ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಅರೇಹಳ್ಳಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಮತಾರವರು ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಿ ಹೆರಿಗೆ ಮತ್ತು ಹೆರಿಗೆಯ ನಂತರ ತಾಯಿ ಮಗುವಿನ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆಗಳನ್ನುನೀಡಿದರು. ನಂತರ ತನ್ನ ತಾಯಿ ಹಾಗು ತಂಗಿಯ ಹುಟ್ಟುಹಬ್ಬದ ಪ್ರಯುಕ್ತ ಸೀಮಂತ ಕಾರ್ಯಕ್ರಮ ಏರ್ಪಡಿಸಿ ಸುಮಾರು 26 ತುಂಬು ಗರ್ಭಿಣಿಯರಿಗೆ ಮನೆಯಲ್ಲಿ ನೆರವೇರಿಸುವ ರೀತಿಯಲ್ಲಿ ಸಿಹಿ ತಿಂಡಿಗಳನ್ನು ಹಂಚಿ ಅರಿಶಿಣ ಕುಂಕುಮದ ಜೊತೆಗೆ, ಬಳೆ ಹಾಗು ಸೀರೆಯೊಂದಿಗೆ ಮಡಿಲು ತುಂಬಿಸಿ ಎಲ್ಲರಿಗೂ ಶುಭ ಹಾರೈಸಿದರು.ಈ ವೇಳೆ ಗರ್ಭಿಣಿಯಾದ ವಿಮಲ ಗಣೇಶ್ ಮಾತನಾಡಿ, ನಾನು ಕಳೆದ ಆರೇಳು ತಿಂಗಳಿಂದ ತಪಾಸಣೆಗಾಗಿ ಇಲ್ಲಿಗೆ ಬರುತ್ತಿದ್ದೇನೆ. ಅನೇಕರು ಸರ್ಕಾರಿ ಆಸ್ಪತ್ರೆ ಅಂದರೆ ಅಸಡ್ಡೆ ತೋರುತ್ತಾರೆ. ಆದರೆ ನನಗೆ ಇಲ್ಲಿಗೆ ಬಂದ ಮೇಲೆ ವೈದ್ಯರು ತನ್ನ ಉತ್ತಮ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಾರೆ ಎಂದು ತಿಳಿಯಿತು. ನನಗೆ ಹೆರಿಗೆಯ ಬಗ್ಗೆ ತುಂಬಾ ಭಯವಾಗಿತ್ತು. ಆದರೆ ಡಾ. ಮಮತ ಅವರು ಅದನ್ನೆಲ್ಲ ಹೋಗಲಾಡಿಸಿ ಧೈರ್ಯ ತುಂಬಿದ್ದಾರೆ. ನಾ ಕಂಡಂತೆ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸುವುದಕ್ಕೆ , ಹೆರಿಗೆಯ ವಿಷಯದಲ್ಲಿ ಬಹುತೇಕ ಸಿಬ್ಬಂದಿ ನಿರ್ಲಕ್ಷ್ಯ ತೋರಿದ ನಿದರ್ಶನಗಳಿವೆ. ಆದರೆ ಇಲ್ಲಿಯ ವೈದ್ಯಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಾರೆ. ಈ ದಿನ ನಮಗೆಲ್ಲರಿಗೂ ಮನೆಯ ರೀತಿಯಲ್ಲಿ ಸೀಮಂತ ಮಾಡಿ ಮಡಿಲು ತುಂಬಿರುವುದಕ್ಕೆ ಸಂತೋಷವಾಗಿದೆ ಎಂದರು..ಈ ವೇಳೆ ಡಾ. ಅನುಪಮ, ಮಂಗಳಮ್ಮ , ಶೃತಿ, ತಾಸಿನ, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ವರ್ಗದವರು ಹಾಜರಿದ್ದರು.