“ಐ ಆಮ್ ದ ಬೆಸ್ಟ್” ಎನ್ನುವ ಧನಾತ್ಮಕ ಚಿಂತನೆಯೇ ವ್ಯಕ್ತಿತ್ವ ವಿಕಸನದ ಮೊದಲ ಹೆಜ್ಜೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ನಮ್ಮನ್ನು ನಾವು ನಂಬಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಬದುಕಿನ ಹಲವು ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಜೀವನದಲ್ಲಿ ಸಾಧನೆ ಮಾಡಲು ಕೇವಲ ಅಂಕಗಳು ಮಾತ್ರ ಸಾಲದು; ಉತ್ತಮ ನಡವಳಿಕೆ, ಮಾನವೀಯ ಮೌಲ್ಯಗಳು ಮತ್ತು ಸಮಾಜದ ಬಗ್ಗೆ ಕಾಳಜಿಯೂ ಅಗತ್ಯವಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಹಾಸನ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಶಿಸ್ತು ಹಾಗೂ ನಿರಂತರ ಅಧ್ಯಯನವನ್ನು ಜೀವನದ ಭಾಗವನ್ನಾಗಿಸಿಕೊಂಡಲ್ಲಿ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು ಎಂದು ಖ್ಯಾತ ವೈದ್ಯ ಡಾ. ಟಿ .ಎಚ್. ಅಂಜನಪ್ಪ ಕಿವಿಮಾತು ಹೇಳಿದರು.ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಆಯೋಜಿಸಿದ್ದ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, “ಐ ಆಮ್ ದ ಬೆಸ್ಟ್” ಎನ್ನುವ ಧನಾತ್ಮಕ ಚಿಂತನೆಯೇ ವ್ಯಕ್ತಿತ್ವ ವಿಕಸನದ ಮೊದಲ ಹೆಜ್ಜೆಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನಲ್ಲಿರುವ ಸಾಮರ್ಥ್ಯವನ್ನು ಅರಿತುಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ನಮ್ಮನ್ನು ನಾವು ನಂಬಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಬದುಕಿನ ಹಲವು ಸವಾಲುಗಳನ್ನು ಸುಲಭವಾಗಿ ಎದುರಿಸಬಹುದು. ಜೀವನದಲ್ಲಿ ಸಾಧನೆ ಮಾಡಲು ಕೇವಲ ಅಂಕಗಳು ಮಾತ್ರ ಸಾಲದು; ಉತ್ತಮ ನಡವಳಿಕೆ, ಮಾನವೀಯ ಮೌಲ್ಯಗಳು ಮತ್ತು ಸಮಾಜದ ಬಗ್ಗೆ ಕಾಳಜಿಯೂ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಓದು ಮತ್ತು ಅಧ್ಯಯನಕ್ಕೆ ಪರ್ಯಾಯವೇ ಇಲ್ಲ. ಪ್ರತಿದಿನ ಹೊಸ ವಿಷಯಗಳನ್ನು ಕಲಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಸಮಯದ ಮೌಲ್ಯವನ್ನು ಅರಿತು ಶಿಸ್ತಿನಿಂದ ಬದುಕಬೇಕು ಎಂದು ಕಿವಿಮಾತು ಹೇಳಿದರು. ಇದೇ ವೇಳೆ ಆರೋಗ್ಯದ ಮಹತ್ವವನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಆರೋಗ್ಯ ಸುರಕ್ಷತಾ ಕ್ರಮಗಳು, ಸಾಮಾನ್ಯ ಕಾಯಿಲೆಗಳ ಬಗ್ಗೆ ಜಾಗೃತಿ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ಉಪಯುಕ್ತ ಮಾಹಿತಿಯನ್ನು ಹಂಚಿಕೊಂಡರು.ಕಾರ್ಯಕ್ರಮದಲ್ಲಿ “ವರ್ಷದ ವ್ಯಕ್ತಿ” ಗೌರವ ಸ್ವೀಕರಿಸಿ ಮಾತನಾಡಿದ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಸಾವಿತ್ರಿ, ಇಂದಿನ ಹದಿಹರೆಯದವರು ವಯಸ್ಸಿನ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪುತ್ತಿರುವುದು ಸಮಾಜಕ್ಕೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಯುವಜನತೆ ತಮ್ಮ ಗುರಿಯನ್ನು ಮರೆಯದೆ ಶಿಸ್ತುಬದ್ಧ ಜೀವನ ನಡೆಸಬೇಕು. ಕ್ಷಣಿಕ ಆಕರ್ಷಣೆಗಳಿಗೆ ಮಾರುಹೋಗದೆ ಶಿಕ್ಷಣ ಮತ್ತು ವ್ಯಕ್ತಿತ್ವ ನಿರ್ಮಾಣದತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾಜು ಡಿ.ಎಸ್. ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿಯೂ ಅಪಾರ ಪ್ರತಿಭೆ ಅಡಗಿದ್ದು, ಸರಿಯಾದ ಮಾರ್ಗದರ್ಶನ ಹಾಗೂ ಪರಿಶ್ರಮದಿಂದ ಅವರು ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದರು. ಕಾಲೇಜು ಕೇವಲ ಪಾಠ ಕಲಿಸುವ ಕೇಂದ್ರವಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಪವಿತ್ರ ವೇದಿಕೆಯಾಗಿದೆ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಎನ್‌ಎಸ್‌ಎಸ್ ಘಟಕದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕ್ರೀಡಾಕೂಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಸಂತಸ ಮನೆಮಾಡಿತ್ತು.ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ. ಬಸವೇಗೌಡ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ವಿವಿಧ ಸಹಪಠ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಶೈಕ್ಷಣಿಕ ಡೀನ್ ಡಾ. ಹರೀಶ್ ಎಂ.ಕೆ., ಪರೀಕ್ಷಾ ನಿಯಂತ್ರಕರಾದ ಡಾ. ಮುರಳೀಧರ ಕೆ.ಡಿ., ಯುವ ರೆಡ್ ಕ್ರಾಸ್ ಸಂಚಾಲಕ ಹೆಚ್.ಡಿ. ದೇವರಾಜು, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಕೆ.ವಿ. ಪ್ರಾರ್ಥೇಶ್, ಮಹಾಲಿಂಗಪ್ಪ, ಸ್ಕೌಟ್ ಅಂಡ್ ಗೈಡ್ಸ್ ರೇಂಜರ್‍ಸ್ ಅಂಡ್ ರೋವರ್‍ಸ್ ಘಟಕದ ಡಾ. ಸುರೇಶ್, ಡಾ, ಪ್ರಮೀಳ ವಿವಿಧ ಸಮಿತಿಗಳ ಸಂಚಾಲಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಡಾ. ಸವಿತಾ ಸ್ವಾಗತಿಸಿದರು. ಡಾ. ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು. ಡಾ. ಮಹೇಶ್ ವಂದಿಸಿದರು.