ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಸಂಘರ್ಷ ಹೊಸ ತಿರುವು ಪಡೆದಿದೆ. ಆಯೋಗದ ಅಧ್ಯಕ್ಷರ ‘ಸ್ವಹಿತಾಸಕ್ತಿ’ಗೆ ಸ್ಪಂದಿಸದ ಕಾರಣ ಅವಧಿ ಮುಗಿಯುವ ಮೊದಲೇ ಹಿಂದಿನ ಕಾನೂನು ಸಲಹೆಗಾರರ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ ಎಂದು ಕಾರ್ಯದರ್ಶಿ ಕೆ.ಎಸ್.ಲತಾಕುಮಾರಿ ಆರೋಪಿಸಿದ್ದಾರೆ.ಆಯೋಗದ ಅಧ್ಯಕ್ಷರು ಮತ್ತು ಸದಸ್ಯರೊಂದಿಗೆ ಸಂಘರ್ಷದ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್ ಅವರಿಗೆ ಕೆಲವು ದಿನಗಳ ಹಿಂದೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಅದರಲ್ಲಿ ರಾಜ್ಯಪಾಲರ ಮೂಲಕ ಸದಸ್ಯರು ಮತ್ತು ಅಧ್ಯಕ್ಷರಿಗೆ ಸೂಕ್ತ ತಿಳಿವಳಿಕೆ ಕೊಡಿಸಬೇಕು ಎಂದು ಕೋರಿದ್ದಾರೆ. ಅಲ್ಲದೇ, ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್ ಅವರ ಸ್ವಹಿತಾಸಕ್ತಿ ವಿಚಾರದ ಕುರಿತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಈ ಹಿಂದೆ ಕಾನೂನು ಕೋಶದ ಮುಖ್ಯಸ್ಥರಾಗಿದ್ದ ಎಸ್.ಎಚ್.ಹೊಸಗೌಡರ್ ಸೇವಾವಧಿ 2024ರ ಅ.23ರ ವರೆಗೆ ಚಾಲ್ತಿಯಲ್ಲಿತ್ತು. ಆದರೆ, ಆಯೋಗದ ಅಧ್ಯಕ್ಷರಿಗೆ ಸಂಬಂಧಿಸಿದ ನ್ಯಾಯಾಲಯದ ವೈಯಕ್ತಿಕ ಪ್ರಕರಣದಲ್ಲಿ ವಕೀಲರಿಗೆ 12 ಲಕ್ಷ ರುಪಾಯಿಗೂ ಹೆಚ್ಚು ಶುಲ್ಕವನ್ನು ಆಯೋಗದಿಂದ ಪಾವತಿಸಬಹುದು ಎಂಬ ಅಭಿಪ್ರಾಯ ನೀಡಲು ಕೋರಲಾಗಿತ್ತು.
ಅವರ ಕೋರಿಕೆಯನ್ನು ನಿರಾಕರಿಸಿದ್ದ ಕಾನೂನು ಸಲಹೆಗಾರರು, ವೈಯಕ್ತಿಕ ಪ್ರಕರಣವಾಗಿರುವ ಕಾರಣ ಸ್ವಂತ ಹಣವನ್ನು ಪಾವತಿಸಬೇಕು ಎಂಬ ಅಭಿಪ್ರಾಯ ನೀಡಿದ್ದರು. ಹೀಗಾಗಿ, ಅವರ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ. ಬಿಡುಗಡೆ ಮಾಡಲು ಮತ್ತು ಆಯೋಗದ ಸಭೆಗೆ ಮಂಡಿಸಲು ಕಾರ್ಯದರ್ಶಿಗೆ ಸೂಚಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಕಾನೂನು ಸಲಹೆಗಾರರು ಸ್ವತಂತ್ರವಾಗಿ ಕೆಲಸ ಮಾಡಲು ಅಧ್ಯಕ್ಷರು, ಸದಸ್ಯರು ಅವಕಾಶ ನೀಡಿಲ್ಲ. ಕಾಯಂ ಅಥವಾ ಒಪ್ಪಂದದ ಹುದ್ದೆಯಾಗಿದ್ದರೂ ನಿಯಮಾನುಸಾರ ನೇಮಕ ಮಾಡಬೇಕು. ನೇಮಕಾತಿಗೆ ನಿಯಮ, ಮಾನದಂಡಗಳು ಇಲ್ಲದ ಸಂದರ್ಭದಲ್ಲಿ ‘ಸ್ವಾಭಾವಿಕ ನ್ಯಾಯ’ದ ನಿಯಮಗಳನ್ನು ಪಾಲಿಸಬೇಕು ಎಂದು ಪತ್ರದಲ್ಲೇ ಕಾರ್ಯದರ್ಶಿ ವಿವರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಗೆ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಸಂಪರ್ಕಿಸಿದಾಗ ಕರೆ ಸ್ವೀಕರಿಸಲಿಲ್ಲ.ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಬೆದರಿಕೆ, ಒತ್ತಡ, ಕಿರುಕುಳದಿಂದ ಕಚೇರಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿರುವ ಕೆಪಿಎಸ್‌ಸಿಯ ಅಧಿಕಾರಿಯೊಬ್ಬರು ಸ್ವಯಂನಿವೃತ್ತಿ ಕೋರಿದ್ದಾರೆ.
ಜ.12ರಂದು ನಡೆದಿರುವ ಆಯೋಗದ ಸಭೆಯ ನಡವಳಿಗಳನ್ನು ಕಾರ್ಯದರ್ಶಿಯವರ ಗಮನಕ್ಕೆ ತಾರದೇ ವೆಬ್‌ಸೈಟ್‌ಗೆ ನೇರವಾಗಿ ಅಪ್‌ಲೋಡ್ ಮಾಡುವಂತೆ ಒತ್ತಡ ಹಾಕಿ ಬೆದರಿಸಿದ್ದಾರೆ ಅಧಿಕಾರಿ ಆರೋಪಿಸಿದ್ದಾರೆ.ಆಯೋಗದ ಸದಸ್ಯರಾದ ವಿಜಯಕುಮಾರ್ ಕುಚನೂರೆ, ಡಾ.ಎಂ.ಬಿ.ಹೆಗಣ್ಣವರ್, ಬಿ.ವಿ.ಗೀತಾ, ಮುಸ್ತಫಾ ಹುಸೇನ್ ಸಯ್ಯದ್ ಅಜೀಜ್ ಅವರು ಗಣಕ ಕೇಂದ್ರಕ್ಕೆ ಏಕಾಏಕಿ ಬಂದು ಸಭೆಯ ನಡಾವಳಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಒತ್ತಡ ಹಾಕಿದ್ದಾರೆ. ಕಾರ್ಯದರ್ಶಿಯವರ ಅನುಮತಿ ಪಡೆದು ಹಾಕುತ್ತೇನೆ ಎಂದು ಹೇಳಿದಾಗ ಅವರ ಆದೇಶ ಏಕೆ? ಅಧ್ಯಕ್ಷರಿಗಿಂತ ಕಾರ್ಯದರ್ಶಿ ದೊಡ್ಡವರೇ ಎಂದು ಪ್ರಶ್ನಿಸಿ ಒತ್ತಡ ಹಾಕಿದ್ದಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ.
ಮೊದಲಿನಿಂದಲೂ ಕಾರ್ಯದರ್ಶಿಯವರ ಆದೇಶ ಪಡೆದೇ ಮಾಹಿತಿಯನ್ನು ವೆಬ್‌ಸೈಟ್‌ಗೆ ಪ್ರಕಟಿಸಲಾಗುತ್ತಿದೆ. ಈಗ ಆಯೋಗದಲ್ಲಿನ ಉಸಿರುಗಟ್ಟಿಸುವ ಮತ್ತು ಭಯದ ವಾತಾವರಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಸ್ವಯಂ ನಿವೃತ್ತಿ ಅಂಗೀಕರಿಸುವಂತೆ ಪತ್ರದಲ್ಲಿ ಅಧಿಕಾರಿ ಕೋರಿದ್ದಾರೆ.