ಕನ್ನಡಪ್ರಭ ವಾರ್ತೆ ಮಧುಗಿರಿ
ಕನ್ನಡ ಸಾಹಿತ್ಯ ಲೋಕದ ಒಬ್ಬ ಅಪರೂಪದ ಕವಿಯಾಗಿದ್ದ ಮಧುರ ಚೆನ್ನರು ಆಧ್ಯಾತ್ಮಿಕ ಅನುಭವ ಮತ್ತು ಭಾವ ಜೀವನದ ಮಿಡಿತಗಳನ್ನು ತಮ್ಮ ಕವಿತೆಗಳಲ್ಲಿ ಸೊಗಸಾಗಿ ತಂದವರು ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಡಿ ಎಸ್ ಮುನೀಂದ್ರ ಕುಮಾರ್ ಅಭಿಪ್ರಾಯ ಪಟ್ಟರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ, ಐಕ್ಯೂಎಸಿ, ಅಚಲ ಕಲ್ಚರಲ್ ಫೌಂಡೇಶನ್, ಮೈಸೂರಿನ ಕವಿತಾ ಕಲಾತಂಡ ಇವರುಗಳ ಸಹಯೋಗದೊಂದಿಗೆ ಅನುಭಾವಿಯೊಂದಿಗೆ ಅನುಸಂಧಾನ ಮಧುರ ಚೆನ್ನ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಮತ್ತು ವಿಶ್ವ ತಾಯಂದಿರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮಧುರ ಚೆನ್ನರ ಸಾಹಿತ್ಯವು ಕೇವಲ ಬರವಣಿಗೆಯಾಗಿರದೆ ಅದೊಂದು ಆತ್ಮಶೋಧವಾಗಿತ್ತು. ಅವರ ಮೇಲೆ ಅರವಿಂದರ ಜೀವನ ದರ್ಶನದ ಪ್ರಭಾವ ದಟ್ಟವಾಗಿತ್ತು ಎಂದರು.
ವಿಶ್ವ ತಾಯಂದಿರ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದ ಹಿರಿಯ ಸಾಹಿತಿ ಪ್ರೊ. ಮ.ಲ.ನ. ಮೂರ್ತಿ ಅವರು ಹೆಣ್ತನದ ಹಣ್ಣು ತಾಯಿ, ಆಕೆಯ ಕರುಣೆ, ಪ್ರೀತಿ, ವಿಶ್ವಾಸಕ್ಕೆ ಆಕೆಯ ಪಾದಕ್ಕೆ ಹೂವು ಹಣ್ಣು ಕಾಯಿ ಎಂದು ಗೌರವ ಸಮರ್ಪಿಸಿದರು. ಹೆಣ್ಣು ಯೌವ್ವನದಲ್ಲಿದ್ದಾಗ ಸ್ವಾರ್ಥಕ್ಕಾಗಿ ಜೀವಿಸುವಳು, ತಾಯಿಯಾದ ಬಳಿಕ ವ್ಯಕ್ತಿತ್ವ ವಿಕಸನಗೊಂಡು ಕುಟುಂಬದ ಜವಾಬ್ದಾರಿ, ಎಲ್ಲರೊಂದಿಗೆ ಹೊಂದಿಕೊಂಡು ಬಾಳುವ ಉದಾರ ವ್ಯಕ್ತಿತ್ವ ರೂಪಿಸಿಕೊಳ್ಳುವಳು. ಆಕೆ ಕಲಿತರೆ ಕುಟುಂಬವೇ ಶಿಕ್ಷಣ ಪಡೆಯುತ್ತದೆ ಎಂದರಲ್ಲದೆ, ಕೈಗಾರಿಕಾ ಕ್ರಾಂತಿಯ ನಂತರ ಮಕ್ಕಳು ಮೂಲ ಸ್ಥಳಗಳನ್ನು ಬಿಟ್ಟು ಪಟ್ಟಣ ಸೇರಿದರು. ತಾಯಿ ಮತ್ತು ಮಕ್ಕಳ ಸಂಬಂಧ ಶಿಥಿಲಗೊಂಡವು. ಪ್ರಣಾಳ ಶಿಶುಗಳ ಪ್ರಯೋಗ ಬೆಳದಂತೆಲ್ಲ ತಾಯಿಯ ಮಹತ್ವ ಕ್ಷೀಣಿಸತೊಡಗಿತು. ಆದರೂ ತಾಯಿ ಇಲ್ಲದ ಮನೆ, ರಕ್ಷಣೆ ಇಲ್ಲದ ವ್ಯವಸ್ಥೆ. ತಾಯಿಗೆ ಗೌರವ ಕೊಡಿ, ಕುಟುಂಬವನ್ನು ಉಳಿಸಿ ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎಂ ಜಿ ಶಿವಣ್ಣ ಮಾತನಾಡಿ, ಮಧುರಚೆನ್ನರು ಅಧ್ಯಾತ್ಮ ಮತ್ತು ಶರಣರ ಅನುಭಾವ ಸಾಹಿತ್ಯದ ನಡುವೆ ಸೇತುವೆಯಂತಿದ್ದರು. ಅವರ ಬರಹಗಳಲ್ಲಿ ಬೆಳಕಿನ ಹೊಳಪು, ನಿಗೂಢತೆ ಮತ್ತು ಅತಿಂದ್ರೀಯ ಭಾವನೆಗಳು ಎದ್ದು ಕಾಣುತ್ತಿವೆ ಎಂದರು.
ಟಿವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಸಿ ಕೃಷ್ಣಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಲೋಕದ ಮಧುರ ಚೆನ್ನರು ಸಿಂಪಿಲಿಂಗಣ್ಣ ಮತ್ತು ಕಾಪಸೆ ರೇವಪ್ಪ ಅವರೊಂದಿಗೆ ಸೇರಿ ಜಾನಪದ ಸಾಹಿತ್ಯ ಮತ್ತು ಆಧ್ಯಾತ್ಮಿಕ ಕೃಷಿಯಲ್ಲಿ ತೊಡಗಿಕೊಂಡಿದ್ದ ಅಪರೂಪದ ಅನುಭಾವಿಕ ಕವಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಎಂ ಗೋವಿಂದರಾಯ ಮಾತನಾಡಿ, ಬೇಂದ್ರೆ ಮತ್ತು ಮಧುರ ಚೆನ್ನರ ನಡುವಿನ ಸ್ನೇಹ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅತ್ಯಂತ ಅಪರೂಪವಾದದ್ದು. ಇವರ ಸಂಬಂಧ ಕೇವಲ ಸಾಹಿತ್ಯಕವಾಗಿರದೆ, ಅದು ಎರಡು ಆತ್ಮಗಳ ನಡುವಿನ ಅವಿನಾಭಾವ ಸಂಬಂಧವಾಗಿತ್ತು. ಬೇಂದ್ರೆಯವರು ನಾದಲೀಲೆ ಯಾದರೆ, ಮಧುರ ಚೆನ್ನರು ಧ್ಯಾನಲೀಲೆ , ಇವರಿಬ್ಬರನ್ನೂ ಒಟ್ಟಾಗಿ ನೆನೆಯುವುದು ಕನ್ನಡ ಸಾಹಿತ್ಯದ ಎರಡು ಕಣ್ಣುಗಳನ್ನು ನೆನೆದಂತೆ ಎಂದರು.
ನಾಟಕದ ರಚನೆ ಮತ್ತು ನಿರ್ದೇಶನ ಮಾಡಿದ ಡಾ. ಗಣೇಶ ಅಮೀನಗಡ, ಪ್ರಸ್ತುತಿ ಪಡಿಸಿದ ಮಧುರ ಚೆನ್ನರ ಮೊಮ್ಮಗ ಶ್ರೀ ಜಗದೇವ ಗಲಗಲಿ, ಸಂಗೀತ ನಿರ್ದೇಶಕ ಬಿ ಆರ್ ಬನಸೋಡೆ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರೊ. ಬಿ ಮಂಜುನಾಥ್, ಕನ್ನಡ ವಿಭಾಗದ ಸಹಪ್ರಾಧ್ಯಾಪಕ ಡಾ. ಮಂಜುನಾಥ ಬುಡಸನಹಳ್ಳಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕೆ ಮುರುಳಿಧರ, ಪುರವರ ಹೋಬಳಿ ಕ ಸಾ ಪ ಅಧ್ಯಕ್ಷರಾದ ಪಿ ಜೆ ರಂಗಸ್ವಾಮಿ, ಜಯಲಕ್ಷ್ಮಮ್ಮ ಎಂ ಜಿ ಶಿವಣ್ಣ, ಅಂಚೆ ಇಲಾಖೆಯ ಜಯಶ್ರೀ, ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಎಸ್ ವಿ, ಮಂಜುನಾಥ ಪೂಜಾರಿ ಡಾ. ಕುಮಾರ್ ಬಂದ್ರೆಹಳ್ಳಿ, ಡಾ. ರಂಗಸ್ವಾಮಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.