ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಶೃಂಗೇರಿ ಶ್ರೀಗಳ ಆಶೀರ್ವಾದದೊಂದಿಗೆ ಜಿಲ್ಲೆಯಲ್ಲಿ ದ್ವಿತೀಯ ಬ್ರಾಹ್ಮಣ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಪೂರ್ವಭಾವಿ ಸಿದ್ಧತೆಗಳು ಆರಂಭಗೊಂಡಿವೆ ಎಂದು ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.ತಾಲೂಕು ಮಟ್ಟದ ಸಭೆಗಳ ಭಾಗವಾಗಿ ನಗರದ ಶ್ರೀರಾಮ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಂಗವಾಗಿ ಒಂದು ಕೋಟಿ ಗಾಯಿತ್ರಿ ಜಪಯಜ್ಞ ಮತ್ತು ಹತ್ತು ಲಕ್ಷ ಗಾಯಿತ್ರಿ ಹೋಮ ನಡೆಸುವ ಸಂಕಲ್ಪ ಮಾಡಲಾಗಿದೆ. ಈ ಸಮ್ಮೇಳನವನ್ನು ಡಿಸೆಂಬರ್ 27 ಮತ್ತು 28ರಂದು ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಸಿಲ್ವರ್ ಜ್ಯೂಬಿಲಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.
27ರಂದು ನಡೆಯುವ ಹೋಮದ ಪೂರ್ಣಾಹುತಿಗೆ ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮವನ್ನು ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ಗುರುನಾಥ್ ಅವರ ನೇತೃತ್ವದಲ್ಲಿ ನಡೆಸಲಾಗುತ್ತದೆ. 28ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ನಿಕಟಪೂರ್ವ ಅಧ್ಯಕ್ಷ ಅಶೋಕ ಹಾರನಹಳ್ಳಿ ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭಕ್ಕೆ ಜಿಲ್ಲೆಯ ಸಂಸದರು ಹಾಗೂ ಎಲ್ಲ ಶಾಸಕರು ಆಹ್ವಾನಿತರಾಗಿದ್ದಾರೆ. ಈ ಸಮ್ಮೇಳನವು ಸಮಾಜದ ಸಂಘಟನೆಗೆ ಬಲ ನೀಡುವಂಥದ್ದು ಎಂದು ಹೇಳಿದರು.
ಎರಡು ದಿನಗಳ ಅವಧಿಯಲ್ಲಿ ಆರು ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, ಪ್ರತಿ ತಾಲೂಕಿನ ಸಂಘಗಳಿಗೆ ನಿರ್ವಹಣೆಯ ಜವಾಬ್ದಾರಿ ನೀಡಲಾಗಿದೆ. ಮಹಿಳಾ ಘಟಕದ ವತಿಯಿಂದ ‘ಸೌಂದರ್ಯ ಲಹರಿ’ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. 27ರಂದು ನಡೆಯುವ ಹೋಮದ ವೇಳೆ 24 ಹೋಮಕುಂಡಗಳಲ್ಲಿ ಪ್ರತಿ ಹೋಮಕುಂಡಕ್ಕೆ 24 ಜನರು ಭಾಗವಹಿಸಲಿದ್ದಾರೆ.ನವೆಂಬರ್ 3ರಿಂದ ಒಂದು ಕೋಟಿ ಗಾಯಿತ್ರಿ ಜಪಯಜ್ಞ ಪ್ರಾರಂಭವಾಗಲಿದ್ದು, ಯುವಕರನ್ನು ಹೆಚ್ಚಾಗಿ ತೊಡಗಿಸಲು ಮನವಿ ಮಾಡಲಾಗಿದೆ. ಮನೆಗಳಲ್ಲಿ ನಿತ್ಯ ಗಾಯಿತ್ರಿ ಜಪ ಮಾಡುವವರೂ ಹೆಚ್ಚುವರಿ ಜಪ ಮಾಡುವ ಮೂಲಕ ಯಜ್ಞ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಕೋರಿದರು. ಸಮ್ಮೇಳನಕ್ಕೆ 3 ಸಾವಿರಕ್ಕೂ ಹೆಚ್ಚು ಸಮಾಜ ಬಾಂಧವರು ಆಗಮಿಸುವ ನಿರೀಕ್ಷೆಯಿದೆ.
ಜಿಲ್ಲಾ ಬ್ರಾಹ್ಮಣ ಸಭೆಗೆ ಇನ್ನೂ ಸ್ವಂತ ಕಟ್ಟಡವಿಲ್ಲದೆ ಸಮಸ್ಯೆ ಎದುರಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಈಗಾಗಲೇ ನಗರದಲ್ಲಿ 20 ಗುಂಟೆ ಜಾಗವನ್ನು ಸಭಾಭವನ ನಿರ್ಮಾಣಕ್ಕಾಗಿ ಪಡೆಯಲಾಗಿದೆ ಎಂದರು. ಇದರಲ್ಲಿ 700 ಆಸನಗಳ ಸಭಾಂಗಣ, 500 ಮಂದಿಗೆ ಭೋಜನಶಾಲೆ ಮತ್ತು ಗುರುಗಳು ವಾಸ್ತವ್ಯಕ್ಕೆ ಪ್ರತ್ಯೇಕ ಗೃಹ ನಿರ್ಮಾಣ ಯೋಜನೆ ಇದೆ ಎಂದು ತಿಳಿಸಿದ್ದಾರೆ. ಎಲ್ಲವೂ ಶೃಂಗೇರಿ ಶ್ರೀಗಳ ಕೃಪಾಶೀರ್ವಾದದಿಂದ ನೆರವೇರುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.ಬ್ರಾಹ್ಮಣ ಮಹಾಸಭಾ ಜಿಲ್ಲಾ ಪ್ರತಿನಿಧಿ ವೆಂಕಟೇಶ್, ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಬ್ರಾಹ್ಮಣ ಸಭೆಯ ಉಪಾಧ್ಯಕ್ಷ ಗುರುಮೂರ್ತಿ, ಕಾರ್ಯದರ್ಶಿ ಸುರೇಶ್, ನಿರ್ದೇಶಕ ಪ್ರಸಾದ್, ಅರಸೀಕೆರೆ ತಾಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಕೆ. ರಮೇಶ್, ಉಪಾಧ್ಯಕ್ಷ ಕಲ್ಯಾಡಿ ಹಿರಿಯಣ್ಣಯ್ಯ, ನಿರ್ದೇಶಕರು, ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಹರೀಶ್, ವ್ಯವಸ್ಥಾಪಕ ಮಂಜುನಾಥ್, ಶ್ರೀ ಚಂದ್ರಶೇಖರ ಭಾರತಿ ವಿದ್ಯಾಸಂಸ್ಥೆಯ ನಿರ್ದೇಶಕ ಗೋಪಾಲ್, ಚಿಕ್ಕಗಿರಿ ರಂಗನಾಥಸ್ವಾಮಿ ದೇವಾಲಯ ಸಮಿತಿ ಕಾರ್ಯದರ್ಶಿ ಅಶೋಕ್, ನಿರ್ದೇಶಕ ಟಿ. ಆರ್. ನಾಗರಾಜ್, ಪಾಕತಜ್ಞರ ಸಂಘದ ಅಧ್ಯಕ್ಷ ರಾಘವೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))