ಸಾರಾಂಶ
ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಯನ್ನು ಮುಖ್ಯಮಂತ್ರಿಗಳು ಸೆ. 6 ರಂದು ಸಕಲೇಶಪುರದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ : ಬಹು ನಿರೀಕ್ಷಿತ ಎತ್ತಿನಹೊಳೆ ಯೋಜನೆಯನ್ನು ಮುಖ್ಯಮಂತ್ರಿಗಳು ಸೆ. 6 ರಂದು ಸಕಲೇಶಪುರದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ಹೊರಭಾಗದಲ್ಲಿ ಪುರಾತನ ಚಿಕ್ಕಕೆರೆಯನ್ನು ಪುರಸಭೆ ಹಾಗೂ ದಾನಿಗಳು ಸೇರಿ ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ಜೀರ್ಣೋದ್ದಾರ ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿ ಈ ಸ್ಥಳದಲ್ಲಿ ಅಶ್ವಥಕಟ್ಟೆ ಅಲ್ಲದೆ ಚಿಕ್ಕ ಕೆರೆಯ ಅಭಿವೃದ್ಧಿ ಕಾಮಗಾರಿಗಳು ನಡೆದಿರುವ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಎತ್ತಿನ ಹೊಳೆ ಯೋಜನೆ ಪ್ರಕಾರ ಈಗಾಗಲೇ ಕೋಲಾರ ಜಿಲ್ಲೆಗೆ 5, ಚಿಕ್ಕಬಳ್ಳಾಪುರ ಜಿಲ್ಲೆಗೆ 4.5 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 4 ಟಿ ಎಂಸಿ ಕುಡಿಯುವ ನೀರು ನಿಗದಿಪಡಿಸಲಾಗಿದ್ದು ನೀರು ಹರಿಯಲಿದೆ. ಆಗಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಸಂಸದರಾಗಿದ್ದ ವೀರಪ್ಪ ಮೊಯ್ಲಿರವರು ಹಾಗೂ ಸಚಿವ ಸಂಪುಟದ ಸದಸ್ಯರು ಸೇರಿ ಚಿಕ್ಕಬಳ್ಳಾಪುರದಲ್ಲಿ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಾರಂಭದಲ್ಲಿ ಈ ಯೋಜನೆಗೆ 13000 ಕೋಟಿ ರು. ನಿದಿಯಾಗಿತ್ತು ಈಗ ಆ ಯೋಜನೆ 23 ಸಾವಿರ ಕೋಟಿ ರು. ವೆಚ್ಚವಾಗಿದೆ ಎಂದು ತಿಳಿಸಿದರು.