ಗ್ರಾಮಸ್ಥರಿಂದಲೇ ಸ್ವಯಂ ವಿದ್ಯುತ್‌ ದಿಗ್ಭಂಧನ

| Published : Aug 10 2024, 01:31 AM IST

ಗ್ರಾಮಸ್ಥರಿಂದಲೇ ಸ್ವಯಂ ವಿದ್ಯುತ್‌ ದಿಗ್ಭಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದ ಗ್ರಾಮಸ್ಥರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದನ್ನು ಖಂಡಿಸಿ ಗ್ರಾಮಸ್ಥರೇ ಮುಖ್ಯಲೈನ್‌ ಕಟ್‌ ಮಾಡಿ ಕರೆಂಟ್‌ ಬೇಡ ಎಂದು ರಾತ್ರಿಯಿಡಿ ಕತ್ತಲೆಯಲ್ಲೇ ಕಳೆದ ಘಟನೆ ತಾಲೂಕಿನ ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ನಿಡಗಲ್‌ ದುರ್ಗದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದ ಗ್ರಾಮಸ್ಥರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದನ್ನು ಖಂಡಿಸಿ ಗ್ರಾಮಸ್ಥರೇ ಮುಖ್ಯಲೈನ್‌ ಕಟ್‌ ಮಾಡಿ ಕರೆಂಟ್‌ ಬೇಡ ಎಂದು ರಾತ್ರಿಯಿಡಿ ಕತ್ತಲೆಯಲ್ಲೇ ಕಳೆದ ಘಟನೆ ತಾಲೂಕಿನ ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ನಿಡಗಲ್‌ ದುರ್ಗದಲ್ಲಿ ನಡೆದಿದೆ. ವ್ಯಕ್ತಿಯೊಬ್ಬರು ನೀಡಿದ ದೂರಿನ ಕುರಿತು ವಿಚಾರ ಮಾಡಲು ಗ್ರಾಮಕ್ಕೆ ಹೋದ ಬೆಸ್ಕಾಂ ಅಧಿಕಾರಿಗಳು ಗ್ರಾಮದಲ್ಲಿ ಬಹುತೇಕರು ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿದ್ದನ್ನು ಕಂಡು ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಆದೇಶ ನೀಡಿದ್ದೆ ಈ ಘಟನೆಗೆ ಮುಖ್ಯಕಾರಣವಾಗಿದೆ. ಬೆಸ್ಕಾಂ ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದ ಮುಖ್ಯ ಲೈನ್‌ ನ್ನೇ ಕಟ್‌ ಮಾಡಿದ್ದರು. ರಾತ್ರಿಯಿಡಿ ಕತ್ತಲೇಯಲ್ಲೆ ಕಳೆದ ಗ್ರಾಮಸ್ಥರು ಬೆಳಿಗ್ಗೆ ಈ ಕುರಿತು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವ ಉದ್ದೇಶ ಹೊಂದಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಗ್ರಾಮಸ್ಥರ ರೋಷಾವೇಷ ನೋಡಿ ಕೊನೆಗೆ ಅಕ್ರಮ ಸಂಪರ್ಕ ಸಕ್ರಮ ಮಾಡುವವರೆಗೂ ಬೆಸ್ಕಾಂ ಆಸ್ತಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡಿ ಕಟ್‌ ಮಾಡಿದ್ದ ಲೈನ್‌ ಜೋಡಿಸಿ ಮತ್ತೆ ಸಂಪರ್ಕ ಕಲ್ಪಿಸಿದ್ದು ಈಗ ತಾಲೂಕಿನಲ್ಲಿ ಸಾಕಷ್ಟು ಚರ್ಚೆಯಾಗಲು