ಕನ್ನಡಪ್ರಭ ವಾರ್ತೆ ಹಾಸನ
ಬೀದಿನಾಟಕ ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಕಲಾವಿದರ ಸಮಸ್ಯೆಗಳಿಗೆ ಸಂಘಟಿತವಾಗಿ ಸ್ಪಂದಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬೀದಿನಾಟಕ ಕಲಾ ತಂಡಗಳ ಒಕ್ಕೂಟದ ಹಾಸನ ಜಿಲ್ಲಾ ಘಟಕವನ್ನು ಬಲಪಡಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರ್ನಾಟಕ ರಾಜ್ಯ ಬೀದಿನಾಟಕ ಕಲಾ ತಂಡಗಳ ಒಕ್ಕೂಟ, ಬೆಂಗಳೂರು ಹಾಗೂ ಹಾಸನ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಕುಮಾರ್ ಕಟ್ಟೇಬೆಳಗುಲಿ ಹಾಗೂ ರಾಜ್ಯ ನಿರ್ದೇಶಕರಾದ ನೀಲಮ್ಮ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಬೀದಿನಾಟಕ ಕಲಾವಿದರು ಹಾಗೂ ಕಲಾ ತಂಡಗಳ ಪ್ರತಿನಿಧಿಗಳು ಭಾಗವಹಿಸಿ, ಜಿಲ್ಲೆಯಲ್ಲಿನ ಬೀದಿನಾಟಕ ಕಲೆಯ ಪ್ರಸ್ತುತ ಸ್ಥಿತಿಗತಿ, ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿದರು. ಬೀದಿನಾಟಕವು ಕೇವಲ ಮನರಂಜನೆಯ ಮಾಧ್ಯಮವಲ್ಲದೆ, ಸಮಾಜದ ವಿವಿಧ ಸಮಸ್ಯೆಗಳು, ಜನಜಾಗೃತಿ, ಸಾಮಾಜಿಕ ಬದಲಾವಣೆ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ವಿಚಾರಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವ ಪರಿಣಾಮಕಾರಿ ಕಲಾ ಮಾಧ್ಯಮವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಬೀದಿನಾಟಕಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕಲಾವಿದರು ನಿರಂತರವಾಗಿ ಮಾಡುತ್ತಿದ್ದಾರೆ. ಇಂತಹ ಕಲಾವಿದರನ್ನು ಸಂಘಟಿಸಿ, ಅವರ ಕಲಾ ಚಟುವಟಿಕೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಅಗತ್ಯವಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಜಿಲ್ಲಾ ಸಲಹಾ ಸಮಿತಿ ಸದಸ್ಯರಾಗಿ ಗುಂಡೂರಾಜ್ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷರಾಗಿ ಎಂ.ಎನ್. ಲೋಕೇಶ್, ಉಪಾಧ್ಯಕ್ಷರಾಗಿ ವೇಣುಗೋಪಾಲ್, ಕಾರ್ಯದರ್ಶಿಯಾಗಿ ದೇವರಾಜು ನೇರಲಕೆರೆ ಕೊಪ್ಪಲು, ಸಹ ಕಾರ್ಯದರ್ಶಿಯಾಗಿ ಶ್ರೀನಿವಾಸ ಕೆ.ಎಸ್., ಖಜಾಂಚಿಯಾಗಿ ಜನಕ ನಾಯಕ ಹಾಗೂ ನಿರ್ದೇಶಕರಾಗಿ ವಿಜಯಕುಮಾರ್ ಮತ್ತು ಪ್ರದೀಪ್ ರಂಗಾಯಣ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆಯೊಂದಿಗೆ ಹಾಸನ ಜಿಲ್ಲೆಯಲ್ಲಿ ಬೀದಿನಾಟಕ ಕಲಾ ತಂಡಗಳನ್ನು ಒಂದೇ ವೇದಿಕೆಯಡಿ ಸಂಘಟಿಸಿ, ಕಲಾವಿದರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಒಕ್ಕೂಟವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ತೀರ್ಮಾನಿಸಲಾಯಿತು. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀದಿನಾಟಕ ತಂಡಗಳು ಹಾಗೂ ಕಲಾವಿದರನ್ನು ಒಕ್ಕೂಟದ ಸದಸ್ಯತ್ವದ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು. ಇದೇ ಸಂದರ್ಭದಲ್ಲಿ ಒಕ್ಕೂಟದ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೂ ಅಧಿಕೃತವಾಗಿ ಚಾಲನೆ ನೀಡಲಾಯಿತು. ಜಿಲ್ಲೆಯಲ್ಲಿರುವ ಬೀದಿನಾಟಕ ಕಲಾವಿದರು ಹಾಗೂ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಂಡು ಸಂಘಟನೆಯ ಭಾಗವಾಗಬೇಕು ಎಂದು ಮುಖಂಡರು ಮನವಿ ಮಾಡಿದರು. ಬೀದಿನಾಟಕ ಕಲಾವಿದರಿಗೆ ಸರ್ಕಾರ ಹಾಗೂ ವಿವಿಧ ಇಲಾಖೆಗಳ ವತಿಯಿಂದ ದೊರೆಯುವ ಸೌಲಭ್ಯಗಳು, ಕಲಾ ಚಟುವಟಿಕೆಗಳಿಗೆ ದೊರೆಯುವ ಅವಕಾಶಗಳು ಹಾಗೂ ಕಲಾವಿದರ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕೆಲಸಕ್ಕೂ ಆದ್ಯತೆ ನೀಡಲಾಗುವುದು. ಕಲಾವಿದರಿಗೆ ನಿರಂತರವಾಗಿ ಕಾರ್ಯಕ್ರಮಗಳು ದೊರೆಯುವಂತೆ ಮಾಡಲು ಸಂಬಂಧಿಸಿದ ಇಲಾಖೆಗಳು, ಸಂಘ-ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಮನ್ವಯ ಸಾಧಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಲಾಯಿತು.