ರೋಣ: ಮಹಿಳಾ ಸಬಲೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ನೆರವಾಗುವಂತೆ ಏ. 9ರಂದು ಸ್ವಯಂ ಉದ್ಯೋಗ ತರಬೇತಿ ಹಾಗೂ ಏ. 10ರಂದು ಉದ್ಯೋಗ ಕ್ರಾಂತಿ(ಮೇಳ) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಅವರು ಪಟ್ಟಣದ ರಾಜೀವಗಾಂಧಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಜನ್ಮದಿನದ ಅಂಗವಾಗಿ ಕುಟುಂಬ ವರ್ಗದವರು, ಅಭಿಮಾನಿಗಳು, ಕಾರ್ಯಕರ್ತರು ಹಮ್ಮಿಕೊಂಡಿರುವ ಉದ್ಯೋಗ ಕ್ರಾಂತಿ ಕಾರ್ಯಕ್ರಮ ಅಂಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವಲ್ಲಿ ಏ. 9ರಂದು ಸ್ವಯಂ ಉದ್ಯೋಗ ತರಬೇತಿ ಜರುಗಲಿದೆ. ಅಂದು ನಟಿ ಕಾರುಣ್ಯ ರಾಮ್ ಆಗಮಿಸಲಿದ್ದಾರೆ. ಸಣ್ಣ ಸಣ್ಣ ಪಟ್ಟಣ ಪ್ರದೇಶದ ಮಹಿಳೆಯರು ಮನೆಯಲ್ಲಿ ಕುಳಿತು ಉದ್ಯೋಗ ಮಾಡುವಂತಾಗಲಿ ಎಂಬ ಮಹದಾಸೆಯಿಂದ ವರ್ಕ್ ಫ್ರಂ ಹೋಂ ನೀಡುವ ಹೆಚ್ಚು ಕಂಪನಿಗಳನ್ನೇ ಉದ್ಯೋಗ ಕ್ರಾಂತಿಗೆ ಆಹ್ವಾನಿಸಲಾಗಿದೆ ಎಂದರು.

ಏ. 10ರಂದು ಉದ್ಯೋಗ ಕ್ರಾಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನೂರಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಜಿಗಳೂರ ರಸ್ತೆಯಲ್ಲಿ ನಿರ್ಮಿಸಲಾದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಹಾಗೂ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಾಣಗೊಂಡ ಈಜುಕೊಳ ಉದ್ಘಾಟನೆಗೊಳ್ಳಲಿವೆ ಎಂದರು.

ಕಾರ್ಯಕ್ರಮಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಆಗಮಿಸಲಿದ್ದಾರೆ ಎಂದರು.


ಉದ್ಯೋಗ ಕ್ರಾಂತಿಯನ್ನು ಮತ್ತಷ್ಟು ಆಕರ್ಷಣೆ ಮಾಡಲು ಚಿತ್ರನಟಿ ಕಾರುಣ್ಯ ರಾಮ್ ಅವರನ್ನು ಆಹ್ವಾನಿಸಲಾಗಿದೆ ಎಂದರು.

ಸ್ಪಂದನಾ ಮಹಿಳಾ ಮಂಡಳ ಅಧ್ಯಕ್ಷೆ ಶಶಿಕಲಾ ಎಸ್. ಪಾಟೀಲ ಮಾತನಾಡಿ, ಮಹಿಳೆಯರು ತಾವಿದ್ದ ಸ್ಥಳದಿಂದಲೇ ಕೆಲಸ ಮಾಡಿಕೊಡಲು ಅನುಕೂಲ ಕಲ್ಪಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ವಿವಿಧ ಸ್ವಸಹಾಯ ಸಂಘಗಳು ಉತ್ಪಾಧಿಸುವ ರೊಟ್ಟಿ, ಸಂಡಿಗೆ, ಹಪ್ಪಳ, ಚಟ್ನಿ ಹೀಗೆ ಸ್ಥಳೀಯವಾಗಿ ತಯಾರಿಸುವ ಪದಾರ್ಥಗಳನ್ನು ಮಾರ್ಕೆಂಟಿಂಗ್ ಮಾಡಲು ಸ್ವಸಹಾಯ ಸಂಘಗಳಿಗೆ ನೆರವಾಗಲಿದ್ದೇವೆ. ಹೀಗಾಗಿ ಇದಕ್ಕೆ ಉದ್ಯೋಗ ಕ್ರಾಂತಿ ಎಂದು ಹೆಸರಿಡಲಾಗಿದೆ ಎಂದರು.

ಉದ್ಯೋಗ ಕ್ರಾಂತಿಯ ರೂವಾರಿ ಭವ್ಯಾ ಮಾತನಾಡಿ, ಯುವಕ ಯುವತಿಯರು ಮನೆಯಲ್ಲಿ ಕುಳಿತು ಉದ್ಯೋಗ ಮಾಡುವಂತಾಗಲಿ ಎಂಬ ಉದ್ದೇಶದಿಂದ ವರ್ಕ್ ಫ್ರಂ ಹೋಂಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ ಎಂದರು.

ಅಕ್ಷಯ್ ಪಾಟೀಲ ಮಾತನಾಡಿ, ಸಾರ್ವಜನಿಕರ ಬದುಕಿಗೆ ಅನುಕೂಲವಾಗಲು ಉದ್ಯೋಗ ಕ್ರಾಂತಿ ನೆರವಾಗುತ್ತದೆ. ನಿರುದ್ಯೋಗ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಅಕ್ಷಯ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಡಾ. ಐ.ಬಿ. ಕೊಟ್ಟೂರಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.