ಸದೃಢ ಹಾಗೂ ಶಿಸ್ತುಬದ್ದವಾದ ಸಂಘಟನೆಯಿಂದಾಗಿ ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಬಹು ಮಹತ್ವದ ಕೊಡುಗೆಯನ್ನು ಸಲ್ಲಿಸುತ್ತಿವೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಪ್ರಬಂಧಕ ಹನುಮಂತಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಸದೃಢ ಹಾಗೂ ಶಿಸ್ತುಬದ್ದವಾದ ಸಂಘಟನೆಯಿಂದಾಗಿ ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳು ದೇಶದ ಆರ್ಥಿಕ ಅಭಿವೃದ್ಧಿಗೆ ಬಹು ಮಹತ್ವದ ಕೊಡುಗೆಯನ್ನು ಸಲ್ಲಿಸುತ್ತಿವೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನ ಪ್ರಬಂಧಕ ಹನುಮಂತಪ್ಪ ಹೇಳಿದರು.ಸೋಮವಾರ ತಾಲೂಕಿನ ಹೋತನಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಬೆಂಗಳೂರು, ಕೆನರಾ ಆರ್ಥಿಕ ಸಲಹಾ ಟ್ರಸ್ಟ್ ಬೆಂಗಳೂರು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಹಾಗೂ ಸ್ಥಳೀಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ವತಿಯಿಂದ ನಬಾರ್ಡ್ ಆರ್ಥಿಕ ಸೇರ್ಪಡೆ ನಗದು ರಹಿತ ವ್ಯವಹಾರ ಮತ್ತು ಆರ್ಥಿಕ ಸಾಕ್ಷರತೆಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ಅತ್ಯಂತ ಕ್ರಿಯಾತ್ಮಕವಾಗಿ ಆರ್ಥಿಕ ಚಟುವಟಿಕೆ ಮಾಡುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು, ಸಾಲ ಪಡೆದು ಸ್ವಾವಲಂಬನೆ ಮತ್ತು ಆದಾಯ ಉತ್ಪನ್ನ ಯೋಜನೆ ಮೂಲಕ ಸಂಘದ ಸದಸ್ಯರ ಕುಟುಂಬದ ಅಭಿವೃದ್ಧಿಗೆ ಪ್ರೇರಣೆಯಾಗಿದೆ ಎಂದರು.ಪ್ರಸ್ತುತ ಆರ್ಥಿಕ ಸಾಕ್ಷರತೆ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಅತ್ಯಂತ ಪ್ರಚಲಿತವಾಗಿತ್ತಿರುವ ನಗದು ರಹಿತ ವ್ಯವಹಾರಕ್ಕೆ ಕೇಂದ್ರ ಸರ್ಕಾರ ಅತ್ಯಂತ ಮಹತ್ವವನ್ನು ನೀಡಿದೆ. ಆದರೆ ವಂಚಕರು ಖಾತೆದಾರರಿಗೆ ಮೋಸದಿಂದ ಹಣ ವಂಚನೆ ಮಾಡುತ್ತಿದ್ದು, ವಿವಿಧ ರೂಪಗಳಲ್ಲಿ ಆಮಿಷ ತೋರಿಸುತ್ತಾರೆ, ವಂಚಕರ ಮೋಸಕ್ಕೆ ಬಲಿಯಾಗದೆ ಹಣದ ಸುರಕ್ಷತೆಯನ್ನು ಜಾಗೃತೆಯಿಂದ ಆಯ್ಕೆಮಾಡಿಕೊಳ್ಳಬೇಕು ಎಂದು ವಿವರಿಸಿದರು.
