ಬಿತ್ತನೆ ಬೀಜ ವಿತರಣೆ: ಖರೀದಿಗೆ ಮುಗಿಬಿದ್ದ ರೈತರು

| Published : Oct 09 2025, 02:01 AM IST

ಬಿತ್ತನೆ ಬೀಜ ವಿತರಣೆ: ಖರೀದಿಗೆ ಮುಗಿಬಿದ್ದ ರೈತರು
Share this Article
  • FB
  • TW
  • Linkdin
  • Email

ಸಾರಾಂಶ

ಕಡಲೆ ಬೀಜದ ಪ್ರತಿ ಚೀಲಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹ 910 ಇತರರಿಗೆ ₹1160 ದರದಲ್ಲಿ ವಿತರಿಸಲಾಗುತ್ತಿದೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಹಿಂಗಾರು ಹಂಗಾಮಿನ ಬಿತ್ತನೆ ಆರಂಭದ ಹಿನ್ನೆಲೆಯಲ್ಲಿ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜವನ್ನು ರೈತರು ಮುಗಿ ಬಿದ್ದು ಖರೀದಿಸುತ್ತಿರುವದು ಕಂಡು ಬಂತು.

ಹಿಂಗಾರು ಹಂಗಾಮು ಆರಂಭವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಕೆಲ ಪ್ರದೇಶಗಳಲ್ಲಿ ಹಿಂಗಾರು ಬೆಳೆಗಳಾದ ಕಡಲೆ, ಜೋಳ ಸೇರಿದಂತೆ ಅನೇಕ ಬೆಳೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ರೈತರಿಗೆ ವಿತರಿಸಲಾಗುತ್ತಿದ್ದು, ಬುಧವಾರ ಪಟ್ಟಣದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಕಡಲೆ ಹಾಗೂ ಜೋಳ ಮುಗಿಬಿದ್ದು ಖರೀದಿಸಿದರು.

ಕಡಲೆ ಬೀಜದ ಪ್ರತಿ ಚೀಲಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹ 910 ಇತರರಿಗೆ ₹1160 ದರದಲ್ಲಿ ವಿತರಿಸಲಾಗುತ್ತಿದೆ. ಪ್ರತಿ ಎಕರೆಗೆ 20ಕೆಜಿಯ ಒಂದು ಚೀಲ ವಿತರಿಸುವ ಕಾರ್ಯ ಇಲಾಖೆಯ ಸಿಬ್ಬಂದಿಗಳು ಮಾಡುತ್ತಿದ್ದಾರೆ.

ಬೇಡಿಕೆ:ಕುಷ್ಟಗಿ ತಾಲೂಕಿನ ಹೋಬಳಿಯಲ್ಲಿ 2150 ಕ್ವಿಂಟಲ್, ತಾವರಗೇರಾ ಹೋಬಳಿ 1350ಕ್ವಿಂಟಲ್, ಹನುಮನಾಳ ಹೋಬಳಿ 450 ಕ್ವಿಂಟಲ್, ಹನುಮಸಾಗರ ಹೋಬಳಿ 1100 ಕ್ವಿಂಟಲ್‌ ಸೇರಿದಂತೆ ಕುಷ್ಟಗಿ ತಾಲೂಕಿನಲ್ಲಿ 5050 ಕ್ವಿಂಟಲ್ ಬೇಡಿಕೆಯಿದೆ.

