ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ: ದ.ಕ.ಜಿಲ್ಲೆಯಲ್ಲಿ 36 ಸಾವಿರ ವಿದ್ಯಾರ್ಥಿಗಳು

| Published : Mar 01 2025, 01:02 AM IST

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ: ದ.ಕ.ಜಿಲ್ಲೆಯಲ್ಲಿ 36 ಸಾವಿರ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ದ.ಕ. ಜಿಲ್ಲೆಯಲ್ಲಿ 34,434 ಸಾಮಾನ್ಯ ಅಭ್ಯರ್ಥಿಗಳು ಸೇರಿದಂತೆ 36,374 ಅಭ್ಯರ್ಥಿಗಳು ದ್ವಿತೀಯ ಪಿಯು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ 55 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಜಿಲ್ಲೆಯಲ್ಲಿ 55 ಪರೀಕ್ಷಾ ಕೇಂದ್ರಗಳು, ಸರ್ವ ಸಿದ್ಧತೆ ಸಂಪೂರ್ಣ

ಕನ್ನಡಪ್ರಭ ವಾರ್ತೆ ಮಂಗಳೂರು

ದ್ವಿತೀಯ ಪಿಯು ಪರೀಕ್ಷೆ ಮಾ.1ರಿಂದ 20ರವರೆಗೆ ದ.ಕ. ಜಿಲ್ಲಾದ್ಯಂತ ನಡೆಯಲಿದ್ದು, 34,434 ಸಾಮಾನ್ಯ ಅಭ್ಯರ್ಥಿಗಳು ಸೇರಿದಂತೆ 36,374 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ 55 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ನೋಂದಾಯಿತ ಒಟ್ಟು 36,374 ಅಭ್ಯರ್ಥಿಗಳಲ್ಲಿ 34,434 ಮಂದಿ ಮೊದಲ ಬಾರಿಗೆ ಪರೀಕ್ಷೆ ಬರೆಯುವವರು. 1,631 ಮಂದಿ ಖಾಸಗಿ ಅಭ್ಯರ್ಥಿಗಳು, 307 ಮಂದಿ ಪುನರಾವರ್ತಿತ ಅಭ್ಯರ್ಥಿಗಳು, ಇಬ್ಬರು ಅಭ್ಯರ್ಥಿಗಳು ಫಲಿತಾಂಶ ಸುಧಾರಣೆಗಾಗಿ ಪರೀಕ್ಷೆ ಎದುರಿಸುತ್ತಿದ್ದಾರೆ. ಒಟ್ಟಾರೆಯಾಗಿ 18,337 ವಿದ್ಯಾರ್ಥಿನಿಯರು ಮತ್ತು 18,037 ವಿದ್ಯಾರ್ಥಿಗಳಿದ್ದಾರೆ.

ಪರೀಕ್ಷೆಗಳು 55 ಕೇಂದ್ರಗಳಲ್ಲಿ ನಡೆಯಲಿದ್ದು, 22 ಅನುದಾನಿತ ಕಾಲೇಜುಗಳು, 18 ಅನುದಾನ ರಹಿತ ಕಾಲೇಜುಗಳು ಮತ್ತು 15 ಸರ್ಕಾರಿ ಕಾಲೇಜುಗಳಲ್ಲಿ ನಡೆಯಲಿವೆ. ಮಂಗಳೂರು ಅತಿ ಹೆಚ್ಚು 19 ಕೇಂದ್ರಗಳನ್ನು ಹೊಂದಿದ್ದರೆ, ಬೆಳ್ತಂಗಡಿ ತಾಲೂಕಿನಲ್ಲಿ 7, ಬಂಟ್ವಾಳದಲ್ಲಿ 6, ಪುತ್ತೂರು, ಮೂಡುಬಿದಿರೆ ಮತ್ತು ಕಡಬ ತಾಲೂಕುಗಳಲ್ಲಿ ತಲಾ ಐದು ಕೇಂದ್ರಗಳಿವೆ. ಉಳ್ಳಾಲ ತಾಲೂಕಲ್ಲಿ 4 ಪರೀಕ್ಷಾ ಕೇಂದ್ರಗಳಿದ್ದು, ಸುಳ್ಯ ಮತ್ತು ಮೂಲ್ಕಿಯಲ್ಲಿ ತಲಾ ಎರಡು ಕೇಂದ್ರಗಳಿವೆ.

2023- 24ನೇ ಶೈಕ್ಷಣಿಕ ವರ್ಷದಲ್ಲಿ ದಕ್ಷಿಣ ಕನ್ನಡದ 33,972 ವಿದ್ಯಾರ್ಥಿಗಳಲ್ಲಿ ಒಟ್ಟು 33,562 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯ ಮೂರು ಪ್ರಯತ್ನಗಳಲ್ಲಿ ಉತ್ತೀರ್ಣರಾಗಿದ್ದಾರೆ. ಶೇ. 97.37ರಷ್ಟು ಮಂದಿ ಉತ್ತೀರ್ಣರಾಗುವ ಮೂಲಕ ಕಳೆದ ಶೈಕ್ಷಣಿಕ ವರ್ಷದಲ್ಲಿ ದ.ಕ. ರಾಜ್ಯಕ್ಕೇ ಅಗ್ರಸ್ಥಾನ ಪಡೆದಿತ್ತು.

ಬಾಕ್ಸ್‌

ನಿಷೇಧಾಜ್ಞೆ ಜಾರಿ

ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಶಾಂತಿಯುತವಾಗಿ, ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಹಾಗೂ ಉಪ ಪೊಲೀಸ್‌ ಆಯುಕ್ತ ಸಿದ್ದಾರ್ಥ್ ಗೋಯಲ್ ಆದೇಶಿಸಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ. ಬ್ಯಾಂಕ್ ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವೇಳೆ ಲಾಠಿ /ಶಸ್ತ್ರಾಸ್ತ್ರ ಉಪಯೋಗಿಸುವುದಕ್ಕೆ ಅನ್ವಯವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.