ಸಾರಾಂಶ
--ಕನ್ನಡಪ್ರಭ ವಾರ್ತೆ ಮೈಸೂರುಹುತಾತ್ಮರಾದ ಅರಣ್ಯ ಸಿಬ್ಬಂದಿಯ ಸೇವೆ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಹೊಣೆಗಾರಿಕೆಯೊಂದಿಗೆ ಅರಣ್ಯ ಕಾವಲುಗಾರರ ಸೇವೆ ಶ್ರೇಷ್ಠ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹೇಳಿದರು.ನಗರದ ಅಶೋಕಪುರಂನ ಅರಣ್ಯ ಭವನದ ಆವರಣದಲ್ಲಿ ಲೇಟ್ ವೆಂಕಟಸ್ವಾಮಿ ಉದ್ಯಾನದಲ್ಲಿ ಅರಣ್ಯ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇರಿಸಿದ ಬಳಿಕ ಅವರು ಮಾತನಾಡಿದರು.ಯೋಧರಂತೆ ಅರಣ್ಯ ಇಲಾಖೆ ಸಿಬ್ಬಂದಿಯ ಕಾರ್ಯವೂ ಶ್ಲಾಘನೀಯ. ಯೋಧರು ಗಡಿಯನ್ನು ಕಾದರೆ, ಅರಣ್ಯ ಸಂಪತನ್ನು ಅರಣ್ಯಇಲಾಖೆ ಸಿಬ್ಬಂದಿ ಕಾಪಾಡುತ್ತಾರೆ. ಇತ್ತೀಚೆಗೆ ಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ. ಇಂತಹ ವೇಳೆ ಅರಣ್ಯ ಇಲಾಖೆ ಜವಾಬ್ದಾರಿಯೂ ಹೆಚ್ಚಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ತವ್ಯದಲ್ಲಿರುವ ತಮ್ಮ ಜೀವವನ್ನೇ ತ್ಯಾಗ ಮಾಡಿರುವ ಸಿಬ್ಬಂದಿ ಸೇವೆ ಸ್ಮರಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೂಲಭೂತ ಹಕ್ಕುಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ನಮ್ಮ ಕರ್ತವ್ಯವನ್ನು ನಾವು ಬದಿಗಿಟ್ಟು ನಮ್ಮ ಹಕ್ಕು ಚಲಾಯಿಸಲು ನಾವು ಪ್ರಯತ್ನ ಪಡುತ್ತಿದ್ದೇವೆ ಎಂದರು.
ನಾನು ಸೇವೆಗೆ ಸೇರಿದಾಗ ಸುಮಾರು 30 ರಿಂದ 35 ಮಂದಿ ಹುತಾತ್ಮರ ಪಟ್ಟಿಯಲ್ಲಿದ್ದರು. ಆದರೆ, ಸುಮಾರು 10-12 ವರ್ಷಗಳಲ್ಲಿ ಈ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಮಾನವನ ದುರಾಸೆಯಿಂದ ಇದು ಆಗಿದೆ. ಮಾನವ ಮತ್ತು ವನ್ಯಜೀವಿ ಸಂಘರ್ಷದಲ್ಲಿ ನಮ್ಮ ಸಿಬ್ಬಂದಿಯ ತ್ಯಾಗ, ಬಲಿದಾನ ಹೆಚ್ಚಾಗುತ್ತಿದೆ ಎಂದು ಅವರು ಹೇಳಿದರು.ಈ ಭೂಮಿ ನಮ್ಮೆಲ್ಲರ ಅಗತ್ಯ ಪೂರೈಸುತ್ತದೆಯೇ ಹೊರತು ದುರಾಸೆಯನ್ನಲ್ಲ. ಎಂಬ ಗಾಂಧೀಜಿ ಮಾತನ್ನು ನೆನಪಿಸಿಕೊಳ್ಳಬೇಕು. ರಾಷ್ಟ್ರೀಯ ಅರಣ್ಯ ನೀತಿಯಲ್ಲಿ ಸುಮಾರು ಶೇ. 33ರಷ್ಟು ಭೌಗೋಳಿಕ ಪ್ರದೇಶದಲ್ಲಿ ಅರಣ್ಯ ಇರಬೇಕು ಎಂದು ಇದೆ. ಆದರೆ, ಭಾರತ, ಕರ್ನಾಟಕದಲ್ಲಿ ನೋಡಿದರೆ ಅದು ಕೇವಲ ಶೇ. 21ರಷ್ಟು ಮಾತ್ರ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಮೈಸೂರು ವಿಭಾಗದ ಡಿಸಿಎಫ್ ಡಾ.ಕೆ.ಎನ್. ಬಸವರಾಜು ಅವರು 1966 ರಿಂದ 2024 ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯದ ವೇಳೆ ಮೃತಪಟ್ಟ ಅರಣ್ಯ ಇಲಾಖೆಯ 61 ಮಂದಿ ಅಧಿಕಾರಿಗಳು, ಸಿಬ್ಬಂದಿ ಹೆಸರನ್ನು ಓದಿ ಮಡಿದರವ ಆತ್ಮಕ್ಕೆ ಶಾಂತಿ ಕೋರಿದರು.ಕಾರ್ಯಯೋಜನೆ ಘಟಕದ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ನವೀನ್, ಗೀತಾಮಣಿ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
---ಗೌರವ ನಮನ..
ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ನಗರದ ಅಶೋಕಪುರಂನ ಅರಣ್ಯ ಭವನ ಆವರಣದ ಉದ್ಯಾನದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು.ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್, ಮೈಸೂರು ವಿಭಾಗದ ಡಿಸಿಎಫ್ ಡಾ.ಕೆ.ಎನ್. ಬಸವರಾಜು, ಕಾರ್ಯಯೋಜನೆ ಡಿಸಿಎಫ್ ಲಿಂಗರಾಜು, ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಅರಣ್ಯ ಸಂಚಾರಿ ದಳದ ಡಿಸಿಎಫ್ ಚಂದ್ರಶೇಖರಗೌಡ ಸಿ. ಪಾಟೀಲ, ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಶಂಕರೇಗೌಡ, ಎಚ್.ಡಿ. ಕೋಟೆ ಉಪ ವಿಭಾಗದ ಎಸಿಎಫ್ ಅಭಿಷೇಕ್, ಎಸಿಪಿ ಜಿ. ರವೀಂದ್ರ, ಆರ್.ಎಫ್ಒ ಮುಹಮ್ಮದ್ ಜೀಷಾನ್, ಉಪ ವಲಯ ಅರಣ್ಯಾಧಿಕಾರಿ ಸಂಜೀವ್ ಪಾಟೀಲ್ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛವನ್ನಿರಿಸಿ ಗೌರವ ಸೂಚಿಸಿದರು.
ಪೊಲೀಸ್ ಬ್ಯಾಂಡ್ ನಿಂದ ರಾಷ್ಟ್ರಗೀತೆ ನುಡಿಸಲಾಯಿತು. ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಿದರು.