ಗದಗ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಶುಭಾರಂಭ

| Published : Mar 02 2025, 01:18 AM IST

ಸಾರಾಂಶ

ರಾಜ್ಯಾದ್ಯಂತ ಶನಿವಾರದಿಂದ ಪ್ರಾರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ 10223 ವಿದ್ಯಾರ್ಥಿಗಳು ಕನ್ನಡ ವಿಷಯ ಪರೀಕ್ಷೆ ಎದುರಿಸಿದರು.

ಗದಗ: ರಾಜ್ಯಾದ್ಯಂತ ಶನಿವಾರದಿಂದ ಪ್ರಾರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯ 23 ಪರೀಕ್ಷಾ ಕೇಂದ್ರಗಳಲ್ಲಿ 10223 ವಿದ್ಯಾರ್ಥಿಗಳು ಕನ್ನಡ ವಿಷಯ ಪರೀಕ್ಷೆ ಎದುರಿಸಿದರು.ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದ 10734 ವಿದ್ಯಾರ್ಥಿಗಳ ಪೈಕಿ 10,223 ವಿದ್ಯಾರ್ಥಿಗಳು ಹಾಜರಾಗಿದ್ದು, 511 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿಲ್ಲ. ಶನಿವಾರ ಬೆಳಗ್ಗೆ 10ರಿಂದ ಪ್ರಾರಂಭವಾದ ಪರೀಕ್ಷೆಗೆ ಸುಗಮ ವ್ಯವಸ್ಥೆಗಾಗಿ ಎಲ್ಲಾ 23 ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿತ್ತು.

ಲಕ್ಷ್ಮೇಶ್ವರದಲ್ಲಿ 464 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ

ಪಟ್ಟಣದಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಶನಿವಾರದಿಂದ ಆರಂಭಗೊಂಡವು. ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆಗಳು ಸುಸೂತ್ರವಾಗಿ ಜರುಗಿದವು.

ಲಕ್ಷ್ಮೇಶ್ವರ ಪಟ್ಟಣದ ಬಿಸಿಎನ್ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ತೋಟಪ್ಪ ಮಾನ್ವಿ ಸರ್ಕಾರಿ ಪ.ಪೂ.ಕಾಲೇಜಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು. ಪಟ್ಟಣದ ಬಿಸಿಎನ್ ಪದವಿ ಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ ಒಟ್ಟು ೪೭೬ ವಿದ್ಯಾರ್ಥಿಗಳಲ್ಲಿ ೧೨ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, ೪೬೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷಾ ಕೇಂದ್ರದಲ್ಲಿ ಪುರಸಭೆ ಪ.ಪೂ ಕಾಲೇಜು, ಎಸ್‌ಎಂ.ಜೆ.ವ್ಹಿ ಪ.ಪೂ.ಕಾಲೇಜು ಮತ್ತು ಸರ್ಕಾರಿ ಪ.ಪೂ.ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.ಜಾನಾ ನಾಯಕ್ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದರು. ಸರ್ಕಾರಿ ಪಪೂ ಕಾಲೇಜಿನಲ್ಲಿ ಬಿ.ಸಿ.ಎನ್.ಪ.ಪೂ.ಕಾಲೇಜು, ಶಿಗ್ಲಿಯ ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು ೩೮೦ ವಿದ್ಯಾರ್ಥಿಗಳಲ್ಲಿ ೩೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು ೩೫೦ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಮಂಜುನಾಥ ಕೊಕ್ಕರಗುಂದಿ ಮುಖ್ಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸಿದರು.

ಈ ವೇಳೆ ಪ್ರಾಚಾರ್ಯ ಡಿ.ಎಸ್.ಪ್ಯಾಟಿ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಜಿಲ್ಲಾ ಜಾಗೃತ ದಳದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯವರು ಕೇಂದ್ರದಲ್ಲಿದ್ದರು.