ಸಾರಾಂಶ
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಭೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಮಲೆನಾಡಿನ ರೈತರ ಜೀವನಕ್ಕೆ ಕಂಟಕಪ್ರಾಯವಾಗಿರುವ ಯೋಜನೆ ವಿರುದ್ಧ ಶೃಂಗೇರಿ ಕ್ಷೇತ್ರದ ರೈತರು, ನಾಗರಿಕರು ರಾಜಕೀಯ ಪಕ್ಷಗಳು, ವಿವಿಧ ಸಂಘ, ಸಂಸ್ಥೆಗಳ ಸಹಕಾರದಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಆ.17ರಂದು ಕೊಪ್ಪದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ತಿಳಿಸಿದ್ದಾರೆ.ಪಟ್ಟಣದಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಖಾಂಡ್ಯ, ಬಾಳೆಹೊನ್ನೂರು ಭಾಗದ ರೈತರು, ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಅವರು ಅರಣ್ಯ ಇಲಾಖೆಗೆ ಬರೆದ ಪತ್ರದಲ್ಲಿ 2015ರ ಈಚೆಗೆ ಒತ್ತುವರಿ ಜಮೀನು, ಅನಧಿಕೃತ ರೆಸಾರ್ಟ್, ಬಡಾವಣೆ, ಹೋಂಸ್ಟೇ ವಶಪಡಿಸಿಕೊಂಡು ತಿಂಗಳ ಒಳಗೆ ವರದಿ ನೀಡುವಂತೆ ಕೋರಿದ್ದಾರೆ.ಶಿರೂರು ಹಾಗೂ ವಯನಾಡು ದುರಂತದ ತರುವಾಯ ಪಶ್ಚಿಮಘಟ್ಟ ಉಳಿಸಲು ಈ ಕ್ರಮಕೈಗೊಂಡಿದೆ ಎಂದು ಸರ್ಕಾರ ಹೇಳಿದೆ. ಈಗಾಗಲೆ ಮುಂದುವರಿದ ಕ್ರಮವಾಗಿ ಸಾಗುವಳಿ ಭೂಮಿಯನ್ನು ಸರ್ವೆಮಾಡಿ ಖುಲ್ಲಾ ಮಾಡಲು ಅರಣ್ಯ ಇಲಾಖೆ ಹೊರಟಿರುವುದು ಮಲೆನಾಡಿನ ರೈತರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ 3 ತಾಲೂಕಿನ ಹೋಬಳಿಗಳಲ್ಲಿ ರೈತರ, ನಾಗರಿಕರ ಸಭೆ ನಡೆಸಲಾಗಿದ್ದು, ಬೃಹತ್ ಪ್ರತಿಭಟನೆ ಮಾಡಿ ಕ್ಷೇತ್ರದಲ್ಲಿ ಬಂದ್ ನಡೆಸಲು ಸಲಹೆಗಳು ಬಂದಿದೆ. ಎಲ್ಲಾ ನಾಗರಿಕರ, ರೈತರ ಅಭಿಪ್ರಾಯ ಪಡೆದು ಪ್ರತಿಭಟನೆ ಸ್ವರೂಪ ನಿರ್ಧರಿಸಲಾಗುವುದು ಎಂದರು. ಈಗಾಗಲೇ ರೈತರು ಫಾರಂ ನಂ. 50, 53, 57, 94ಸಿ, 94ಸಿಸಿ ಪಾರಂಪರಿಕ ಅರಣ್ಯಹಕ್ಕುಗಳ ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸಿ ಸರ್ಕಾರ ರೈತರಿಗೆ ಹಕ್ಕುಪತ್ರ ನೀಡಿಲ್ಲ. ಜೊತೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಿಲ್ಲ.