ಕಾರಣವಾಗಿದೆ. ಆಗಿದ್ದೇನು?: ತಾಲೂಕಿನ ನ್ಯಾಯದಗುಂಟೆ ಗ್ರಾಪಂ ವ್ಯಾಪ್ತಿಯ ನಿಡಗಲ್‌ ದುರ್ಗ ಆನೇಕ ವರ್ಷಗಳ ಹಿಂದೆ ನಕ್ಸಲ್‌ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಗೆ ಒಳಪಟ್ಟಿದೆ. ಇದೇ ಗ್ರಾಮದ ವಿಕಲಚೇತನ ನಾಗಭೂಷಣ್‌ ಎನ್ನುವ ವ್ಯಕ್ತಿ ಪ್ಲೂರ್‌ ಮಿಲ್‌ವೊಂದರ ಬಿಲ್ಲು ಕಟ್ಟುವ ವಿಚಾರವಾಗಿ ನಡೆದ ಬೆಳವಣಿಗೆ ಇಷ್ಟೇಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ತಾಂತ್ರಿಕ ಸಮಸ್ಯೆ ಯಿಂದ ಪ್ಲೋರ್‌ ಮಿಲ್‌ಗೆ ಎರಡು ವರ್ಷದಿಂದ ಬೆಸ್ಕಾಂ ಬಿಲ್‌ ನೀಡಿರಲಿಲ್ಲ ಎನ್ನಲಾಗಿದ್ದು, ಈಗ ಏಕಾಏಕಿ ಬಂದು 30 ಸಾವಿರ ಬಿಲ್‌ ಕಟ್ಟುವಂತೆ ಹೇಳಿದೆ. ಇದನ್ನು ಪ್ರಶ್ನಿಸಿ ಅವರು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ನಿಡಗಲ್ ಗ್ರಾಮದಲ್ಲಿ ಸುಮಾರು 70ಕುಟುಂಬಗಳು ವಾಸವಾಗಿದ್ದು ಈ ಪೈಕಿ ಹೆಚ್ಚು ಮನೆಗಳಿಗೆ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ಪಡೆಯಲಾಗಿದೆ. ವಿದ್ಯುತ್‌ ಬಿಲ್ಲು ಕಟ್ಟಿಸಿಕೊಳ್ಳುವಲ್ಲಿ ಬೆಸ್ಕಾಂ ನಿರ್ಲಕ್ಷ್ಯವಹಿಸಿದೆ ಎಂದು ಬೆಂಗಳೂರಿನ ಸಿಎಂ ಕಚೇರಿ ದೂರು ಸಲ್ಲಿಸಿದ್ದರು. ಇದೇ ವಿಚಾರವನ್ನು ಫೇಸುಬುಕ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ರಾತ್ರಿಪೂರ್ತಿ ಕಗ್ಗತ್ತಲು: ಈ ಸಂಬಂಧ ಬೆಸ್ಕಾಂ ಉಪವಿಭಾಗದ ಮೇಲಾಧಿಕಾರಿಗಳ ಆದೇಶದ ಮೇರೆಗೆ ಇಲ್ಲಿನ ಬೆಸ್ಕಾಂ ಇಲಾಖೆಯ ಎಇಇ ಕೃಷ್ಣಮೂರ್ತಿ ಹಾಗೂ ಮಂಗಳವಾಡ ಬೆಸ್ಕಾಂ ವಿಭಾಗದ ಸಹಾಯಕ ಎಂಜಿನಿಯರ್‌ ಆ.8ರಂದು ನಿಡಗಲ್‌ ಗ್ರಾಮಕ್ಕೆ ಭೇಟಿ ನೀಡಿ, ಅನಧಿಕೃತ ಮನೆಗಳ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಆದೇಶಿಸಿದ್ದರು. ಈ ಆದೇಶದ ಬೆನ್ನಲೇ ಕುಪಿತರಾದ ನಿಡಗಲ್‌ ದುರ್ಗದ ಗ್ರಾಮಸ್ಥರು ಬೆಸ್ಕಾಂ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿ ನಮ್ಮೂರಿಗೆ ಕರೆಂಟ್‌ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ಬೀದಿ ದೀಪ ಸೇರಿದಂತೆ ಎಲ್ಲ ವಿದ್ಯುತ್‌ ಲೈನ್‌ ಕಟ್‌ ಮಾಡಿದ್ದರೆನ್ನಲಾಗಿದೆ. ಇದರಿಂದ ಆ.8ರ ಗುರುವಾರ ರಾತ್ರಿ ಗ್ರಾಮಪೂರ್ತಿ ಕರೆಂಟ್‌ ಇಲ್ಲದೇ ಇಡೀ ಗ್ರಾಮ ಕಗ್ಗತ್ತಲಿಂದ ಕೂಡಿತ್ತು.

