ಸಾರಾಂಶ
ಅರಸೀಕೆರೆ ತಾಲೂಕಿನ ಕೊಳಗುಂದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಬೇಸಿಗೆ ಶಿಬಿರದಲ್ಲಿ 1000 ಬೀಜದುಂಡೆ ತಯಾರಿಸಿ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಹಾಕಿದರು. ಪರಿಸರ ರಕ್ಷಣೆ ಮಾಡಿದರೆ ನಮ್ಮ ರಕ್ಷಣೆ ಮಾಡಿದಂತೆ ಎಂದು ತಿಳಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲಸು, ಬೇವು, ಹುಣಸೆ, ಹೊಂಗೆ, ನೇರಳೆ ಬೀಜಗಳನ್ನು ತಂದು ಮಣ್ಣು ಸಗಣಿ ಮಿಶ್ರಣ ಮಾಡಿ ಮಣ್ಣಿನ ಉಂಡೆಗಳನ್ನು ತಯಾರಿಸಿದರು. ನೈಸರ್ಗಿಕವಾಗಿ ಸಂಪೋಷಿಸಿ ತಯಾರಿಸಿದ ಬೀಜದುಂಡಗಳನ್ನು ಎಸೆಯುವ ಮೂಲಕ ಗಿಡ ಮರಗಳನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಜೊತೆಗೆ ಬೇಸಿಗೆ ಶಿಬಿರದಲ್ಲಿ ಕ್ರೀಡಾಂಗಣ, ದೇವಾಲಯ, ಪಾರ್ಕ್, ಮನೆ, ಆಸ್ಪತ್ರೆ ಶಾಲೆಗಳ ಮಾಡೆಲ್ ತಯಾರಿಸಿ ಶಿಬಿರದ ಮಹತ್ವ ಹೆಚ್ಚಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಕೊಳಗುಂದ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಬೇಸಿಗೆ ಶಿಬಿರದಲ್ಲಿ 1000 ಬೀಜದುಂಡೆ ತಯಾರಿಸಿ ಬೆಟ್ಟದ ತಪ್ಪಲಿನ ಪ್ರದೇಶದಲ್ಲಿ ಹಾಕಿದರು.ಪರೀಕ್ಷೆಯ ನಂತರ ಶಾಲೆಯಲ್ಲಿ ಹಮ್ಮಿಕೊಂಡ ಉಚಿತ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಅನೇಕ ರಚನಾತ್ಮಕ ಕಾರ್ಯದಲ್ಲಿ ತೊಡಗಿಕೊಂಡರು. ಕಥೆ ಕವನ ಬರೆಯುವುದು, ಯೋಗ, ಪ್ರಾಣಾಯಾಮ, ಡ್ರಾಯಿಂಗ್, ಹಾಡು, ಪದ್ಯ, ಕಂಪ್ಯೂಟರ್ ಕಲಿಕೆ, ಪ್ರಾಜೆಕ್ಟ್ ಮಾಡೆಲ್ ತಯಾರಿಕೆಯ ಜೊತೆಗೆ ಪರಿಸರ ಕಾಳಜಿಯ ಬೀಜ ದುಂಡೆಗಳನ್ನು ತಯಾರಿಸಿದರು.
ಪರಿಸರ ರಕ್ಷಣೆ ಮಾಡಿದರೆ ನಮ್ಮ ರಕ್ಷಣೆ ಮಾಡಿದಂತೆ ಎಂದು ತಿಳಿದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಲಸು, ಬೇವು, ಹುಣಸೆ, ಹೊಂಗೆ, ನೇರಳೆ ಬೀಜಗಳನ್ನು ತಂದು ಮಣ್ಣು ಸಗಣಿ ಮಿಶ್ರಣ ಮಾಡಿ ಮಣ್ಣಿನ ಉಂಡೆಗಳನ್ನು ತಯಾರಿಸಿದರು. ಅದರೊಳಗೆ ಬೀಜವಿಟ್ಟು ಮುಚ್ಚಿ ಬೀಜದುಂಡೆಗಳನ್ನು ತಯಾರಿಸಿ ಹದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ ಮಳೆಗಾಲಕ್ಕೂ ಮುನ್ನ ಮಾದನಹಳ್ಳಿಯ ಸಮೀಪವಿರುವ ಬೆಟ್ಟದ ಸುತ್ತಮುತ್ತ ಬಯಲು ಪ್ರದೇಶಕ್ಕೆ ನೈಸರ್ಗಿಕವಾಗಿ ಸಂಪೋಷಿಸಿ ತಯಾರಿಸಿದ ಬೀಜದುಂಡಗಳನ್ನು ಎಸೆಯುವ ಮೂಲಕ ಗಿಡ ಮರಗಳನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಜೊತೆಗೆ ಬೇಸಿಗೆ ಶಿಬಿರದಲ್ಲಿ ಕ್ರೀಡಾಂಗಣ, ದೇವಾಲಯ, ಪಾರ್ಕ್, ಮನೆ, ಆಸ್ಪತ್ರೆ ಶಾಲೆಗಳ ಮಾಡೆಲ್ ತಯಾರಿಸಿ ಶಿಬಿರದ ಮಹತ್ವ ಹೆಚ್ಚಿಸಿದರು.ದಿನಕ್ಕೊಂದು ಕಥೆ ಕವನ ಹಾಡು ಹೇಳುವುದು ಮತ್ತು ಬರೆಯುವುದು ಶಿಬಿರದ ವಿಶೇಷವಾಗಿತ್ತು. ಬೇಸಿಗೆ ಶಿಬಿರಗಳು ಮಕ್ಕಳ ಸೃಜನಾತ್ಮಕತೆಯನ್ನು ಹೆಚ್ಚಿಸುವ ಜತೆಗೆ ಅವರ ಕಲ್ಪನೆ ಮತ್ತು ಜ್ಞಾನಕ್ಕೆ ಉತ್ತಮ ವೇದಿಕೆ ನೀಡುತ್ತಿವೆ.