ಸಾರಾಂಶ
ಜಿಲ್ಲೆಯಲ್ಲಿ 1660 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಯ ಪಿಆರ್‌ಒ ಮತ್ತು ಎಪಿಆರ್‌ಒಗಳು ಮತಗಟ್ಟೆಯಲ್ಲಿ ತಾವು ನಿರ್ವಹಿಸಬೇಕಾದ ಪ್ರತಿ ಕರ್ತವ್ಯದ ಬಗ್ಗೆ ಮನದಟ್ಟು ಹೊಂದಬೇಕು.
ಧಾರವಾಡ:
ಚುನಾವಣಾ ಕಾರ್ಯಗಳು ನಿಯಮಾನುಸಾರ ನಡೆಯುವಲ್ಲಿ ಸೆಕ್ಟರ್ ಅಧಿಕಾರಿಗಳ ಪಾತ್ರ ಬಹು ಮುಖ್ಯ. ಅವರು ಚುನಾವಣಾಧಿಕಾರಿಗೂ (ಆರ್‌ಒ) ಮತ್ತು ಮತಗಟ್ಟೆಯಲ್ಲಿನ ಪಿಆರ್‌ಒ ಅಧಿಕಾರಿಗಳಿಗೂ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು ಹೇಳಿದರು.ಜಿಲ್ಲಾ ಚುನಾವಣಾ ಅಧಿಕಾರಿಗಳ ಕಾರ್ಯಾಲಯದಿಂದ ಸೋಮವಾರ ಆಯೋಜಿಸಿದ್ದ ಸೆಕ್ಟರ್ ಅಧಿಕಾರಿಗಳಿಗೆ, ತಾಲೂಕು ಮಟ್ಟದ ಚುನಾವಣಾ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಚುನಾವಣೆ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಚುನಾವಣೆ ಯಶಸ್ವಿಗೊಳಿಸಬೇಕು. ಇದು ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡುವ ಸಂದರ್ಭ. ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ತಿಳಿದು, ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 1660 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಯ ಪಿಆರ್‌ಒ ಮತ್ತು ಎಪಿಆರ್‌ಒಗಳು ಮತಗಟ್ಟೆಯಲ್ಲಿ ತಾವು ನಿರ್ವಹಿಸಬೇಕಾದ ಪ್ರತಿ ಕರ್ತವ್ಯದ ಬಗ್ಗೆ ಮನದಟ್ಟು ಹೊಂದಬೇಕು. ಅವರಿಗೆ ಅಗತ್ಯವಿರುವ ಮಾಹಿತಿ, ತರಬೇತಿಯನ್ನು ಸೆಕ್ಟರ್ ಅಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳು ಮಾಡಬೇಕು. ಭಾರತ ಚುನಾವಣಾ ಆಯೋಗ ನೀಡಿರುವ ನಿರ್ದೇಶಗಳನ್ನು ಪ್ರತಿ ಅಧಿಕಾರಿ ಮತ್ತು ಸಿಬ್ಬಂದಿ ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು. ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಯಾವುದೇ ರೀತಿಯ ಗೊಂದಲ ಅಥವಾ ತೊಂದರೆ ಉಂಟಾದರೆ ತಕ್ಷಣ ತಮ್ಮ ಮೇಲಾಧಿಕಾರಿಗಳನ್ನು ಸಂಪರ್ಕಿಸಿ, ಅವುಗಳನ್ನು ಪರಿಹರಿಸಿಕೊಳ್ಳುವಂತೆ ತಿಳಿಸಬೇಕು ಎಂದರು.ಹುಬ್ಬಳ್ಳಿ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರಾದ ಹಿರಿಯ ಕೆಎಎಸ್ ಅಧಿಕಾರಿ ಸಿದ್ದು ಹುಲ್ಲೋಳಿ ಸೆಕ್ಟರ್ ಅಧಿಕಾರಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು. ತರಬೇತಿಯಲ್ಲಿ 280 ಜನ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.