ಪ್ರತಿಭಟನೆ: ಸಮಸ್ಯೆ ನಿವಾರಣೆ ಹಿನ್ನಲೆಯಲ್ಲಿ ಆ.9ರಂದು ಶುಕ್ರವಾರ ಆರಸೀಕೆರೆ ಠಾಣೆಯ ಪೊಲೀಸ್‌ ಬಂದೋಬಸ್ತಿನೊಂದಿಗೆ ಸ್ಥಳಕ್ಕೆ ಆಗಮಿಸಿದ ಮೇರೆಗೆ ಬೆಸ್ಕಾಂನ ಎಇಇ ಹಾಗೂ ಎಇ ಲೈನ್‌ಮ್ಯಾನ್‌ ಇತರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸಲು ಮುಂದಾಗುತ್ತಿದ್ದಂತೆ ನೂರಾರು ಮಂದಿ ಬೀದಿಗಿಳಿದು ಬೆಸ್ಕಾಂ ವಿರುದ್ದ ಪ್ರತಿಭಟನೆ ನಡೆಸಿದರು. ಇಲ್ಲಿನ ನಾಗಭೂಷಣ್‌ ಎಂಬ ವಿಕಲಚೇತನ ವ್ಯಕ್ತಿ ಪ್ಲೊರ್‌ ಮಿಲ್‌ ಹಾಕಿಕೊಂಡಿದ್ದು, ಬೆಸ್ಕಾಂನಿಂದ ಮಾಹಿತಿ ನೀಡಿದರೂ ಕಳೆದ ಎರಡು ವರ್ಷದ 30ಸಾವಿರ ಕರೆಂಟ್‌ ಬಿಲ್ಲು ಕಟ್ಟುತ್ತಿಲ್ಲ. ಆತನಿಗೆ ಸೇರಿದ್ದ ಪ್ಲೋರ್‌ ಮಿಲ್‌ ವಿದ್ಯುತ್‌ ಸಂಪರ್ಕ ಕಡಿತಗೊಳಿಸದೇ ನಮ್ಮ ಮನೆಗಳ ಸಂಪರ್ಕ ಕಡಿತಕ್ಕೆ ಆದೇಶ ನೀಡಿದ್ದು ತಪ್ಪು ಎಂದು ವಾದಿಸಿದರು.

ನಕ್ಸಲ್‌ ಪೀಡಿತ ಪ್ರದೇಶವೆಂದು ಭಾಗ್ಯಜ್ಯೋತಿ: ಇಲ್ಲಿ 70ಕ್ಕಿಂತ ಹೆಚ್ಚು ಎಸ್‌ಸಿ ಎಸ್‌ಟಿ ಹಾಗೂ ಮುಸ್ಲಿಂ ಸಮುದಾಯದ ಕುಟುಂಬಗಳು ವಾಸವಿದ್ದು ಅತ್ಯಂತ ಹಿಂದುಳಿದಿದ್ದ ಕಾರಣ ನಿಡಗಲ್‌ ದುರ್ಗದ ಗ್ರಾಮವನ್ನು ನಕ್ಸಲ್‌ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಇಲ್ಲಿನ ವೆಂಕಟರಮಣಪ್ಪಶಾಸಕರಾಗಿದ್ದ ವೇಳೆ ಇಲ್ಲಿನ ಬಡ ಜನತೆಯ ಅನುಕೂಲಕ್ಕಾಗಿ ಭಾಗ್ಯಜ್ಯೋತಿ ಯೋಜನೆ ಅಡಿಯಲ್ಲಿ ಮನೆಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಟ್ಟಿದ್ದರು. ಕಳೆದ 15ವರ್ಷದಿಂದ ಕರೆಂಟ್‌ ಬಿಲ್ಲು ಕೇಳಿದವರೇ ಇಲ್ಲ. ಈಗ ಅನಧಿಕೃತ ಸಂಪರ್ಕ ಎಂದು ಪರಿಗಣಿಸಿ ಬೆಸ್ಕಾಂ ಅಧಿಕಾರಿಗಳು ಏಕಾಏಕಿ ಕಂಬದಿಂದ ಎಳೆದ ಮನೆಗಳ ವಿದ್ಯುತ್‌ ಸಂಪರ್ಕದ ವೈರು ಕಡಿತಗೊಳಿಸಿದ್ದು, ನ್ಯಾಯವೇ ನಮ್ಮ ಗ್ರಾಮಕ್ಕೆ ಕರೆಂಟ್‌ ಇಲ್ಲದಿದ್ದರೂ ನಾವು ಜೀವನ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಯಾವುದೂ ಅಕ್ರಮ ಇಲ್ಲ ಎಂದು ವಾದ: ಇದೇ ವೇಳೆ ಮುಖಂಡ ಹಾಗೂ ಮಾಜಿ ಗ್ರಾಪಂ ಸದಸ್ಯ ಮಹರಾಜ್‌ ಮಾತನಾಡಿ, ಪ್ಲೋರ್‌ ಮಿಲ್‌ ವಿದ್ಯುತ್‌ ಸಂಪರ್ಕದ ಬಿಲ್ಲು ನೀಡಿದ ವಿಚಾರ ಹಾಗೂ ಮನೆಗಳ ವಿದ್ಯುತ್‌ ಸಂಪರ್ಕದ ವಿಚಾರವಾಗಿ ಇಲ್ಲಿನ ಗ್ರಾಮದ ವ್ಯಕ್ತಿಯೊಬ್ಬ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ಹಿನ್ನಲೆಯಲ್ಲಿ ಏಕಾಎಕಿ ಗ್ರಾಮಕ್ಕೆ ಭೇಟಿ ನೀಡಿದ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡದೇ ಮನೆಗಳ ಸಂಪರ್ಕದ ವಿದ್ಯುತ್‌ ವೈರು ಕಟ್‌ ಆದೇಶ ನೀಡಿದ್ದರು. ಅತ್ಯಂತ ಹಿಂದುಳಿದಿದ್ದ ಹಿನ್ನಲೆಯಲ್ಲಿ ನಿಡಗಲ್‌ ಗ್ರಾಮ ನಕ್ಲಲ್‌ ಪೀಡಿತ ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದ್ದು ವೆಂಕಟರಮಣಪ್ಪ ಶಾಸಕರಾಗಿದ್ದ ವೇಳೆ ಭಾಗ್ಯಜ್ಯೋತಿ ಯೋಜನೆಗೆ ಸೇರ್ಪಡೆ ಮಾಡುವ ಮೂಲಕ ಮನೆಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಆದೇಶಿಸಿದ್ದರು. ಈ ಹಿನ್ನಲೆಯಲ್ಲಿ ವಿದ್ಯುತ್‌ ಸಂಪರ್ಕ ಪಡೆದಿದ್ದೇವೆ. ಅನಧಿಕೃತ ಸಂಪರ್ಕವಲ್ಲ ಎಂದು ತಳ್ಳಿಹಾಕಿದರು. ನಂತರ ಗ್ರಾಮಸ್ಥರ ಮನವಿ ಮೇರೆಗೆ ಅಕ್ರಮ ಸಂಪರ್ಕಗಳನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಿದ ನಂತರ ಪರಿಸ್ಥಿತಿ ಸುಧಾರಿಸಿತು. ಈ ವೇಳೆ ಬೆಸ್ಕಾಂ ಸಹಾಯಕ ಎಂಜಿನಿಯರ್‌ ಚೌಡಪ್ಪ ಹಾಗೂ ಹಿರಿಯ ಮುಖಂಡ ಗೋವಿಂದಪ್ಪ, ಪರಮೇಶ್‌, ಪಾಲಾಕ್ಷಿ, ಜಗದೀಶ, ಪಾಲ್ಗೂಣಪ್ಪ ಗ್ರಾಮದ ಹಿರಿಯ ಮುಖಂಡರು ಇದ್ದರು. ದೂರಿನ ಹಿನ್ನಲೆಯಲ್ಲಿ ಅನಧಿಕೃತ ವಿದ್ಯುತ್‌ ಸಂಪರ್ಕ ಪಡೆದ ಮನೆಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದೇವೆ. ಭಾಗ್ಯಜ್ಯೋತಿ ಯೋಜನೆ ಅಡಿ ವಿದ್ಯುತ್‌ ಕಲ್ಪಿಸಿದ್ದ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ. ಮೀಟರ್‌ ಆಳವಡಿಕೆಗೆ ಕಾಲವಕಾಶ ನೀಡಿದ್ದು ಈಗ ಮನೆಮನೆ ಹಾಗೂ ಬೀದಿ ದೀಪದ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡುತ್ತಿದ್ದೇವೆ. - ಕೃಷ್ಣಮೂರ್ತಿ, ಬೆಸ್ಕಾಂ ಎಇಇ