ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಉದಯೋನ್ಮುಖ ಕ್ರೀಡಾಪಟುಗಳಾದ ಮೂವರು ವಿದ್ಯಾರ್ಥಿನಿಯರು ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ನೆಟ್ ಬಾಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ತೃತೀಯ ಬಿ.ಎ. ವಿದ್ಯಾರ್ಥಿನಿ ಎಚ್.ಎಸ್. ಮಾನ್ಯ, ದ್ವಿತೀಯ ಬಿ.ಎ ವಿದ್ಯಾರ್ಥಿನಿ ಹರ್ಷಿತ ಹಾಗೂ ಪ್ರಥಮ ಬಿ.ಎ ವಿದ್ಯಾರ್ಥಿನಿ ಆರ್. ಪ್ರಿಯ ಅವರು ಮೇ 4 ರಿಂದ 7ರವರೆಗೆ ಕೇರಳ ರಾಜ್ಯದ ಕ್ಯಾಲಿಕೆಟ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ತ್ರಿಶೂರಿನಲ್ಲಿ ನಡೆಯುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ನೆಟ್ ಬಾಲ್ ಸ್ಪರ್ಧೆಗೆ ಮೈಸೂರು ವಿಶ್ವವಿದ್ಯಾನಿಲಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಈ ಕ್ರೀಡಾಪಟುಗಳ ಸಾಧನೆ ಕಾಲೇಜಿಗೆ ಕೀರ್ತಿ ಹೆಚ್ಚಿಸಿದ್ದಾರೆ. ಈಗಾಗಲೇ 29 ರಿಂದ ತರಬೇತಿ ಶಿಬಿರದಲ್ಲಿದ್ದಾರೆ ಅತ್ಯುತ್ತಮ ಸಾಧನೆಗೈದಿರುವ ಈ ಕ್ರೀಡಾಪಟುಗಳಿಗೆ ಕಾಲೇಜಿನ ಪ್ರಾಂಶುಪಾಲ ಡಾ..ಬಿ.ವಿ. ವಸಂತಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಕೆ.ಎಸ್. ಭಾಸ್ಕರ್ ಮತ್ತು ಸಿ.ಎಸ್. ಮೋಹನ್ ಹಾಗೂ ಕ್ರೀಡಾ ಸಮಿತಿಯ ಸದಸ್ಯರು, ಅಧ್ಯಾಪಕ, ಅಧ್ಯಾಪಕೇತರರು ಮತ್ತು ವಿದ್ಯಾರ್ಥಿನಿಯರು ಇವರ ಸಾಧನೆಯನ್ನು ಅಭಿನಂದಿಸಿದ್ದಾರೆ.ತೃತೀಯ ಬಿ.ಎ ವಿದ್ಯಾರ್ಥಿನಿ ಎಚ್.ಎಸ್.ಮಾನ್ಯ ಅವರು ಹಾಸನ ಜಿಲ್ಲೆ ಹೊನ್ನಶೆಟ್ಟಿಹಳ್ಳಿ ಗ್ರಾಮದ ಶಿವರಾಜೇಗೌಡ ಮತ್ತು ಲೀಲಾವತಿ ದಂಪತಿಯ ಪುತ್ರಿಯಾಗಿದ್ದು, ಹರ್ಷಿತ ದ್ವಿತೀಯ ಬಿ.ಎ ಇವರು ಮೈಸೂರು ಜಿಲ್ಲೆ ನಾಗವಾಲ ಗ್ರಾಮದ ಸಣ್ಣ ನಾಯಕ ಮತ್ತು ಮಂಜುಳಾ ದಂಪತಿಯ ಪುತ್ರಿಯಾಗಿದ್ದಾರೆ. ಹರ್ಷಿತಾ ಅವರು ಈಗಾಗಲೇ 2023-24ನೇ ಸಾಲಿನ ದಕ್ಷಿಣ ವಲಯ ಮತ್ತು 41ನೇ ರಾಷ್ಟ್ರೀಯ ನೆಟ್ ಬಾಲ್ ಚಾಂಪಿಯನ್ ಶಿಪ್ ತೆಲಂಗಾಣದ ಮಹಬೂಬ್ ನಗರದಲ್ಲಿ ನಡೆದ ಸೀನಿಯರ್ಸ್ ನ್ಯಾಷನಲ್ ನೆಟ್ ಬಾಲ್ ತಂಡದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕ ಪಡೆದಿದ್ದಾರೆ ಮತ್ತು ಪ್ರಥಮ ಬಿ.ಎ ವಿದ್ಯಾರ್ಥಿನಿ ಆರ್. ಪ್ರಿಯ ಅವರು ಚಾಮರಾಜನಗರ ಜಿಲ್ಲೆ, ಮುಳ್ಳೂರು ಗ್ರಾಮದ ರಾಘಣ್ಣ ಮತ್ತು ಶೀಲಾ ದಂಪತಿಯ ಪುತ್ರಿಯಾಗಿದ್ದಾರೆ.