ಕೊಪ್ಪಳ: ಸ್ವಂತಿಕೆ ಮತ್ತು ಸ್ವಾವಲಂಬನೆ ಯುವಕರ ಮಂತ್ರವಾಗಬೇಕು ಎಂದು ಸಿವಿಸಿ ಫೌಂಡೇಶನ್ ಮಹಾಪೋಷಕ ಸಿ.ವಿ.ಚಂದ್ರಶೇಖರ್ ಹೇಳಿದರು.

ನಗರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ನಿಮಿತ್ತ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಸಂದು ಎಂಟು ದಶಕಗಳಾಗಿವೆ. ಮಾನಸಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿ ನಾವು ಪಶ್ಚಿಮಾತ್ಯ ಮಾದರಿಗಳಿಗೆ ಜೋತು ಬಿದ್ದಿದ್ದೇವೆ. ಈ ನೆಲದ ಗುಣ ಅಳವಡಿಸಿಕೊಂಡಿಲ್ಲ. ವೈಚಾರಿಕ ಸ್ವಾತಂತ್ರ್ಯ ನಮಗೆ ಇನ್ನೂ ಸಿಗಬೇಕಿದೆ. ಆದ್ದರಿಂದ ಯುವಕರು ಭಾರತೀಯತೆ, ಭಾರತೀಯ ವಿಚಾರಧಾರೆ ಹಾಗೂ ಭಾರತೀಯ ಸಿದ್ಧಾಂತ ಮರು ಆವಿಷ್ಕರಿಸಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಪಶ್ಚಿಮಾತ್ಯ ಮಾದರಿ ಅನುಸರಿಸಿ ಆ ವಿಚಾರಧಾರೆ ಅನುಸರಿಸುತ್ತಿರುವುದು ಅನೇಕ ಸಮಸ್ಯೆ ಸೃಷ್ಟಿಸಿದೆ. ಭಾರತೀಯ ವಿಚಾರಧಾರೆ ಎರಡನೇ ದರ್ಜೆ ಎಂಬ ಭಾವನೆ ಬಿತ್ತಲಾಗಿದೆ. ಇಂತಹ ವ್ಯವಸ್ಥೆ ಬದಲಾಯಿಸಿ ಭಾರತೀಯತೆ ಬೆಳೆಸಿಕೊಳ್ಳಬೇಕೆಂದರು.

ಸ್ವಾವಲಂಬನೆ ಯುವಕರ ಮಂತ್ರವಾಗಬೇಕು. ಯುವಕರು ಉದ್ಯಮಿಗಳಾಗಬೇಕು. ಬೇರೆಯವರ ಮೇಲೆ ಅವಲಂಬನೆ ತಪ್ಪಿಸಿದಾಗ ಭಾರತ ಸದೃಢವಾಗಲು ಸಾಧ್ಯ. ಸಂಶೋಧನೆ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿವೆ. ಯುವಕರು ಅದನ್ನು ಬಳಸಿಕೊಳ್ಳಬೇಕು ಎಂದು ಕರೆ ಕೊಟ್ಟರು.


ಯುವಕರಿಗೆ ವೇದಿಕೆ ಒದಗಿಸಲು ಫೌಂಡೇಶನ್ ಅನೇಕ ಕಾರ್ಯಕ್ರಮ ಆಯೋಜಿಸುತ್ತಿದೆ. ಸ್ವಾತಂತ್ರೋತ್ಸವ ನಿಮಿತ್ತ ಆಯೋಜಿಸಲಾದ ಪ್ರಬಂಧ ಸ್ಪರ್ಧೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿಕ್ಷಣ ಮುಗಿಸಿದ ಯುವಕ ಯುವತಿಯರಿಗೆ ಶೀಘ್ರದಲ್ಲಿಯೇ ಉದ್ಯೋಗ ಮೇಳ ಆಯೋಜಿಸಲಾಗುವುದು. ಅವರು ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡಲಾಗುವುದು ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ ಕಾಲಘಟ್ಟದಲ್ಲಿ ಕೌಶಲ್ಯ ಬೆಳೆಸಿಕೊಳ್ಳುವುದು ಅಗತ್ಯ. ವೈಷಮ್ಯ ಹಾಗೂ ದ್ವೇಷ ಪಸರಿಸಲು ಸಾಮಾಜಿಕ ಜಾಲತಾಣ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ಆದ್ದರಿಂದ ವಿಚಾರದಲ್ಲಿ ಸ್ವಂತಿಕೆ ಯುವಕರು ಬೆಳೆಸಿಕೊಳ್ಳಬೇಕು. ಸರಿ ತಪ್ಪುಗಳ ನಡುವಿನ ವ್ಯತ್ಯಾಸ ತಿಳಿದು ಮುನ್ನಡೆಯಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹ್ರದ್ರೋಗ ತಜ್ಞ ಡಾ. ಮಹೇಂದ್ರ ಕಿಂದ್ರೆ ಹೇಳಿದರು.

ವೈಚಾರಿಕತೆಯ ಮಹತ್ವ ಹಾಗೂ ಪ್ರಬಂಧಗಳ ಕುರಿತು ಎಸ್ ವಿಸಿ ಶಿಕ್ಷಣ ಸಂಸ್ಥೆಯ ಸಿಇಓ ಡಾ.ಜಗದೀಶ ಅಂಗಡಿ ಮಾತನಾಡಿದರು.

ಪ್ರಥಮ (ಪ್ರವೀಣ್ ಹುಯಿಲಗೋಳ), ದ್ವಿತೀಯ (ಶ್ರೀದೇವಿ ಮಡಿವಾಳರ) ಮತ್ತು ತೃತೀಯ (ಪಾರ್ವತಿ ಸುರೇಶ್ ನೆನಕ್ಕಿ) ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಯಿತು.

ಜಿಲ್ಲೆಯ ಹಿರಿಯ ಕುಸ್ತಿಪಟು ಭೀಮಸಿ ಕೊಡುಗೆಗಳಿಗಾಗಿ ಅವರಿಗೆ ಗೌರವ ಸಮರ್ಪಿಸಲಾಯಿತು. ಕಳೆದ ವರ್ಷ 14 ವರ್ಷ ವಯೋಮಾನದ ಒಳಗಿನವರ

ಕೆ ಎಸ್ ಸಿ ಎ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುಂದಿನ ಹಂತಕ್ಕೆ ಆಯ್ಕೆಯಾದ ತೇಜಸ್ ಹಾಗೂ ಶಾಹಿದ್ ಅಲಿ ಅವರಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಮುಖಂಡರಾದ ಮೂರ್ತಪ್ಪ ಗಿಣಿಗೇರಿ, ವಸಂತ ಹಟ್ಟಿ ಹಾಗೂ ಸೈಯದ್ ಮೆಹಮೂದ್ ಹುಸೇನಿ ಬಲ್ಲೆ ಮಾತನಾಡಿದರು.

ಫೌಂಡೇಶನ್ ಸಂಚಾಲಕ ಮೌನೇಶ್ ಕಿನ್ನಾಳ ಕಾರ್ಯಕ್ರಮ ನಿರೂಪಿಸಿದರು.