‘DK, WE WILL MEET SOON...(ಡಿಕೆ ಶೀಘ್ರವೇ ಭೇಟಿಯಾಗೋಣ)’ ಮುಖ್ಯಮಂತ್ರಿ ಸ್ಥಾನದ ಕುರಿತು ಹೈಕಮಾಂಡ್‌ ನಾಯಕರು ಸ್ಪಷ್ಟಪಡಿಸುವಂತೆ ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಇಂಥದ್ದೊಂದು ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

 ಬೆಂಗಳೂರು : ‘DK, WE WILL MEET SOON...(ಡಿಕೆ ಶೀಘ್ರವೇ ಭೇಟಿಯಾಗೋಣ)’ ಮುಖ್ಯಮಂತ್ರಿ ಸ್ಥಾನದ ಕುರಿತು ಹೈಕಮಾಂಡ್‌ ನಾಯಕರು ಸ್ಪಷ್ಟಪಡಿಸುವಂತೆ ಪಟ್ಟು ಹಿಡಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಇಂಥದ್ದೊಂದು ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ನಾಯಕತ್ವ ಬದಲಾವಣೆ ಕುರಿತು ರಾಜ್ಯ ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಶಾಸಕರ ದೆಹಲಿ ಪ್ರವಾಸ ಸೇರಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಈ ಗೊಂದಲಗಳನ್ನು ಹೈಕಮಾಂಡ್‌ ನಾಯಕರು ನಿವಾರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರು ಮನವಿ ಮಾಡುತ್ತಿದ್ದಾರೆ. ಅದರ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರಿಗೆ ಡಿ.ಕೆ.ಶಿವಕುಮಾರ್‌ ಅವರಿಗೆ ರಾಹುಲ್ ಗಾಂಧಿ ಸಂದೇಶ ಕಳುಹಿಸಿದ್ದಾರೆ. ಆಮೂಲಕ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ತಾಳ್ಮೆಯಿಂದಿರುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚನೆ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. 

2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ, ರಾಹುಲ್‌ ಗಾಂಧಿ ಅವರ ಮಾರ್ಗರ್ಶನ, ಸಿದ್ದರಾಮಯ್ಯ ಮತ್ತು ಎಲ್ಲರ ಶ್ರಮದಿಂದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಸಚಿವ ಸತೀಶ್‌ ಜಾರಕಿಹೊಳಿ ಜತೆಗಿನ ಭೇಟಿ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಜಾರಕಿಹೊಳಿ ಅವರು ಪಕ್ಷದ ಹಿರಿಯ ನಾಯಕರು. ಅವರ ಜತೆಗೆ 2028ರಲ್ಲೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯತಂತ್ರ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

ನಾನು ಪಕ್ಷದ ಅಧ್ಯಕ್ಷನಾಗಿ ನಾನು, ಸತೀಶ್‌ ಜಾರಕಿಹೊಳಿ ಅವರು ಪಕ್ಷದ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, ನಾವಿಬ್ಬರೂ ಆತ್ಮೀಯ ಸ್ನೇಹಿತರು. ಇಬ್ಬರ ಬಾಂಧವ್ಯ ಚೆನ್ನಾಗಿದೆ. ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಾನು ಮತ್ತು ಸತೀಶ್‌ ಇಬ್ಬರೂ ಪ್ರಸ್ತುತ ಸಂಪುಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಅವರು ಪಕ್ಷದ ದೊಡ್ಡ ಆಸ್ತಿ. 2028 ಮತ್ತು 2029ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವ ಕುರಿತು ಇಬ್ಬರೂ ಚರ್ಚೆ ಮಾಡಿದ್ದೇವೆ ಎಂದರು.ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಉಳಿದ ಎರಡೂವರೆ ವರ್ಷಗಳಲ್ಲಿ ಏನೇನು ಕೆಲಸ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಅದನ್ನು ಬಿಟ್ಟರೆ ಬೇರೆ ಯಾವುದೇ ವಿಶೇಷ ಮಾತುಕತೆ ನಡೆಸಿಲ್ಲ ಎಂದರು. 

