‌ಗನ್‌, ಸ್ಟಾಂಪ್‌ ಪೇಪರ್‌, ಪ್ರಾಮಿಸರಿ ನೋಟ್‌ ಸಿಕ್ಕಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಇದೇ ವೇಳೆ ಮಾತನಾಡಿದ ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಮಾತನಾಡಿ, ಜಿಲ್ಲೆಯ 17 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ಹಾಗೂ ಸ್ಥಳೀಯ ಪೊಲೀಸ್‌ ಠಾಣೆಗಳ ಅಧಿಕಾರಿ, ಸಿಬ್ಬಂದಿ ಏಕಕಾಲಕ್ಕೆ 104 ರೌಡಿಶೀಟರ್‌ಗಳ ಮನೆಗಳಿಗೆ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ ಎಂದರು.

ಬಳ್ಳಾರಿಯ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿಯ ರೌಡಿಯೊಬ್ಬರ ಮನೆಯಲ್ಲಿ ಏರ್‌ಗನ್‌, ಸ್ಟಾಂಪ್‌ ಪೇಪರ್ಸ್‌, ಪ್ರಾಮಿಸರಿ ನೋಟ್ಸ್‌ ದೊರೆತಿದ್ದು, ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ದಾಳಿ ಬಳಿಕ ನಗರದ ಡಿಎಆರ್‌ ಮೈದಾನದಲ್ಲಿ ರೌಡಿ ಶೀಟರ್‌ಗಳ ಕವಾಯತು ನಡೆಸಲಾಯಿತು. ಜಿಲ್ಲೆಯಲ್ಲಿ ರೌಡಿಶೀಟರ್‌ಗಳ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಸದ್ಯ ಶೂನ್ಯ ಸಹನೆ (ಝೀರೋ ಟಾಲರೆನ್ಸ್‌) ಇದೆ ಎಂದು ತಿಳಿಸಿದರು.

ಜಿಲ್ಲೆಯ ರೌಡಿ ನಿಗ್ರಹ ಪಡೆಯಿಂದ ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆ ವ್ಯಾಪ್ತಿಯ 8, ಕೌಲ್‌ ಬಜಾರ್‌ 9, ಗಾಂಧಿನಗರ 11, ಎಪಿಎಂಸಿ 5, ಹಚ್ಚೊಳ್ಳಿ ಠಾಣೆ ವ್ಯಾಪ್ತಿಯ 5, ಸಿರಿಗೇರಿ 5, ಸಿರುಗುಪ್ಪ 4, ತೆಕ್ಕಲಕೋಟೆ 5, ಪಿಡಿ ಹಳ್ಳಿ 4, ಮೋಕಾ 5, ಬಳ್ಳಾರಿ ಗ್ರಾಮೀಣ 5, ಚೋರನೂರು 4, ಸಂಡೂರು, ತೋರಣಗಲ್ಲು, ಕುಡತಿನಿ, ಕುರುಗೋಡು ಠಾಣೆ ವ್ಯಾಪ್ತಿಯಲ್ಲಿ ತಲಾ 7 ರೌಡಿಶೀಟರ್‌, ಕಂಪ್ಲಿ 5 ರೌಡಿಶೀಟರ್‌ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ ಎಂದು ವಿವರಿಸಿದರು.