ಸಾರಾಂಶ
ಪಟ್ಟಣದ ಜೇಸಿ ವೃತ್ತದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆತ್ಮ ನಿರ್ಭರ, ಮೇಕ್ ಇನ್ ಇಂಡಿಯಾ ಯೋಜನೆಯಡಿ ಶಸ್ತ್ರಾಸ್ತ್ರ ಹಾಗೂ ಯುದ್ಧ ವಿಮಾನ ತಯಾರು ಮಾಡಿ ಭಾರತ ಸ್ವಾವಲಂಭನೆಯತ್ತ ಸಾಗುತ್ತಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.ಪಟ್ಟಣದ ಜೇಸಿ ವೃತ್ತದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರ ದೇಶ ಕಾಯುವ ಸೈನಿಕರಿಗೆ ಸಮರ್ಪಕ ಶಸ್ತ್ರಾಸ್ತ್ರ ಒದಗಿಸದ ಹೀನಾಯ ಸ್ಥಿತಿಯ ಬಗ್ಗೆ ನಿವೃತ್ತ ಸೇನಾ ಮುಖ್ಯಸ್ಥ ರೊಬ್ಬರು ತನ್ನ ಪುಸ್ತಕದಲ್ಲಿ ದಾಖಲಿಸಿ ಅಂದಿನ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದ್ದರು. ಇಂತಹ ಪರಿಸ್ಥಿತಿ ಅರಿತ ನಂತರ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಯೋಧರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.ಇಂದು ಭಾರತ ವಿಶ್ವದಲ್ಲಿ ಆರ್ಥಿಕ ಸಬಲೀಕರಣದಲ್ಲಿ 5ನೇ ಸ್ಥಾನ ಪಡೆದು, 70 ದೇಶಗಳಿಗೆ ಸಾಲ ನೀಡಿರುವುದು ಆರ್ಥಿಕ ಸಬಲೀಕರಣಕ್ಕೆ ಸಾಕ್ಷಿಯಾಗಿದೆ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸ್ಥಳೀಯರು ಸೇರಿ ಸೈನಿಕರ ಮೇಲೆ ಕಲ್ಲು ಹೊಡೆಯುತ್ತಿದ್ದರು. ಆದರೆ 370ನೇ ವಿಧಿ ರದ್ದುಪಡಿಸಿದ ಮೇಲೆ ಭಯೋತ್ಪಾದಕರ ಅಟ್ಟಹಾಸ ಕಡಿಮೆಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಶ್ವದ ಅಗ್ರ ನಾಯಕರಾಗಿದ್ದು, ವಿಶ್ವವೇ ಗೌರವದಿಂದ ನೋಡುವಾಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ಮೋದಿಯ ಕರೆಯುತ್ತಿರುವುದು ಅವರ ಸಂಸ್ಕಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 22ಲಕ್ಷ ಕ್ವಿಂಟಾಲ್ ಅಕ್ಕಿ ನೀಡುತ್ತಿದ್ದು, ಈ ಅಕ್ಕಿಯನ್ನು ನಾವು ನೀಡುತ್ತಿದ್ದೇವೆಂದು ಎಂದು ಹೇಳುತ್ತಿರುವುದು ಖಂಡನೀಯ. ನಿತ್ಯವೂ ಮೋದಿಯವರನ್ನು ನಿಂದನೆ ಮಾಡುವುದು ಕಾಂಗ್ರೆಸ್ಸಿಗರ ಪರಿಪಾಠವಾಗಿದೆ. ಆದರೆ ಭಾರತದ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು. ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರದಿದ್ದರೆ ಭವಿಷ್ಯದ ದಿನಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗುತ್ತಾರೆ. ಈ ನಿಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆಗೆ ಸಮಸ್ತ ಹಿಂದೂ ಬಾಂಧವರು ಬಿಜೆಪಿಗೆ ಮತ ನೀಡಬೇಕಿದೆ.ರಾಜ್ಯ ಸರ್ಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ಸ್ವಾಗತಾರ್ಹ ಆದರೆ ಮದ್ಯ, ಅಂಗಡಿ ವಿದ್ಯುತ್ ಬಿಲ್ಲನ್ನು ಎರಡು ಪಟ್ಟು, ನೋಂದಣಿ ಮುದ್ರಾಂಕ ಶುಲ್ಕವನ್ನು ಐದು ಪಟ್ಟು ಜಾಸ್ತಿ ಮಾಡಿ ಪುರುಷರ ಜೇಬಿಗೆ ಕತ್ತರಿ ಹಾಕಿರುವುದು ಖಂಡನೀಯವಾಗಿದೆ. ಪಾಕ್ ಪರ ಘೋಷಣೆ, ಕುಕ್ಕರ್ ಬಾಂಬ್, ರಾಮೇಶ್ವರ ಕೆಫೆ ಬಾಂಬ್ ಸ್ಪೋಟ, ಪೋಲಿಸ್ ಠಾಣೆ ಹಾಗೂ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದವರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ನಿಂತಿದೆ ಎಂದು ಆರೋಪಿಸಿದರು. ಜೆಡಿಎಸ್ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮಾತನಾಡಿ, ಭಯೋತ್ಪಾದನೆ ಹತ್ತಿಕ್ಕಲು ಮೋದಿಯಂತಹ ವ್ಯಕ್ತಿ ದೇಶಕ್ಕೆ ಅಗತ್ಯವಿದೆ ಎಂದು ಅರಿತು ಮಾಜಿ ಪ್ರದಾನಿ ಎಚ್.ಡಿ.ದೇವೇಗೌಡರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಎಲ್ಲರೂ ಒಟ್ಟಾಗಿ ಬಿಜೆಪಿ ಗೆಲುವಿಗೆ ಕೆಲಸ ಮಾಡಬೇಕಿದೆ ಎಂದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಾಲತೇಶ್ ಸಿಗಸೆ, ಯುವ ಮುಖಂಡ ಪುಣ್ಯಪಾಲ್, ಪ್ರಭಾಕರ್ ಪ್ರಣಸ್ವಿ, ಟಿ.ಎಂ.ಉಮೇಶ್ ಕಲ್ಮಕ್ಕಿ, ಭಾಸ್ಕರ್ ವೆನಿಲ್ಲಾ, ಸುಚಿತಾ ಹೆಗ್ಡೆ, ಬಿ.ಜಗದೀಶ್ಚಂದ್ರ, ಕೆ.ಟಿ.ವೆಂಕಟೇಶ, ಮಂಜು ಹೊಳೆಬಾಗಿಲು, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ದಿವಾಕರ್ ಭಟ್, ಕೆ.ಆರ್.ದೀಪಕ್, ಕೆ.ಟಿ.ಗೋವಿಂದೇಗೌಡ ಮತ್ತಿತರರು ಹಾಜರಿದ್ದರು.೧೭ಬಿಹೆಚ್‌ಆರ್ ೫:
ಬಾಳೆಹೊನ್ನೂರಿನ ಜೇಸಿ ವೃತ್ತದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸುಧಾಕರ್ ಶೆಟ್ಟಿ, ಭಾಸ್ಕರ್ ವೆನಿಲ್ಲಾ, ಪ್ರಭಾಕರ್ ಪ್ರಣಸ್ವಿ, ಕೆ.ಆರ್.ದೀಪಕ್ ಇದ್ದರು.