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ:

ಪಕ್ಷ ಸಂಘಟನೆ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್‌ ಭೇಟಿಯಾಗಿ ಚರ್ಚೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ಭೇಟಿಯಾದ ಮಾತ್ರಕ್ಕೆ ಸಿದ್ದರಾಮಯ್ಯ ಅವರಿಗೆ ನಮ್ಮ ಬೆಂಬಲದಲ್ಲಿ ಯಾವುದೇ ಬದಲಾವಣೆಯಿಲ್ಲ. ಉಳಿದಂತೆ ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷ ಸಂಘಟನೆ, ಮುಂಬರುವ ಚುನಾವಣೆ ಕುರಿತು ಚರ್ಚೆಗೆ ಡಿ.ಕೆ. ಶಿವಕುಮಾರ್‌ ಭೇಟಿಯಾಗಿದ್ದರು. ಉಳಿದ ಎಲ್ಲ ವಿಚಾರಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಅದರಲ್ಲಿ ನಮ್ಮ ಪಾತ್ರ ಇರುವುದಿಲ್ಲ. ಹೀಗಾಗಿ ಬೇರೆ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ ಎಂದರು.

ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಎಲ್ಲರನ್ನೂ ಭೇಟಿಯಾಗಿದ್ದಾರೆ. ಕೆಲವರನ್ನು ಮನೆಗೆ ಕರೆಸಿ ಭೇಟಿಯಾಗಿದ್ದರೆ, ಉಳಿದವರನ್ನು ಹೊರಗಡೆ ಭೇಟಿಯಾಗಿ ಚರ್ಚಿಸಿದ್ದಾರೆ. ನಾನು ಕೊನೆಯವನಿರಬೇಕು ಅಷ್ಟೇ. ಇನ್ನು, ನಾನು ಯಾರಿಗೂ ತಡೆಗೋಡೆಯಾಗಿಲ್ಲ. ಹೈಕಮಾಂಡ್ ಮತ್ತು ಪಕ್ಷ ಹೇಳುವಂತೆ ನಡೆದುಕೊಳ್ಳುವವನು. ಡಿ.ಕೆ.ಶಿವಕುಮಾರ್‌ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರಿಗೆ ಅವಶ್ಯಕತೆ ಇದ್ದಾಗ ಅವರು ಬಂದಿದ್ದಾರೆ, ನನಗೆ ಬೇಕಾದಾಗ ನಾನೂ ಸಾಕಷ್ಟು ಬಾರಿ ಹೋಗಿ ಅವರನ್ನು ಭೇಟಿಯಾಗಿದ್ದೇನೆ ಎಂದು ಸತೀಶ್‌ ಜಾರಕಿಹೊಳಿ ಹೇಳಿದರು.

ಪಕ್ಷದೊಳಗೆ ನಾಯಕತ್ವ ಬದಲಾವಣೆ ಕುರಿತು ಯಾವುದೇ ಚರ್ಚೆಯಿಲ್ಲ. ಅದರ ಚರ್ಚೆ ಬಂದಾಗ ಮಾತನಾಡುತ್ತೇನೆ. ಈ ಬಗ್ಗೆ ಸಂದರ್ಭ ಬಂದಾಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡುತ್ತೇನೆ ಎಂದರು.

ಡಾ.ಜಿ.ಪರಮೇಶ್ವರ್‌ ಈ ಹಿಂದೆ 8 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಹಿರಿತನವಿದೆ. ಆದರೆ, ದೆಹಲಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ. ಹಕ್ಕು ಪ್ರತಿಪಾದಿಸುವುದಷ್ಟೇ ನಮ್ಮ ಕೆಲಸ ಎಂದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಪಟ್ಟಿಯಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅಂತಹ ಸನ್ನಿವೇಶ ಈಗ ಬಂದಿಲ್ಲ ಎಂದು ಹೇಳಿದರು. 

 ಡಿ.ಕೆ.ಶಿವಕುಮಾರ್‌ ಅವರ ಮೇಲೆ ನನಗೆ ಯಾವುದೇ ಕೋಪವಿಲ್ಲ. ಇದ್ದರೂ ಅದು ತಾತ್ಕಾಲಿಕ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಡಿಕೆಶಿ ಸಿಎಂ ಆಗಲೆಂದು ಒಕ್ಕಲಿಗರ ಸಂಘ ಪೂಜೆ:ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದ ಹೊರವಲಯದ ಮಾರೇಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಒಕ್ಕಲಿಗರ ಸಂಘದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್ ನೇತೃತ್ವದಲ್ಲಿ ಬುಧವಾರ ನೂರಾರು ಅಭಿಮಾನಿಗಳು ಡಿಕೆಶಿ ಅವರ ಭಾವಚಿತ್ರ ಹಿಡಿದು ಅವರ ರಾಜಕೀಯ ಜೀವನ ಸುಗಮವಾಗಲಿ. ಅಡೆತಡೆಗಳು ದೂರವಾಗಿ ಶೀಘ್ರ ಮುಖ್ಯಮಂತ್ರಿಯಾಗಲಿ ಎಂದು ಘೋಷಣೆ ಕೂಗಿದರು. ನಂತರ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ ಪ್ರಾರ್ಥಿಸಿದರು.