ಸ್ವ ಸಹಾಯ ಸಂಘಗಳಿಗೆ ಡಿಜಿಟಲ್‌ ಕೌಶಲ ಅಗತ್ಯ

| Published : Jul 11 2024, 01:34 AM IST

ಸ್ವ ಸಹಾಯ ಸಂಘಗಳಿಗೆ ಡಿಜಿಟಲ್‌ ಕೌಶಲ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ಮೂಲಕ ಗ್ರಾಮದ ಯುವಕರಿಗೆ, ಸ್ವ-ಸಹಾಯ ಸಂಘಗಳಿಗೆ ಡಿಜಿಟಲ್ ಕೌಶಲ ಅಗತ್ಯವಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ಮೂಲಕ ಗ್ರಾಮದ ಯುವಕರಿಗೆ, ಸ್ವ-ಸಹಾಯ ಸಂಘಗಳಿಗೆ ಡಿಜಿಟಲ್ ಕೌಶಲ ಅಗತ್ಯವಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಹೇಳಿದರು.

ನವನಗರದ ಜಿಪಂ ಸಂಪನ್ಮೂಲ ಕೇಂದ್ರದಲ್ಲಿ ಗ್ರಾಮ ಡಿಜಿಟಲ್ ವಿಕಸನ ಕಾರ್ಯಕ್ರಮದಡಿ ಉತ್ತರ ಕರ್ನಾಟಕ ವಿಭಾಗದ 11 ಜಿಲ್ಲೆಗಳ ಜಿಲ್ಲಾ ಸಂಯೋಜನಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರೇತರ ಸಂಸ್ಥೆಗಳು ಇಲಾಖೆಯ ಜೊತೆ ಕೈಜೋಡಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ಇಂದಿನ ಜನರಿಗೆ ತಂತ್ರಜ್ಞಾನದ ಅರಿವು ಮೂಡಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.

ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಗ್ರಾಮೀಣ ಮಹಿಳೆಯರ ಅಭಿವೃದ್ಧಿ ಹೊಂದುವುದು ಅವಶ್ಯ. ಜೊತೆಗೆ ಗ್ರಾಮದಲ್ಲಿರುವ ಪ್ರತಿಯೊಬ್ಬರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅವಶ್ಯವಾಗಿರುವ ಜ್ಞಾನ ಮತ್ತು ಸಾಮರ್ಥ್ಯ ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಪಂಚಾಯತ ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಸಂಸ್ಥೆ ಸಹಯೋಗದಲ್ಲಿ ರಾಜ್ಯದಲ್ಲಿ 5000 ಆಯ್ದ ಗ್ರಾಪಂ ಗ್ರಂಥಾಲಯಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ರಾಜ್ಯದ 6 ಲಕ್ಷ ಸ್ವ-ಸಹಾಯ ಸಂಘದ ಮಹಿಳಾ ಪ್ರತಿನಿಧಿಗಳಿಗೆ ಈ ಕಾರ್ಯಕ್ರಮದ ಮೂಲಕ ದೈನಂದಿನ ಜೀವನ ನಿರ್ವಹಣೆಗೆ ಅವಶ್ಯವಾದ ಡಿಜಿಟಲ್ ಸಾಕ್ಷರತೆ ತರಬೇತಿ ನೀಡಲಾಗುತ್ತಿದೆ ಎಂದರು.

ಬಹು ನಿರೀಕ್ಷಿತ ತಂತ್ರಜ್ಞಾನದ ಸಾಗರದಲ್ಲಿ ಇಂದಿನ ವಿದ್ಯಾರ್ಥಿಗಳು ಮುಳುಗಿರುವುದು ಶೋಚನೀಯ. ವಿದ್ಯಾರ್ಥಿಗಳನ್ನು ತರಗತಿಯ ಪಾಠದೊಳಗೆ ತಲ್ಲೀನರಾಗುವಂತೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕನಿಗೆ ಸಹಾಯಕನಂತೆ ಕೆಲಸ ನಿರ್ವಹಿಸಲು ಶಿಕ್ಷಾಕೊಪೈಲಟ್. ಈ ಸ್ವಯಂ ಬುದ್ಧಿಮತ್ತೆಯ ಸಹಾಯಕನಿಂದ ಶಿಕ್ಷಕರು ಕ್ಷಣಾರ್ಧದಲ್ಲಿಯೇ ಪಾಠದ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬಹುದಾಗಿದೆ. ಹೊಸ ಹೊಸ ನಾವಿನ್ಯತೆಯ ಪಾಠದ ಮಾದರಿಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳನ್ನು ಪಾಠದಲ್ಲಿ ತೊಡಗಿಡಿಕೊಳ್ಳಬಹುದಾಗಿದೆ ಎಂದರು.

ಯುವಕರು ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ತಂತ್ರಜ್ಞಾನ ಕೌಶಲ್ಯಗಳನ್ನು ಪಡೆದುಕೊಳ್ಳುವುದರ ಮುಖಾಂತರ ಹಾಗೂ ವೃತ್ತಿ ಮಾರ್ಗಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಸಬಲರಾಗುವಂತೆ ಮಾಡಲು ಡಿಜಿಟಲ್ ಇನ್ಕ್ಲೂಷನ್ ಸೆಂಟರ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸಹಾಯಕ ನಿರ್ದೇಶಕ ವೆಂಕಟೇಶ ತಿಮ್ಮನಾಯ್ಕರ, ಶಿಕ್ಷಣ ಫೌಂಡೇಷನ್ ಉತ್ತರ ವಲಯ ಅಧಿಕಾರಿ ಶರಣಪ್ಪ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸಮಾಲೋಚನೆ ಸಭೆಯಲ್ಲಿ ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ಯಾದಗಿರಿ, ವಿಜಯನಗರ, ಬಳ್ಳಾರಿ, ಗದಗ, ಕೊಪ್ಪಳ, ಚಿಕ್ಕೋಡಿ, ಬೀದರ, ರಾಯಚೂರ ಜಿಲ್ಲೆಯ ಶಿಕ್ಷಣ ಫೌಂಡೇಶನ್ ಡಿಜಿಟಲ್ ಮಾಸ್ಟರ ತರಬೇತುದಾರರು ಪಾಲ್ಗೊಂಡಿದ್ದರು.--

ಕೋಟ್‌

ಯುವಕರು ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ತಂತ್ರಜ್ಞಾನ ಕೌಶಲ್ಯಗಳನ್ನು ಪಡೆದುಕೊಳ್ಳುವುದರ ಮುಖಾಂತರ ಹಾಗೂ ವೃತ್ತಿ ಮಾರ್ಗಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಸಬಲರಾಗುವಂತೆ ಮಾಡಲು ಡಿಜಿಟಲ್ ಇನ್ಕ್ಲೂಷನ್ ಸೆಂಟರ್ ಕಾರ್ಯಕ್ರಮದ ಉದ್ದೇಶವಾಗಿದೆ

-ಅಮರೇಶ ನಾಯಕ ಜಿಪಂ ಉಪಕಾರ್ಯದರ್ಶಿ