ದ್ವಿತೀಯ ಪಿಯುಸಿ ಪರೀಕ್ಷೆ ಶುರು

| Published : Mar 02 2024, 01:53 AM IST / Updated: Mar 02 2024, 09:54 AM IST

ಸಾರಾಂಶ

ಬಳ್ಳಾರಿ ಜಿಲ್ಲೆಯಲ್ಲಿ 10,589 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಈ ಪೈಕಿ 10,219 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 370 ಜನರು ಗೈರಾಗಿದ್ದರು.

ಬಳ್ಳಾರಿ: ಬಳ್ಳಾರಿ- ವಿಜಯನಗರ ಜಿಲ್ಲೆಗಳ 34 ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರ ಶುರುಗೊಂಡ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆ ಸುಗಮವಾಗಿ ನಡೆದಿದ್ದು, ಮೊದಲ ದಿನ ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಯನ್ನು ಎದುರಿಸಿದರು.

ಕನ್ನಡ ಪರೀಕ್ಷೆಗೆ ನೋಂದಣಿಯಾಗಿದ್ದ 23,398 ವಿದ್ಯಾರ್ಥಿಗಳ ಪೈಕಿ 931 ವಿದ್ಯಾರ್ಥಿಗಳು ಗೈರಾಗಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ 10,589 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು. ಈ ಪೈಕಿ 10,219 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 370 ಜನರು ಗೈರಾಗಿದ್ದರು.

ವಿಜಯನಗರ ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ 12,826 ವಿದ್ಯಾರ್ಥಿಗಳ ಪೈಕಿ 12,248 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, 578 ವಿದ್ಯಾರ್ಥಿಗಳು ಗೈರಾದರು.

ಪರೀಕ್ಷೆ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಕಲು ನಡೆಯಲು ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇತ್ತು. ಪದವಿಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಎಲ್ಲ ಕೇಂದ್ರಗಳ ಬಳಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ವಿದ್ಯಾರ್ಥಿಗಳ ಪರೀಕ್ಷಾ ಸಂಭ್ರಮ: ವಿದ್ಯಾರ್ಥಿಗಳು ಪೋಷಕರೊಂದಿಗೆ ಸಂಭ್ರಮದಿಂದಲೇ ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬಂತು. ಪರೀಕ್ಷಾ ಕೇಂದ್ರಗಳ ಬಳಿ ಆಯಾ ಕಾಲೇಜುಗಳ ಉಪನ್ಯಾಸಕರು ಸಹ ಆಗಮಿಸಿ, ವಿದ್ಯಾರ್ಥಿಗಳಿಗೆ ಧೈರ್ಯ ಹೇಳುತ್ತಿರುವುದು. ಪರೀಕ್ಷೆಯಲ್ಲಿ ಗೊಂದಲ ಮಾಡಿಕೊಳ್ಳದಂತೆ ಸಲಹೆ ನೀಡುತ್ತಿರುವ ದೃಶ್ಯಗಳು ಕಂಡುಬಂದವು. ಮೊದಲ ದಿನದ ಪರೀಕ್ಷೆಯಲ್ಲಿ ಯಾವುದೇ ಡಿಬಾರ್ ಪ್ರಕರಣಗಳು ಜರುಗಿಲ್ಲ. ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಬರೆದರು. ವಿದ್ಯಾರ್ಥಿಗಳ ಉತ್ಸಾಹ ಕಂಡು ನನಗೂ ಖುಷಿಯಾಯಿತು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಟಿ.ಪಾಲಾಕ್ಷ ಅವರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದರು.

ಬಸ್‌ ವ್ಯವಸ್ಥೆಯಿಂದ ಅನುಕೂಲ: ಪರೀಕ್ಷೆ ಹಿನ್ನೆಲೆ ಸಾರಿಗೆ ಇಲಾಖೆ ಉಚಿತ ಬಸ್ ವ್ಯವಸ್ಥೆ ಮಾಡಿತ್ತು. ಹೀಗಾಗಿ ಗ್ರಾಮೀಣ ಭಾಗಗಳಿಂದ ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲವಾಗಲಿಲ್ಲ. ಪರೀಕ್ಷೆಯ ಪ್ರವೇಶಪತ್ರ (ಹಾಲ್‌ ಟಿಕೆಟ್‌) ತೋರಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಯಾವುದೇ ರೂಟ್ ಬಸ್‌ಗಳನ್ನು ರದ್ದು ಮಾಡಲಾಗಿಲ್ಲ. ಹೆಚ್ಚುವರಿಯಾಗಿ 16 ಟ್ರಿಪ್‌ಗಳಲ್ಲಿ ಬಸ್‌ಗಳನ್ನು ಓಡಿಸಲಾಯಿತು.

ಪರೀಕ್ಷಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಡಿಪೋ ವ್ಯವಸ್ಥಾಪಕರು ಸೇರಿದಂತೆ ಉಳಿದಂತೆ ಎಲ್ಲ ಇಲಾಖೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಪರೀಕ್ಷೆ ಮುಗಿಯುವವರೆಗೆ ಹೆಚ್ಚುವರಿ ಟ್ರಿಪ್‌ಗಳಲ್ಲಿ ಬಸ್‌ಗಳನ್ನು ಓಡಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಡಿಟಿಒ ಚಾಮರಾಜ ಅವರು ತಿಳಿಸಿದರು. ಶೇ. 96ರಷ್ಟು ಹಾಜರಾತಿ: ಅನೇಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಉತ್ಸಾಹ ಕಂಡು ಖುಷಿಯಾಯಿತು. ಪರೀಕ್ಷೆಗೆ ನೋಂದಣಿಯಾದ ವಿದ್ಯಾರ್ಥಿಗಳ ಪೈಕಿ ಶೇ. 96.02 ರಷ್ಟು ಹಾಜರಾಗಿದ್ದರು. ಎಲ್ಲೂ ಡಿಬಾರ್ ಪ್ರಕರಣ ನಡೆದಿಲ್ಲ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಪಾಲಾಕ್ಷ ತಿಳಿಸಿದರು.ಹೆಚ್ಚುವರಿ ಬಸ್‌: ಪರೀಕ್ಷೆ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಹಾಲ್ ಟಿಕೆಟ್ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷೆ ಮುಗಿಯುವ ತನಕ ಹೆಚ್ಚುವರಿ ಬಸ್ ಓಡಿಸುತ್ತೇವೆ ಎಂದು ಈ.ಕ.ರ.ಸಾ. ಸಂಸ್ಥೆ, ಬಳ್ಳಾರಿ ವಿಭಾಗದ ಡಿಟಿಒ ಚಾಮರಾಜ ತಿಳಿಸಿದರು.