ಕೃಷಿ ವಿದ್ಯಾರ್ಥಿಗಳು ಬೀಜ ಮತ್ತು ಮಣ್ಣಿನಿಂದ ಹರಡುವ ಬೆಂಕಿ ರೋಗ, ಕಂದು ಎಲೆ ಚುಕ್ಕಿ ರೋಗ, ಕಾಲುಕೊಳೆ ರೋಗ ಬೇರುಕೊಳೆ ರೋಗ, ಅಂಗಮಾರಿ ಬೂದಿರೋಗ ಮುಂತಾದ ರೋಗಗಳ ಮಾಹಿತಿ ನೀಡಿ ರೋಗಗಳು ಬರುವ ಮುನ್ನವೇ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಹೋಬಳಿಯ ದೇವರಕನಗೋನಹಳ್ಳಿಯಲ್ಲಿ ಮಂಡ್ಯದ ವಿ.ಸಿ.ಫಾರ್ಮ್ ಕೃಷಿ ಮಹಾವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಯೋಜನೆ ಅಂಗವಾಗಿ ರೈತರಿಗೆ ಬೆಳೆಗಳ ರೋಗ ನಿರ್ವಹಣೆಗಾಗಿ ಸಸಿ ಹಾಗೂ ಬೀಜೋಪಚಾರ ಪ್ರಾತ್ಯಕ್ಷಿಕೆ ನಡೆಸಿದರು.

ಗ್ರಾಮದ ಹನುಮಂತರಾಯ ದೇವಸ್ಥಾನದ ಆವರಣದಲ್ಲಿ ನಡೆದ ಪ್ರಾತ್ಯಕ್ಷಿಕೆಯಲ್ಲಿ ಕೃಷಿ ವಿದ್ಯಾರ್ಥಿಗಳು ಬೀಜ ಮತ್ತು ಮಣ್ಣಿನಿಂದ ಹರಡುವ ಬೆಂಕಿ ರೋಗ, ಕಂದು ಎಲೆ ಚುಕ್ಕಿ ರೋಗ, ಕಾಲುಕೊಳೆ ರೋಗ ಬೇರುಕೊಳೆ ರೋಗ, ಅಂಗಮಾರಿ ಬೂದಿರೋಗ ಮುಂತಾದ ರೋಗಗಳ ಮಾಹಿತಿ ನೀಡಿ ರೋಗಗಳು ಬರುವ ಮುನ್ನವೇ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

1 ಕೆಜಿ ರಾಗಿಯನ್ನು 4 ಗ್ರಾಂ ಟ್ರೈಕೋಡರ್ಮ ಎಂಬ ಜೈವಿಕ ನಿಯಂತ್ರಕ ಮತ್ತು 1 ಕೆಜಿ ಅಲಸಂದೆ ಬೀಜವನ್ನು ಸಾಫ್ (ಕಾಬೆಂಡಜಿಮ್ 12%+ಮ್ಯಾನ್ಕೋಜೆಬ್ 63%) ಶಿಲೀಂದ್ರನಾಶಕದೊಂದಿಗೆ ಬೀಜೋಪಚಾರಣೆ ಮಾಡುವ ವಿಧಾನವನ್ನು ತೋರಿಸಿಕೊಡಲಾಯಿತು. ಇದೇ ವೇಳೆ ಭತ್ತ ಮತ್ತು ಟೊಮೊಟೊ ಸಸಿಗಳನ್ನು 25ಗ್ರಾಂ/ಐ ಅಜೋಸ್ಪಿರಿಲಮ್ ಎಂಬ ಜೈವಿಕ ಗೊಬ್ಬರದೊಂದಿಗೆ ಬೀಜೋಪಚಾರ ಮಾಡುವ ಬಗ್ಗೆ ತಿಳಿಸಲಾಯಿತು.

ರೈತರಿಗೆ ಶಿಫಾರಸ್ಸು ಮಾಡಿದ ಶಿಲೀಂಧ್ರನಾಶಕವನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಬೀಜೋಪಚಾರ ಮಾಡುವುದರಿಂದ ಬೀಜ ಗಳಿಂದ ಪ್ರಸಾರವಾಗುವ ಅನೇಕ ರೋಗಗಳನ್ನು ಅತಿ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡಬಹುದು. ರೋಗರಹಿತ ಬೆಳೆ ಯಿಂದ ಅಧಿಕ ಇಳುವರಿ ಪಡೆಯಬಹುದು ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ಕೃಷಿ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ಗ್ರಾಮದಲ್ಲಿ ಕಾರ್ಯಾನುಭವ ಶಿಬಿರ ಹಮ್ಮಿಕೊಂಡು ವಿವಿಧ ಚಟುವಟಿಕೆಯಲ್ಲಿ ರೈತರನ್ನು ತೊಡಗಿಸಲಿದ್ದಾರೆ. ಪ್ರಾತ್ಯಕ್ಷಿಕೆಯಲ್ಲಿ ಅಂತಿಮ ವರ್ಷದ ಕೃಷಿಪದವಿ ವಿದ್ಯಾರ್ಥಿಗಳಾದ ಅನನ್ಯ ಎಸ್.ಪಿ ಪ್ರಜ್ವಲ್, ಪವನ್‌ ಕಲ್ಯಾಣ್, ಕೃಷ್ಣ, ಗ್ಲಾನಿಯಾಡಿಸೋಜ ಸೇರಿದಂತೆ ಗ್ರಾಮದ ಮುಖಂಡ ನಾಗೇಶ್, ಗಂಗಾಧರ್, ಮೂಡಲೀಗೌಡ, ಅರುಣ ಕೆ.ಇ.ಬಿ ಕಾರ್ತಿಕ್ ಇತರರು ಭಾಗವಹಿಸಿದ್ದರು.