ಬಂಟ್ವಾಳ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಗುರುವಾರ ಘೋಷಣೆಯಾಗಿದೆ. ಎಲ್ಲೆಡೆ ವಿದ್ಯಾರ್ಥಿಗಳ ಫಲಿತಾಂಶದ ಕಲರವ ಕೇಳುತ್ತಿರುವಾಗ ಬಂಟ್ವಾಳ ನಿವಾಸಿಗಳಾದ ಅಮ್ಮ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಬಿ.ಸಿ.ರೋಡಿನ ಕೈಕಂಬ ನಿವಾಸಿ ಗೃಹಿಣಿ ನೇತ್ರಾವತಿ ವಿ.ಆರ್. ಹಾಗೂ ಮಗಳು ಹೇಮಶ್ರೀ ಆರ್. ತೇರ್ಗಡೆಯಾದ ಸಂತಸದಲ್ಲಿರುವ ತಾಯಿ, ಮಗಳು. ಹೇಮಶ್ರೀ ಬಿ.ಮೂಡ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ 562 ಅಂಕ ಗಳಿಸುವ ಮೂಲಕ ಕಾಲೇಜಿಗೆ ಟಾಪರ್ ಆಗಿ ಮೂಡಿ ಬಂದಿದ್ದಾರೆ.ನಂದಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಅವರ ಪತ್ನಿ ನೇತ್ರಾವತಿ ಪಿಯುಸಿ ತೇರ್ಗಡೆಯಾಗುವ ಹಂಬಲ ಹೊಂದಿದ್ದು, ಕಾಲಕೂಡಿ ಬಂದಿರಲಿಲ್ಲ. ಮಗಳು ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವ ಸಂದರ್ಭ ತಾನೂ ಪರೀಕ್ಷೆ ಬರೆಯುವ ಮನಸ್ಸು ಮಾಡಿದರು.

ಪತಿಯ ಪ್ರೋತ್ಸಾಹ, ಕಾಲೇಜಿನ ಉಪನ್ಯಾಸಕರ ಬೆಂಬಲದಿಂದ ತಾಯಿ, ಮಗಳು ಇಬ್ಬರೂ ಪರೀಕ್ಷೆಗೆ ಕುಳಿತರು. ಹಾಲ್ ಟಿಕೆಟ್ ಬಂದಾಗ ಪರೀಕ್ಷಾ ಕೇಂದ್ರ ಮೊಂಟೆಪದವು ನೇತ್ರಾವತಿ ಅವರಿಗೆ ದೊರಕಿತು. ಸರ್ಕಾರಿ ಪದವಿಪೂರ್ವ ಕಾಲೇಜು ಮೊಂಟೆಪದವು ಮೂಲಕ ಪರೀಕ್ಷೆಗೆ ಹಾಜರಾಗಿದ್ದ ಇವರು ತನ್ನ ಪ್ರಥಮ ಪ್ರಯತ್ನದಲ್ಲೇ ಕಲಾ ವಿಭಾಗದಲ್ಲಿ ಉತ್ತೀರ್ಣರಾಗಿದ್ದು, 257 ಅಂಕಗಳನ್ನು ಪಡೆದಿರುತ್ತಾರೆ.ಮಗಳು ಹೇಮಶ್ರೀ ಆರ್, ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಪತ್ನಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾದ ಸಂತಸವನ್ನು ನಂದಾವರ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರವಿಕುಮಾರ್ ಮಾಧ್ಯಮದ ಜೊತೆ ಹಂಚಿಕೊಂಡರು.