ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ (ಸ್ವಾಯತ್ತ) ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಉಪನ್ಯಾಸಕರ ಸಂಘ ಹಾಗೂ ಕುಂದಾಪುರದ ಸೃಷ್ಟಿ ಇಂಫೋಟೆಕ್ ಸಹಯೋಗದಲ್ಲಿ ಉದ್ಯೋಗ ಮೇಳ -2026ನ್ನು ಆಯೋಜಿಸಲಾಯಿತು.
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ (ಸ್ವಾಯತ್ತ) ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯ ಉಪನ್ಯಾಸಕರ ಸಂಘ ಹಾಗೂ ಕುಂದಾಪುರದ ಸೃಷ್ಟಿ ಇಂಫೋಟೆಕ್ ಸಹಯೋಗದಲ್ಲಿ ಉದ್ಯೋಗ ಮೇಳ -2026ನ್ನು ಆಯೋಜಿಸಲಾಯಿತು.ಈ ಮೇಳವನ್ನು ಉದ್ಘಾಟಿಸಿದ ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಪ್ರಶಾಂತ್ ಹೊಳ್ಳ, ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಮಾರುಕಟ್ಟೆ ಎನ್ನುವುದು ಸುಲಭದ ಮಾತಲ್ಲ, ಇಂತಹ ಉದ್ಯೋಗ ಮೇಳಗಳಲ್ಲಿ ಭಾಗವಹಿಸಿ ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಕರೆ ಕೊಟ್ಟರು.ಕಾರ್ಯಕ್ರಮದ ಮುಖ್ಯ ಅತಿಥಿ ಮಂಗಳೂರು ವಿವಿ ವಾಣಿಜ್ಯ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ. ಉದಯ ಶೆಟ್ಟಿ ಇವರು ಮಾತನಾಡುತ್ತಾ ವಿದ್ಯಾರ್ಥಿಗಳು ಅಂಕಗಳಿಗೆ ಪ್ರಾಮುಖ್ಯತೆ ಕೊಡುವುದರ ಜೊತೆಗೆ ಉದ್ಯೋಗ ನಿರ್ವಹಣೆಗೆ ಬೇಕಾದ ಜ್ಞಾನ ಹಾಗೂ ಕೌಶಲ್ಯಗಳನ್ನು ತಮ್ಮಲ್ಲಿ ಬೆಳೆಸಿಕೊಂಡಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹಿತವಚನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್., ಇಂತಹ ಉದ್ಯೋಗ ಮೇಳವನ್ನು ಪ್ರತಿವರ್ಷ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದ್ದು, ಹಲವಾರು ಜನರು ಇದರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಇಂತಹ ಅವಕಾಶಗಳನ್ನು ಕಲ್ಪಿಸುವುದು ನಮ್ಮ ವಿದ್ಯಾಸಂಸ್ಥೆಯ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಶುಭ ಹಾರೈಸಿದರು.ಕುಂದಾಪುರದ ಸೃಷ್ಟಿ ಇನ್ಫೋಟೆಕ್‌ನ ಆಡಳಿತ ನಿರ್ದೇಶಕ ಹರ್ಷವರ್ಧನ್ ಶೆಟ್ಟಿ ಉದ್ಯೋಗ ಮೇಳದ ಉಸ್ತುವಾರಿ ವಹಿಸಿದ್ದು ಯಶಸ್ಸಿಗೆ ಸಹಕರಿಸಿದರು. ಕಾಲೇಜಿನ ಪರೀಕ್ಷಾ ವಿಭಾಗದ ನಿಯಂತ್ರಣ ಅಧಿಕಾರಿ ಡಾ. ರಮೇಶ್ ಟಿ.ಎಸ್, ಅಂತರಿಕ ಗುಣಮಟ್ಟ ಖಾತರಿ ಘಟಕದ ಸಂಯೋಜಕ ಡಾ. ವಿನಯ್ ಕುಮಾರ್, ಉದ್ಯೋಗ ಮಾರ್ಗದರ್ಶನ ಘಟಕದ ಸಂಯೋಜಕ ಡಾ. ಆನಂದ ಆಚಾರ್ಯ, ವಿದ್ಯಾರ್ಥಿ ತರಬೇತಿ ಘಟಕದ ಸಂಯೋಜಕಿ ಧನ್ಯಶ್ರೀ, ಉದ್ಯೋಗ ಮೇಳದ ಸಂಯೋಜಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ನೇಹಾ ಕಾರ್ಯಕ್ರಮ ನಿರ್ವಹಿಸಿ, ಸಿಂಧೂ ಹೆಗಡೆ ಪ್ರಾರ್ಥಿಸಿದರು.
ಈ ಮೇಳದಲ್ಲಿ ಒಟ್ಟು 17 ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದು, ಸುಮಾರು 623 ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಸುಮಾರು 213 ಮಂದಿ ಮುಂದಿನ ಸುತ್ತಿಗೆ ಆಯ್ಕೆಯಾದರು ಮತ್ತು 135 ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಗೊಂಡಿದ್ದಾರೆ.