ಸೆಕ್ಷನ್ 4ರ ಮೀಸಲು ಅರಣ್ಯಕ್ಕೆ ಸಂಬಂಧಿಸಿದಂತೆ ಫಾರೆಸ್ಟ್ ಸೆಟಲ್‌ಮೆಂಟ್ ಆಫೀಸರ್ ಅಧ್ಯಯನ ಮಾಡದೆ ಅರ್ಜಿ ಇತ್ಯರ್ಥ ಪಡಿಸಿಲ್ಲ. ಡೀಮ್ಡ್ ಅರಣ್ಯ ಪ್ರಕರಣ ಬಾಕಿ ಇರುವಂತೆ ರೈತರ ಸಾಗುವಳಿ ಭೂಮಿ ತೆರವಿಗೆ ಹೊರಟಿರುವುದು ರೈತರಿಗೆ ತೊಂದರೆ ಆಗಿದೆ. ಈ ಸಮಸ್ಯೆ ಪರಿಹಾರದ ವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.ಪ್ರತಿಭಟನೆಗೆ ಮಲೆನಾಡಿನ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಪಕ್ಷಾತೀತ ಹೋರಾಟ ಮಾಡಲು ತೀರ್ಮಾನಿಸಿದೆ. ವಿವಿಧ ಸಂಘ ಸಂಸ್ಥೆಗಳ ಸಹಕಾರ ನೀಡಬೇಕು. ಇದು ಮಲೆನಾಡಿನ ಜನಜೀವನದ ಅಸ್ಥಿತ್ವದ ಪ್ರಶ್ನೆ. ಎಲ್ಲರೂ ಪಕ್ಷಾತೀತ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಕ್ಷೇತ್ರದ ಶಾಸಕರು ಈ ಕುರಿತು ಅರಣ್ಯ ಸಚಿವರು ಹಾಗೂ ಅರಣ್ಯಇಲಾಖೆಯ ಉನ್ನತ ಅಧಿಕಾರಿ, ಜಿಲ್ಲಾಧಿಕಾರಿಯನ್ನು ಮಲೆನಾಡು ಭಾಗಕ್ಕೆ ಕರೆಸಿ. ರೈತರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರ ಜುಲೈ 31ರಂದು ಪರಿಸರ ಸೂಕ್ಷ್ಮ ವಲಯದ ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರು 60 ದಿನಗಳ ಬದಲಿಗೆ 90 ದಿನಗಳ ಕಾಲಾವಕಾಶ ಕೊಡಿಸಬೇಕು. ಆಕ್ಷೇಪಣೆ ಸಲ್ಲಿಕೆಗೆ ಸ್ಥಳೀಯ ಕನ್ನಡ ಭಾಷೆಯಲ್ಲಿ ಸರ್ಕಾರಿ ಅಧಿಸೂಚನೆ ಹೊರಡಿಸ ಬೇಕು. ಭೂ ಕುಸಿತಕ್ಕೆ ಒತ್ತುವರಿಯೇ ಕಾರಣ ಎನ್ನುವ ಅರಣ್ಯ ಸಚಿವಾಲಯದ ತೀರ್ಮಾನ ಸರಿಯಲ್ಲ. ಅಭಿವೃದ್ಧಿ ಹೆಸರಲ್ಲಿ ನಡೆ ಯುತ್ತಿರುವ ರಸ್ತೆ ಅಗಲೀಕರಣ, ಎತ್ತಿನಹೊಳೆ ಯೋಜನೆಗಳು, ಎಂಪಿಎಂಗೆ ನೀಡಿದ ಅರಣ್ಯಭೂಮಿ ಲೀಸ್, ಅಕೇಶಿಯ, ನೀಲಗಿರಿ ಪ್ಲಾಂಟೇಷನ್‌ಗೆ ಬಗ್ಗೆ ಸರ್ಕಾರದ ನಿಲುವು ಏನು ಎಂದು ತಿಳಿಸಬೇಕು ಎಂದು ಆಗ್ರಹಿಸಿದರು.ಸಭೆಯಲ್ಲಿ ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಸದಸ್ಯರು, ಖಾಂಡ್ಯ, ಬಾಳೆಹೊನ್ನೂರು ಭಾಗದ ರೈತರು, ಸಾರ್ವಜನಿಕರು ಭಾಗವಹಿಸಿದ್ದರು.೧೦ಬಿಹೆಚ್‌ಆರ್ ೫:ಬಾಳೆಹೊನ್ನೂರಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಖಾಂಡ್ಯ, ಬಾಳೆಹೊನ್ನೂರು ಭಾಗದ ರೈತರು, ಸಾರ್ವಜನಿಕರ ಸಭೆ ನಡೆಯಿತು.