ಸಾರಾಂಶ
ಭಟ್ಕಳ: ಧ್ಯಾನದಿಂದ ಆತ್ಮಜಾಗೃತಿ ಆಗುವುದರ ಜತೆಗೆ ಭಗವಂತನ ಅನುಗೃಹವೂ ಪ್ರಾಪ್ತಿ ಆಗುತ್ತದೆ ಎಂದು ನಾಮಧಾರಿ ಸಮಾಜದ ಕುಲಗುರುಗಳು ಮತ್ತು ಉಜಿರೆಯ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಕರಿಕಲ್ ಧ್ಯಾನಮಂದಿರದಲ್ಲಿ ಶುಕ್ರವಾರ ತಮ್ಮ 5ನೇ ಚಾತುರ್ಮಾಸ ವ್ರತಾಚರಣೆಯ ಕೊನೆಯ ದಿನದ ಸೀಮೋಲ್ಲಂಘನದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವನ ನೀಡಿದರು.ಧ್ಯಾನದಿಂದ ಮನಸ್ಸಿನಲ್ಲಿ ನಿಷ್ಕಲ್ಮಶ ಭಾವನೆ ಉಂಟಾಗುತ್ತದೆ. ಹೀಗಾಗಿ ದಿನಂಪ್ರತಿ ಒಂದೆರಡು ಗಂಟೆಯಾದರೂ ಧ್ಯಾನ ಮಾಡಬೇಕು. ದೇವರು, ಗುರುಗಳ ಬಗ್ಗೆ ಭಕ್ತಿ, ಶರಣಾಗತಿ ಭಾವನೆ ಭಕ್ತರಲ್ಲಿರಬೇಕು. ಅಂದಾಗ ಮಾತ್ರ ಉತ್ತಮ ಜೀವನ ಸಾಧ್ಯವಾಗುತ್ತದೆ. ಸತ್ಯ, ಧರ್ಮ, ರಾಷ್ಟ್ರೀಯತೆಯಿಂದಾಗಿ ನಮ್ಮ ಧರ್ಮವನ್ನು ಉಳಿಸಿಕೊಳ್ಳಲು ಸಾಧ್ಯ. ನಮ್ಮ ಧರ್ಮ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದ ಅವರು, ಭಟ್ಕಳದಲ್ಲಿ ನಡೆದ ಚಾತುರ್ಮಾಸ್ಯದಿಂದ ಸಂತೃಪ್ತ ಭಾವನೆ ಉಂಟಾಗಿದೆ ಎಂದರು.
ಇಲ್ಲಿನ ಶಿಷ್ಯವೃಂದ ಅತ್ಯುತ್ತಮ ರೀತಿಯಲ್ಲಿ ಚಾತುರ್ಮಾಸ್ಯವನ್ನು ಸಂಘಟಿಸಿ ಯಶಸ್ವಿಯಾಗಿಸಿದ್ದಾರೆ. ಎಲ್ಲಿ ಚಾತುರ್ಮಾಸ್ಯ ನಡೆಯುತ್ತದೋ ಅಲ್ಲಿ ಸುಭಿಕ್ಷೆ ಉಂಟಾಗುತ್ತದೆ ಎನ್ನುವ ಅಭಿಪ್ರಾಯವಿದೆ. ಚಾತುರ್ಮಾಸ್ಯದ ಯಶಸ್ವಿಗೆ ಎಲ್ಲರೂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಶ್ರೀಗಳ ಚಾತುರ್ಮಾಸ್ಯ ಅತ್ಯಂತ ಯಶಸ್ವಿಯಾಗಿದೆ ಎಂದರು.
ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಮಾತನಾಡಿ, ಕನ್ಯಾಡಿಯ ಶ್ರೀಮಠದಿಂದ ನಮ್ಮ ಸಂಸ್ಕೃತಿ, ಧಾರ್ಮಿಕತೆಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಾ ಬಂದಿರುವ ಶ್ರೀಗಳು ಅಯೋಧ್ಯೆಯಲ್ಲಿ ಶಾಖಾ ಮಠ ಸ್ಥಾಪನೆಗೆ ಮುಂದಾಗಿರುವುದು ನಮ್ಮೆಲ್ಲರ ಭಾಗ್ಯವಾಗಿದೆ ಎಂದರು.ಉತ್ತರ ಖಂಡದಿಂದ ಆಗಮಿಸಿದ್ದ ಸ್ವಾಮಿ ದೇವಾನಂದ ಸರಸ್ವತಿ ಸ್ವಾಮೀಜಿ, ಮಹಾಂತ ಇಂದಿರಾನಂದ ಸ್ವಾಮೀಜಿವರು ಆಶೀರ್ವಚನ ನೀಡಿದರು. ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಮಹಾಂತ ಕೇಶವದಾಸ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಸಾರದ ಹೊಳೆ ನಾಮಧಾರಿ ಕೂಟದ ಅಧ್ಯಕ್ಷ ಆರ್.ಕೆ. ನಾಯ್ಕ, ಮಾಜಿ ಶಾಸಕ ಸುನಿಲ್ ನಾಯ್ಕ ಮಾತನಾಡಿದರು.
ದೆಹಲಿಯ ರಾಕೇಶ ಸಿಂಗ್, ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು. ಚಾತುರ್ಮಾಸ್ಯ ಸ್ವಾಗತ ಸಮಿತಿಯ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಸ್ವಾಗತಿಸಿದರು. ಚಾತುರ್ಮಾಸ್ಯ ಸಮಿತಿಯ ಸಂಚಾಲಕ ಕೃಷ್ಣಾ ನಾಯ್ಕ ಪೃಥ್ವಿ ವಂದಿಸಿದರು. ನಾರಾಯಣ ನಾಯ್ಕ, ಗಂಗಾಧರ ನಾಯ್ಕ ನಿರೂಪಿಸಿದರು.