ಸಾರಾಂಶ
ದೇಶದ 63,000 ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಪರಿಶಿಷ್ಟ ಪಂಗಡ ಜನಾಂಗದವರು ಹೆಚ್ಚಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆಯ್ದ 14 ಗ್ರಾಮಗಳನ್ನು ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನದಡಿ ಅಭಿವೃದ್ಧಿಗೆ ಆಯ್ಕೆಯಾಗಿದ್ದು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಿರಿಸಿದ 79.156 ಕೋಟಿ ರು.ಗಳಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ದೇಶದ 63,000 ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಕೇಂದ್ರ ಬುಡಕಟ್ಟು ಮಂತ್ರಾಲಯ ಈ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊತ್ತಿದೆ. ದೇಶದ ಸುಮಾರು 5 ಕೋಟಿ ಜನರಿಗೆ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಈ ಯೋಜನೆಯು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ.2024-25ನೇ ಸಾಲಿನಿಂದ 2028-29ನೇ ಸಾಲಿನ 5 ವರ್ಷಗಳ ಈ ಅಭಿಯಾನಕ್ಕೆ ಕೇಂದ್ರ ಬುಡಕಟ್ಟು ಮಂತ್ರಾಲಯ ನೋಡಲ್ ಸಚಿವಾಲಯವಾಗಿದ್ದು, 17 ಇಲಾಖೆಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀಸಲಿರಿಸಿದ 79.156 ಕೋಟಿ ರು. ಅನುದಾನದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದಿದ್ದಾರೆ.ಜಿಲ್ಲೆಯ 14 ಗ್ರಾಮಗಳಲ್ಲಿ ಯೋಜನೆದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುಮ್ಮನಹಳ್ಳಿ, ಹಣಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೊಮ್ಮನಹಳ್ಳಿ, ಹೊಲೇರಹಳ್ಳಿ, ವೆಂಕಟೇನಹಳ್ಳಿ, ಚಿಕ್ಕತತ್ತಮಂಗಲ, ಕೆಂಪತಿಮ್ಮನಹಳ್ಳಿ, ಏರ್ತಿಗಾನಹಳ್ಳಿ, ಭುವನಹಳ್ಳಿ, ರಾಯಸಂದ್ರ, ಮೊಟ್ಟಬಾರ್ಲು, ಬಮ್ಮನಹಳ್ಳಿ, ಜೊನ್ನಹಳ್ಳಿ, ಕೊಂಡೆನಹಳ್ಳಿ, ಹೊಸಕೋಟೆಯ ವಲಗೇರೆಪುರ ಈ 14 ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು 17 ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ತಿಳಿಸಿದ್ದಾರೆ.ಬಹುಪಯೋಗಿ ತಂತ್ರಜ್ಞಾನ ಜಾರಿ
100 ಬುಡಕಟ್ಟು ಬಹು ಉಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳು, ಸರ್ಕಾರಿ, ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲ ಸೌಕರ್ಯಗಳನ್ನು ಸುಧಾರಿಸುವುದು. ಕೌನ್ಸಲಿಂಗ್ ಬೆಂಬಲ, ಅರಣ್ಯ ಹಕ್ಕು ಕಾಯ್ದೆ-2006 ಮತ್ತು ಸಮುದಾಯ ಅರಣ್ಯ ಹಕ್ಕು ನಿರ್ವಹಣೆ ಮಧ್ಯಸ್ಥಿಕೆಗಳಿಗೆ ಬೆಂಬಲ, ಯೋಜನಾ ನಿರ್ವಹಣಾ ನಿಧಿಗಳು ಉನ್ನತ ಪ್ರದರ್ಶನ ನೀಡುವ ಬುಡಕಟ್ಟು ಜಿಲ್ಲೆಗಳಿಗೆ ಪ್ರೋತ್ಸಾಹ ನೀಡುವಂತಹ ಯೋಜನೆಗಳನ್ನು ಪ್ರಧಾನಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿ ಅವಕಾಶ ಕಲ್ಪಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 14 ಗ್ರಾಮಗಳ ಎಲ್ಲಾ ಬುಡಕಟ್ಟು ಜನಾಂಗ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ವಿವರಿಸಿದ್ದಾರೆ.