ಸಾರಾಂಶ
ಹರಪನಹಳ್ಳಿ: ಯಾವುದೇ ನೋಟಿಸ್ ನೀಡದೇ ದಿಢೀರನೇ ಬಂದು ನರ್ಸಿಂಗ್ ಹೋಮ್‌ಗಳ ಸ್ಕ್ಯಾನಿಂಗ್ ರೂಂಗಳನ್ನು ಸೀಜ್ ಮಾಡಿಸಿದ ಕ್ರಮ ವಿರೋಧಿಸಿ ಇಲ್ಲಿಯ ವೈದ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು.
ಮಹೇಶ ನರ್ಸಿಂಗ್ ಹೋಮ್‌ನಿಂದ ಹೊಸಪೇಟೆ ರಸ್ತೆ ಮೂಲಕ ಮೆರವಣಿಗೆ ಮೂಲಕ ಆಗಮಿಸಿದ ಕೆಪಿಎ ನೋಂದಾಯಿತ ವೈದ್ಯ ಸದಸ್ಯರು ತಾಲೂಕು ಕಚೇರಿ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ. ಮಹೇಶ, ನಮ್ಮ ಹಾಗೂ ಆಯುಷ್ ಸ್ಕ್ಯಾನ್ ಸೆಂಟರ್ ಗೆ ಆಗಮಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಕಾಂತ ಕೋಸಂಬೆ ಇತರ ಅಧಿಕಾರಿಗಳು ನೋಟಿಸ್ ಕೊಡದೆ, ಸೂಕ್ತ ಕಾರಣ ನೀಡದೆ, ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾನೂನು ಬಾಹಿರವಾಗಿ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿದ್ದಾರೆ ಎಂದು ಆರೋಪಿಸಿ ಶಾಸಕರು, ಜಿಲ್ಲಾಧಿಕಾರಿ ಗಮನ ಸೆಳೆಯುವುದಾಗಿ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಹರ್ಷ ಮಾತನಾಡಿ, ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರ ಕ್ರಮವನ್ನು ವಿರೋಧಿಸಿದರು. ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಿಗೆ ಯಾವುದೇ ಶಾಸನ ಬದ್ಧ ಅಧಿಕಾರ ಇರದಿದ್ದರೂ ಹಠಾತ್ತನೇ ಯಾವುದೇ ನೋಟಿಸ್ ನೀಡದೆ, ಸ್ಕ್ಯಾನಿಂಗ್ ಸೆಂಟರ್ ರೂಂ ಸೀಜ್ ಮಾಡಿದ್ದಾರೆ. ಆಸ್ಪತ್ರೆಯ ಸಂಬಂಧಪಟ್ಟ ಕಡತಗಳನ್ನು ಯಾವುದೇ ಅನುಮತಿ ಇಲ್ಲದೇ ವಶಪಡಿಸಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರ ಅಸಂವಿಧಾನಿಕ ನಡವಳಿಕೆ ಹಾಗೂ ಕಾನೂನುಬಾಹಿರ ಕ್ರಮ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.ಶುಕ್ರವಾರ ಪಟ್ಟಣದ ಎಲ್ಲ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್ ಗಳನ್ನು ತುರ್ತು ಚಿಕಿತ್ಸೆ ಹೊರತಾಗಿ ಪ್ರತಿಭಟನಾರ್ಥವಾಗಿ ಬಂದ್ ಮಾಡಲಾಗಿತ್ತು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರ ನಿವಾಸಕ್ಕೂ ತೆರಳಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಡಾ. ಪ್ರಶಾಂತ, ಡಾ.ಕೆ.ಎಂ.ಎನ್. ಖಾನ್, ಡಾ. ಕಿಶನ್ ಭಾಗವತ್, ಡಾ. ಸಂಗೀತ ಭಾಗವತ್, ಡಾ. ಮಂಜುನಾಥ, ಡಾ.ಹರ್ಷ ಕಟ್ಟಿ, ಡಾ.ರಾಘು ಅಧಿಕಾರ, ಡಾ.ಪ್ರಿಯಾಂಕ ಅಧಿಕಾರ, ಡಾ.ವಿಶ್ವಾರಾದ್ಯ ಸೇರಿದಂತೆ ಅನೇಕ ವೈದ್ಯರು, ಖಾಸಗಿ ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))