ಸ್ಥಳೀಯ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಮಾತನಾಡಿ, ಪ್ರತಿಯೊಬ್ಬರೂ ನೆಮ್ಮದಿ ಹಾಗೂ ಗೌರವಯುತವಾಗಿ ಬದುಕಲು ಹಣದ ಉಳಿತಾಯ ಅತೀ ಅವಶ್ಯಕವಾಗಿದೆ. ಆದರೆ ಉಳಿತಾಯದ ಹಣ ಕಷ್ಟದ ಸಂದರ್ಭದಲ್ಲಿ ಮರಳಿ ಬರುವ ಖಾತರಿಯೊಂದಿಗೆ ಹೂಡಿಕೆ ಮಾಡಬೇಕು ಹಾಗೂ ಉಳಿತಾಯದ ಹಣ, ಸಂಪತ್ತು ನಮ್ಮ ಬಳಿ ಉಳಿಯಲು ಅನಿರೀಕ್ಷಿತವಾಗಿ ಬರುವ ಖಾಯಿಲೆ, ಅವಘಡಗಳಿಗೆ ಸಂಬಂಧಿಸಿದಂತೆ ಬಳಸಿಕೊಳ್ಳಲು ಪೂರಕವಾಗಿ ಸಣ್ಣ ಮೊತ್ತದ ಆರೋಗ್ಯ ವಿಮೆ ಕೂಡ ಅವಶ್ಯಕ ಎಂದರು. ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯನ್ನು ಎಲ್ಲರೂ ಕೇವಲ ರು.20 ಮತ್ತು ರು.436 ಪಾವತಿಸಿ ವಿಮಾ ವ್ಯಾಪ್ತಿಗೊಳಪಟ್ಟಲ್ಲಿ ಆಪತ್ಕಾಲದಲ್ಲಿ ರು.4 ಲಕ್ಷ ಪರಿಹಾರ ದೊರೆಯಲಿದೆ ಎಂದರು.ಸ್ವ-ಸಹಾಯ ಗುಂಪಿನವರು ಶಿಸ್ತು ಬದ್ದವಾಗಿ ಮತ್ತು ನಿಯಮಿತವಾಗಿ ಸಭೆ ನಡೆಸಿ ಪುಸ್ತಕ-ದಾಖಲಾತಿಗಳ ನಿರ್ವಹಣೆ ಪಾರದರ್ಶಕವಾಗಿದ್ದಲ್ಲಿ ಹೆಚ್ಚು ಸಾಲ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಪಡೆದ ಸಾಲ ಸೌಲಭ್ಯವನ್ನು ಕಡ್ಡಾಯವಾಗಿ ಆದಾಯ ಉತ್ಪನ್ನ ಚಟುವಟಿಕೆಗೆ ವಿನಿಯೋಗಿಸುವ ಜತೆಗೆ ವಿವಿಧ ಇಲಾಖೆಯಿಂದ ದೊರೆಯುವ ಸಾಲ ಸೌಲಭ್ಯವನ್ನು ಬಳಸಿಕೊಂಡು ಆದಾಯ ಉತ್ಪನ್ನವನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕು ಎಂದರು. ಆರ್‌ಬಿಐ ಮಾಹಿತಿಯಂತೆ ಉಳಿತಾಯ ಖಾತೆಯಲ್ಲಿ ಉಳಿದಿರುವ ಹಳೆಯ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಕೆವೈಸಿ ಮತ್ತು ಪಾಸ್ಬುಕ್ ಸಮರ್ಪಕ ಮಾಹಿತಿ ಜತೆಗೆ ಸಮೀಪದ ಸಂಬಂದಿಸಿದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ವೇದಿಕೆಯಲ್ಲಿ ಕೆನರಾ ಬ್ಯಾಂಕ್ ಸಾಲೂರು ಶಾಖೆ ಪ್ರಬಂಧಕ ಹರೀಶ್ ಮರಿಗೌಡರ್, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅಧಿಕಾರಿ ಹೊನ್ನಪ್ಪ, ಗ್ರಾಪಂ ಕಾರ್ಯದರ್ಶಿ ಶ್ರೀನಿವಾಸ್, ಗ್ರಾಪಂ ಮಾಜಿ ಉಪಾಧ್ಯಕ್ಷೆ ಗೌರಿಬಾಯಿ ಮತ್ತಿತರರು ಉಪಸ್ಥಿತರಿದ್ದರು.