ಸಾರಾಂಶ
ಡಾ.ಸಿ.ಎಂ.ಜೋಶಿಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಮಳೆಗಾಲ ಬಂದರೆ ಸಾಕು ತಾಲೂಕಿನ ಗುಡ್ಡಗಳ ಮೇಲಿಂದ ನೀರು ರಭಸವಾಗಿ ಹರಿಯುವ ಜಲಪಾತದ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗುಳೇದಗುಡ್ಡ ಸುತ್ತಲೂ ಹತ್ತಾರು ಕಿ.ಮೀ. ಅಂತರದಲ್ಲಿ ಗುಡ್ಡದ ಇಳಿಜಾರು ಗುಂಟ ನೀರು ರಭಸವಾಗಿ ಹರಿದು ಜಲಪಾತವಾಗಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.ಇವುಗಳಲ್ಲಿ ಹಾಲಹಂಡೆ ಜಲಪಾತ ಜನಪ್ರಿಯವಾಗಿದೆ. ಗುಡ್ಡದ ಪ್ರದೇಶದಲ್ಲಿ ನೀರಿನ ಆರ್ಭಟ, ಕಣ್ಣುಹಾಯಿಸಿದಷ್ಟು ದೂರ ಹಚ್ಚಹಸಿರಿನ ಸಿರಿ, ನೀರಿನ ಜುಳುಜುಳು ನೀನಾದ, ಮಕ್ಕಳ, ಯುವಕರ ನೀರಿನಾಟದ ಧ್ವನಿ ಕೇಳಿ ಬರುತ್ತದೆ. ತಾಲೂಕಿನ ಹಾನಾಪುರ ಎಸ್ಪಿ ಗ್ರಾಮದ ಗುಡ್ಡದ ಹಾಲಹಂಡೆ ಜಲಪಾತ ಅತ್ಯಂತ ಮನಮೋಹಕ ದೃಶ್ಯದಿಂದ ಗಮನ ಸೆಳೆಯುತ್ತದೆ. ಹಾನಾಪುರ ಎಸ್.ಪಿ. ಗ್ರಾಮದಿಂದ 1 ಕಿಮೀ ದೂರದಲ್ಲಿರುವ ಈ ಹಾಲಹಂಡೆ ಜಲಪಾತ ರಮಣೀಯ ದೃಶ್ಯ ಕಾಣಬಹುದು.
ಸುಮಾರು 80 ಅಡಿ ಎತ್ತರದಿಂದ ಧುಮ್ಮಿಕ್ಕುವ ಹಾಲಹಂಡೆ ಜಲಪಾತ ಈಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪ್ರಕೃತಿಯ ಮಡಿಲಲ್ಲಿರುವ ಈ ಜಪಾತ ಮಳೆಗಾಲದಲ್ಲಿ ತನ್ನ ಸೌಂದರ್ಯದಿಂದ ಕಣ್ಮನ ಸೆಳೆಯುತ್ತಿದೆ. ಉತ್ತಮ ಮಳೆಯಾದರೆ ಸಾಕು ಇದರ ವೈಯಾರ ಹೆಚ್ಚುತ್ತದೆ. ಮುಂಚೆ ಅಪರಿಚಿತವಾಗಿದ್ದ ಈ ಜಲಪಾತಕ್ಕೆ ಈಗ ಹೋಗಲು ಮಾರ್ಗವಿದೆ. ಕೆಳಗಡೆ ಈಜಲು ಹೊಂಡದಂತ ಸ್ಥಳವಿದೆ. ಜಲಪಾತ ಕಡೆ ಅಲ್ಲಲ್ಲಿ ಕೆಲವು ಬೃಹತ್ ಗಾತ್ರದ ಕಲ್ಲುಗಳಿದ್ದು, ನೀರಿನ ಕೆಳಗೆ ಕುಳಿತು ಜಪ ಮಾಡಲೆಂದು ಯಾರೋ ಕಲ್ಲು ಹಾಕಿದ್ದಾರೇನೋ ಎನ್ನುವ ರೀತಿಯಲ್ಲಿ ಕಾಣುತ್ತವೆ.ಹೋಗುವುದು ಹೇಗೆ?:
ಈ ಸುಂದರ ನಿಸರ್ಗ ರಮಣೀಯ ಸ್ಥಳಕ್ಕೆ ಗುಳೇದಗುಡ್ಡದಿಂದ ಹಾನಾಪುರ ಎಸ್ಪಿ ಗ್ರಾಮದ ಶಾಲೆಯ ಬಲ ಭಾಗದ ರಸ್ತೆಯಿಂದ 15-20 ನಿಮಿಷ ನಡೆದು ಮೂರಾಲ್ಕು ಹೊಲಗಳನ್ನು ದಾಟಿ ಸ್ವಲ್ಪ ಕಷ್ಟಪಟ್ಟು ಹೋದರೆ ದೂರ ಗುಡ್ಡದಲ್ಲಿ ಹಾಲ ಹಂಡೆ ಜಲಪಾತ ಕಣ್ಣಿಗೆ ಗೋಚರಿಸುತ್ತದೆ.ಗಂಜಿಗೇರಿ ಕೆರೆಯಿಂದಲೂ ಈ ಜಲಪಾತಕ್ಕೆ ಹೋಗಬಹುದು ಆದರೆ, ಈ ಗಂಜಿಗೇರಿ ಕೆರೆಯಿಂದ ಬರುವುದು ಕಷ್ಟದ ಕೆಲಸ. ಅಲ್ಲದೇ ಗಂಜಿಗೇರಿ ಕೆರೆಯವರೆಗೆ ಮಾತ್ರ ವಾಹನಗಳು ಹೋಗುತ್ತವೆ. ಅಲ್ಲಿಂದ ಗುಡ್ಡದಲ್ಲಿ ನಡೆದು 1-2 ಕಿ.ಮೀ. ಸಂಚರಿಸಬೇಕಾಗುತ್ತದೆ.ಈ ಹಾಲಹಂಡೆ ಜಲಪಾತದಿಂದ ಮುಂದೆ ಸಾಗಿದರೆ ಈಶ್ವರ ಪಡಿ ಸಿಗುತ್ತದೆ. ಇಲ್ಲಿ ಶಿವಲಿಂಗವಿದ್ದು, ಅಲ್ಲದೆ, 10-20 ಜನರು ಊಟ ಮಾಡುವ ವಿಶಾಲವಾದ ಸ್ಥಳವಿದೆ. 1937ರಿಂದ ಇಲ್ಲಿಯವರೆಗೆ ಇಲ್ಲಿ ಬಂದು ಹೋದವರು ಅಲ್ಲಿ ತಮ್ಮ ಹೆಸರು ಬರೆದಿರುವುದು ಕಂಡು ಬರುತ್ತವೆ. ಈ ಹಾಲ ಹಂಡೆ(ಹಂಡಿ) ಜಲಪಾತದಿಂದ ಹರಿಯುವ ನೀರು ಸುಮಾರು 5-6 ಕಿಮೀ ದೂರದ ಗಂಜಿಗೆರೆ, ಖಾನಾಪುರ ಬಳಿಯ ದೊಡ್ಡ ಕೆರೆ, ಪರ್ವತಿ ಬಳಿಯ ಈರಣ್ಣ ಕೆರೆಗಳಿಗೆ ಹರಿದು ಹೋಗುತ್ತದೆ.
- ಈಶ್ವರ ಪಡಿ ಪ್ರವಾಸಿಗ