ಕನ್ನಡಪ್ರಭ ವಾರ್ತೆ ಮಧುಗಿರಿ

ಗ್ರಾಮೀಣ ಮಹಿಳೆಯರು ಆಧುನಿಕ ಕಾಲಕ್ಕೆ ತಕ್ಕಂತೆ ಹೊಸತನ ಮೈಗೂಡಿಸಿಕೊಂಡು ಕೌಶಲವನ್ನು ಕಲಿತು ಸ್ವಾವಲಂಬಿ ಬದುಕು ನಡೆಸಬೇಕು ಎಂದು ತಗ್ಗಿಹಳ್ಳಿ ಶ್ರೀರಾಮಕೃಷ್ಣ ಮಠದ ಶ್ರೀರಮಾನಂದ ಚೈತನ್ಯಸ್ವಾಮೀಜಿ ತಿಳಿಸಿದರು.

ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೊಲಿಗೆ, ಎಂಬ್ರಾಯಿಡ್ ಉಚಿತ ತರಬೇತಿ ಕೇಂದ್ರ ಉದ್ಘಾಟನೆ ಮತ್ತು ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.

ಬದುಕಿರುವವರೆಗೂ ಕಲಿಯಬೇಕು ಎಂಬ ಶ್ರೀ ರಾಮಕೃಷ್ಣರ ವಾಣಿಯಂತೆ ಕಲಿಯುವುದಕ್ಕೆ ಯಾವುದೇ ವಯಸ್ಸು, ಲಿಂಗಬೇಧವಿಲ್ಲ. ಹೊಲಿಗೆ ಹಾಗೂ ಎಂಬ್ರಾಯಿಡ್ ತರಬೇತಿ ಪಡೆದು ಹೆಣ್ಣುಮಕ್ಕಳು ಸ್ವಾಲಂಬಿ ಬದುಕು ನಡೆಸಬಹುದು. ನಿಮ್ಮ ತುತ್ತಿನ ಚೀಲ ತುಂಬುತ್ತದೆ. ಟೈಲರಿಂಗ್‌ ಕಲಿತವರಿಗೆ ಗಾರ್ಮೆಂಟ್ಸ್ ಗಳಲ್ಲಿ ಹೆಚ್ಚು ಬೇಡಿಕೆ ಇದ್ದು,ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಮಹಿಳಾ ಸಬಲೀಕರಣದ ಉದ್ದೇಶದಿಂದ ಹಲಸೂರು ರಾಮಕೃಷ್ಣ ಮಠದದಿಂದ ಹೊಲಿಗೆ ಕೇಂದ್ರ ಪ್ರಾರಂಭವಾಗಿದ್ದು, ಗ್ರಾಮೀಣ ಭಾಗದ ನಿರುದ್ಯೋಗಿ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳುವಂತೆ ಸಲಹೆ ನೀಡಿದರು.


ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸೇವೆಗೆ, ಶಿಕ್ಷಣಕ್ಕೆ, ಆರೋಗ್ಯ ಪಡೆಯಲು ಸೂಕ್ತ ಸಂಸ್ಥೆಯ ಎಂದರೆ ಹಲಸೂರು ರಾಮಕೃಷ್ಣ ಆಶ್ರಮ ಪ್ರಸಿದ್ಧಿ ಪಡೆದಿದೆ. ಬರಗಾಲ ಪೀಡಿತ ಭಾಗದಿಂದ ಸಾವಿರಾರು ಹೆಣ್ಣುಮಕ್ಕಳು ಗಾರ್ಮಂಟ್ಸ್‌ಗಳಿಗೆ ತುಮಕೂರು, ದೊಡ್ಡಬಳ್ಳಾಪುರ ಹಾಗೂ ಬೆಂಗಳೂರಿಗೆ ದಿನನಿತ್ಯ ಹೋಗುತ್ತಿದ್ದು. ಟೈಲರಿಂಗ್ ತರಬೇತಿ ಕೇಂದ್ರ ಆರಂಭ ಮಾಡಿರುವುದು ಹೆಣ್ಣು ಮಕ್ಕಳಿಗೆ ಅನುಕೂಲ. ಅಲ್ಲದೆ ಹಲಸೂರು ಶ್ರೀಮಠದಿಂದ ಸರ್ಕಾರಿ ಶಾಲೆಯ 150 ಬಡ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ ಮಾಡಿರುವುದು ಶ್ಲಾಘನೀಯ. ಈ ಭಾಗದ ಮಕ್ಕಳಿಗೆ ಶಿಕ್ಷಣಕ್ಕೆ ಒತ್ತು ನೀಡಿ ಆಸರೆಯಾಗಿ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬೋಧಸ್ವರೂಪನಂದಸ್ವಾಮಿ , ಮುಕ್ತಿಪದಾನಂದಸ್ವಾಮಿ, ಯೋಗತತ್ವಾನಂದಸ್ವಾಮಿ, ಶಿವಕೃಪಾನಂದಸ್ವಾಮಿ , ಕುಪೇಂದ್ರಯ್ಯ, ತೇಜಸ್ವಿನಿ, ಡಾ.ನಾರಾಯಣ ತಾರಮಣಿ, ಡಾ,ದಾಕ್ಷಾಯಿಣಿ, ಡಾ.ಮಾಧುರಿ, ಡಾ.ಶಶಿಕಲಾ, ಸುರೇಶ್ ,ವಾಸುದೇವ, ಅನು ವೆಂಕಟೇಶ್, ಸುಧಾ, ಮೀರಮಾಧವ್, ದೀಪಕ್‌, ಹೇಮಾನಾಯ್ಕ್, ವಿಜಯ, ಶುಭ, ತ್ಯಾಗರಾಜು ಇತರರಿದ್ದರು.