ಪೂರೈಕೆ ವಿವರ:ಕುಷ್ಟಗಿ ತಾಲೂಕಿನ ಹೋಬಳಿಯಲ್ಲಿ 617 ಕ್ವಿಂಟಲ್, ತಾವರಗೇರಾ ಹೋಬಳಿ 432.2 ಕ್ವಿಂಟಲ್, ಹನುಮನಾಳ ಹೋಬಳಿ 250 ಕ್ವಿಂಟಲ್, ಹನುಮಸಾಗರ ಹೋಬಳಿ 122.4 ಕ್ವಿಂಟಲ್‌ ಸೇರಿದಂತೆ ಒಟ್ಟು ಕುಷ್ಟಗಿ ತಾಲೂಕಿನಲ್ಲಿ 1421 ಕ್ವಿಂಟಲ್ ಪೂರೈಕೆಯಾಗಿರುವ ಪೈಕಿ ಕುಷ್ಟಗಿ ತಾಲೂಕಿನಲ್ಲಿ 543 ಕ್ವಿಂಟಲ್ ಬಿತ್ತನೆ ಬೀಜ ಮಾರಾಟವಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಸರದಿಯಲ್ಲಿ ದಾಖಲಾತಿ:ಬಿಸಿಲು ಹೆಚ್ಚಾದ ಹಿನ್ನೆಲೆಯಲ್ಲಿ ರೈತರು ತಾವು ಗಿಡದ ನೆರಳಿಗೆ ಕುಳಿತುಕೊಂಡು ಸಾಲಿನಲ್ಲಿ ಆಧಾರ ಕಾರ್ಡ ಪಹಣಿ ದಾಖಲಾತಿ ಇಟ್ಟುಕೊಂಡು ಪಾಳೆಯ ಪ್ರಕಾರ ಬಿತ್ತನೆಯ ಬೀಜ ಖರೀದಿಸಲು ಮುಂದಾದರು. ಬೀಜ ಪಡೆದವರು ಖುಷಿಯಿಂದ ನಿರ್ಗಮಿಸುತ್ತಿದ್ದರೆ, ಉಳಿದವರು ಸರದಿಗೆ ಕಾಯುತ್ತಿರುವುದು ಕಂಡುಬಂತು.

ಈಗಾಗಲೆ ಕುಷ್ಟಗಿ ತಾಲೂಕಿನ ಎಲ್ಲ ಹೋಬಳಿಯಲ್ಲಿ ಹಿಂಗಾರು ಹಂಗಾಮಿನ ಬೇಕಾಗಿರುವ ಕಡಲೆ ಹಾಗೂ ಜೋಳ ಬೀಜ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ಮಾಡುತ್ತಿದ್ದೇವೆ, ಬೇಡಿಕೆಗೆನುಸಾರವಾಗಿ ಹಂತ ಹಂತವಾಗಿ ಪೂರೈಕೆಯಾಗುತ್ತಿದೆ ಎಂದು ಕುಷ್ಟಗಿ ತಾಂತ್ರಿಕ ಅಧಿಕಾರಿ ರಾಜಶೇಖರ ತಿಳಿಸಿದ್ದಾರೆ.

ಕುಷ್ಟಗಿ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆಯ ಬೀಜ ಖರೀದಿಗೆ ಬಂದಿರುವ ರೈತರಿಗೆ ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ನಾವು ಬಿಸಿಲು ಹೆಚ್ಚಿರುವ ಕಾರಣದಿಂದ ಅನಿವಾರ್ಯವಾಗಿ ಗಿಡದ ನೆರಳಿನಲ್ಲಿ ಕುಳಿತಿದ್ದೇವೆ, ಸೌಲಭ್ಯ ಒದಗಿಸಿಕೊಡಬೇಕಾಗಿದೆ ಎಂದು ಕಡಲೆ ಬೀಜ ಖರೀದಿಗೆ ಬಂದಿರುವ ರೈತರು ತಿಳಿಸಿದ್ದಾರೆ.

ಪೋಟೊ8ಕೆಎಸಟಿ2:

ಕುಷ್ಟಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ಬಿತ್ತನೆ ಬೀಜ ಖರೀದಿಗಾಗಿ ಮುಗಿಬಿದ್ದ ರೈತರು.

8ಕೆಎಸಟಿ2ಎ: ಸರದಿ ಸಾಲಿನಲ್ಲಿ ದಾಖಲಾತಿಗಳನ್ನು ಇಟ್ಟಿರುವುದು.