ಪಾರ್ಶ್ವವಾಯು ಸಂಭವಿಸಿದ ಕೂಡಲೇ ಚಿಕಿತ್ಸೆ ಪಡೆಯಲಿ: ಡಾ.ಬಸಾರೆಡ್ಡಿ

| Published : Nov 05 2025, 02:30 AM IST

ಪಾರ್ಶ್ವವಾಯು ಸಂಭವಿಸಿದ ಕೂಡಲೇ ಚಿಕಿತ್ಸೆ ಪಡೆಯಲಿ: ಡಾ.ಬಸಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಉಂಟಾಗುವ ಸ್ಥಿತಿಯಾಗಿದ್ದು, 30 ವರ್ಷ ಮೇಲ್ಪಟ್ಟ ವ್ಯಕ್ತಿಗಳು ತಮ್ಮ ಆರೋಗ್ಯದ ಬಗ್ಗೆ 6 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸಾರೆಡ್ಡಿ ಹೇಳಿದರು.

ಬಳ್ಳಾರಿ: ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಉಂಟಾಗುವ ಸ್ಥಿತಿಯಾಗಿದ್ದು, 30 ವರ್ಷ ಮೇಲ್ಪಟ್ಟ ವ್ಯಕ್ತಿಗಳು ತಮ್ಮ ಆರೋಗ್ಯದ ಬಗ್ಗೆ 6 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಮನುಷ್ಯನಿಗೆ ಪಾರ್ಶ್ವವಾಯು ಸಂಭವಿಸಿದಾಗ ನಿರ್ಲಕ್ಷ್ಯ ವಹಿಸದೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎನ್‌. ಬಸಾರೆಡ್ಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರ, ಜಿಲ್ಲಾ ಆಸ್ಪತ್ರೆ, ಮರಿಸ್ವಾಮಿ ಮಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಬಳ್ಳಾರಿ ಸಂಯುಕ್ತಾಶ್ರಯದಲ್ಲಿ ಪ್ರತಿಕ್ಷಣವೂ (ಎಣಿಕೆ) ಮುಖ್ಯವಾಗುತ್ತದೆ’ ಎಂಬ ಘೋಷವಾಕ್ಯದಡಿ ನಗರದ 7ನೇ ವಾರ್ಡ್ ಛಲವಾದಿಗೇರಿಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸದ್ದ ವಿಶ್ವ ಸ್ಟ್ರೋಕ್ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಾರ್ಶ್ವವಾಯುವಿನ ರೋಗಲಕ್ಷಣಗಳನ್ನು ನೆನಪಿಡಲು ನಾವು ಬಿ-ಫಾಸ್ಟ್ ಎಂಬ ಸಂಕ್ಷಿಪ್ತ ರೂಪ ಬಳಸುತ್ತೇವೆ. ಪಾರ್ಶ್ವವಾಯು ವೇಳೆ ರೋಗಿಯ ದೇಹದ ಸಮತೋಲನ ತಪ್ಪುವುದು. ಕೆಲವರಲ್ಲಿ ಕುರುಡುತನವನ್ನು ಸಹ ಉಂಟುಮಾಡುತ್ತದೆ. ಮುಖದ ಒಂದು ಭಾಗ ವಕ್ರವಾಗುವುದು. ಕೈ ಅಥವಾ ಕಾಲು ಸ್ವಾಧೀನ ತಪ್ಪುವುದು. ಮಾತು ತೊದಲುವುದು, ಮಾತು ನಿಂತುಹೋಗುವುದು, ಅಥವಾ ಬೇರೆಯವರು ಮಾತನಾಡಿದ್ದು ಅರ್ಥವಾಗದೇ ಇರುವುದು. ಹೀಗೆ ನಾನಾ ಬಗೆಯ ಸಮಸ್ಯೆಗಳು ಎದುರಾಗುತ್ತವೆ. ಪಾರ್ಶ್ವವಾಯು ಸಂಭವಿಸಿದ ಮೊದಲ ನಾಲ್ಕು ಗಂಟೆಗಳಲ್ಲಿ (ಗೋಲ್ಡನ್ ಅವರ್) ರೋಗಿಗೆ ವೈದ್ಯಕೀಯ ನೆರವು ನೀಡುವ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ, ಪಾರ್ಶ್ವವಾಯುನಿಂದ ಪಾರು ಮಾಡಬಹುದಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಹಾಗೂ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್, ಪಾರ್ಶ್ವವಾಯು ಎಂದರೆ ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಅಥವಾ ಒಡೆದು ಹೋಗಿ ಅದರಿಂದ ನರಮಂಡಲದ ಮೇಲಾಗುವ ಪರಿಣಾಮಕ್ಕೆ ಪಾರ್ಶ್ವವಾಯು ಎಂದು ಕರೆಯುತ್ತಾರೆ. ಜೀವನ ಶೈಲಿಯ ಬದಲಾವಣೆಯಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದ್ದು, ನಿಯಮಿತ ಆಹಾರ ಸೇವನೆ, ಯೋಗ-ವ್ಯಾಯಾಮ, ಸಂಗೀತ ಆಲಾಪನೆ ಸೇರಿದಂತೆ ಇತರೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವ ಮೂಲಕ ಶಿಸ್ತಿನ ಜೀವನ ನಡೆಸಿ ಸುಸ್ಥಿರ ಆರೋಗ್ಯ ಹೊಂದಬೇಕು.

ಅಧಿಕ ರಕ್ತದೊತ್ತಡ, ಹೆಚ್ಚಿನ ಮಧುಮೇಹ, ತಲೆಸುತ್ತು, ರಕ್ತ ಪರಿಚಲನೆಯಲ್ಲಿ ಬದಲಾವಣೆ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ರೋಗಮುಕ್ತರಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ ಕುರಿತ ಭಿತ್ತಿಪತ್ರಗಳನ್ನು ಗಣ್ಯರು ಅನಾವರಣಗೊಳಿಸಲಾಯಿತು.

ಮಹಾನಗರ ಪಾಲಿಕೆಯ 7ನೇ ವಾರ್ಡ್ ನ ಸದಸ್ಯರಾದ ಉಮಾದೇವಿ ಶಿವರಾಜು, ಕರ್ನಾಟಕ ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಜೆ. ಶ್ರೀನಿವಾಸ, ಮರಿಸ್ವಾಮಿ ಮಠ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸೌಜನ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಖುರ್ಶಿದಾ ಬೇಗಮ್, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸಣ್ಣಕೇಶವ ಸೇರಿದಂತೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.