ಸಹಕಾರಿ ಕ್ಷೇತ್ರದಿಂದ ಸ್ವಾವಲಂಬಿ, ಬಲಿಷ್ಠ ಬದುಕು: ಯು.ಟಿ.ಖಾದರ್‌

| Published : Nov 17 2025, 01:02 AM IST

ಸಹಕಾರಿ ಕ್ಷೇತ್ರದಿಂದ ಸ್ವಾವಲಂಬಿ, ಬಲಿಷ್ಠ ಬದುಕು: ಯು.ಟಿ.ಖಾದರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಶಕ್ತರಿಗೆ ಶಕ್ತಿ ಹಾಗೂ ಧ್ವನಿಯಾಗುವುದು ಸಹಕಾರಿ ಕ್ಷೇತ್ರದ ಗುರಿಯಾಗಿದೆ. ಸಹಕಾರಿ ಕ್ಷೇತ್ರದಿಂದ ಮಾತ್ರ ಸ್ವಾವಲಂಬಿ, ಬಲಿಷ್ಠ ಬದುಕು ಸಾಧ್ಯವಿದೆ ಎಂದು ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಅಶಕ್ತರಿಗೆ ಶಕ್ತಿ ಹಾಗೂ ಧ್ವನಿಯಾಗುವುದು ಸಹಕಾರಿ ಕ್ಷೇತ್ರದ ಗುರಿಯಾಗಿದೆ. ಸಹಕಾರಿ ಕ್ಷೇತ್ರದಿಂದ ಮಾತ್ರ ಸ್ವಾವಲಂಬಿ, ಬಲಿಷ್ಠ ಬದುಕು ಸಾಧ್ಯವಿದೆ ಎಂದು ವಿಧಾನಸಭೆಯ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ‘72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ಹೆಂಚು, ಬೀಡಿ ಉದ್ಯಮದಲ್ಲಿ ದುಡಿದು ಸಾಕಷ್ಟು ಮಹಿಳೆಯರು ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಕುಟುಂಬ ಪೋಷಿಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾರೆ. ರಾಜ್ಯ ಸರ್ಕಾರ ಕೂಡ ಮಹಿಳೆಯರ ಹೆಸರಲ್ಲಿ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ರಾಜಕೀಯದಲ್ಲಿ ಮುಂದೆ ಬರುವಂತೆ ಮಹಿಳೆಯರು ಪ್ರೋತ್ಸಾಹ ನೀಡಬೇಕು. ಜವುಳಿ ಉದ್ದಿಮೆ ಸಹಿತ ಮಹಿಳೆಯರು ನಡೆಸುವ ಸ್ವಸಹಾಯ ಉತ್ಪನ್ನಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಒದಗಲಿ ಎಂದು ಅವರು ಹಾರೈಸಿದರು.

ಆಕರ್ಷಕ ಮೆರವಣಿಗೆ:

ಸಮಾರಂಭಕ್ಕೆ ಮುನ್ನ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ ಕರಾವಳಿ ಉತ್ಸವ ಮೈದಾನದವರೆಗೆ ಆಕರ್ಷಕ ಸಹಕಾರ ಮೆರವಣಿಗೆ ನಡೆಯಿತು. 50ಕ್ಕೂ ಹೆಚ್ಚು ವಿಧದ ಸ್ತಬ್ಧಚಿತ್ರಗಳು ಇದರಲ್ಲಿ ಪಾಲ್ಗೊಂಡಿದ್ದವು. ಮೆರವಣಿಗೆಯಲ್ಲಿ ಅಲಂಕೃತ ರಥದಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಹಾಗೂ ಶಾಸಕ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ ವಿರಾಜಮಾನರಾಗಿದ್ದರು. ಬಳಿಕ, ವಿವಿಧ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ತಯಾರಿಸಿದ ನಂದಿನಿ ಸೀಡ್ಸ್‌ ಡಿಲೈಟ್‌ ಮತ್ತು ಸೀಬೆ ಖಾರ ಲಸ್ಸಿ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಇದೇ ವೇಳೆ ಸುಮಾರು 1.60 ಕೋಟಿ ರು.ಗಳ ಶಿಕ್ಷಣ ನಿಧಿಯನ್ನು ಹಸ್ತಾಂತರಿಸಲಾಯಿತು. ನವೋದಯ ಸ್ವಸಹಾಯ ಸಂಘದ ರಜತೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ‘ಸಂತೃಪ್ತಿ’ಯನ್ನು ಅನಾವರಣಗೊಳಿಸಲಾಯಿತು. ಸಹಕಾರ ಹೆಸರಿನಲ್ಲಿ ಸಹಕಾರಿ ಪತ್ರಿಕೆಯನ್ನು ಕೂಡ ಲೋಕಾರ್ಪಣೆಗೊಳಿಸಲಾಯಿತು. ಬಜಪೆ, ಕೋಟ ಹಾಗೂ ಬಡಗಬೆಟ್ಟು ಸಹಕಾರಿ ಬ್ಯಾಂಕ್‌ಗಳಿಗೆ ಸಹಕಾರಿ ಮಾಣಿಕ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ರಾಜ್ಯ ಸರ್ಕಾರದಿಂದ ಸಹಕಾರ ರತ್ನ ಪುರಸ್ಕೃತ 10 ಮಂದಿಯನ್ನು ಗೌರವಿಸಲಾಯಿತು. ಉತ್ತಮ ಸಹಕಾರಿ ಸಂಘಗಳನ್ನು ಗೌರವಿಸಲಾಯಿತು. (ಬಾಕ್ಸ್‌):

ಅರ್ಧ ದಿನದಲ್ಲೇ ಸಹಕಾರಿ ಸಾಲ

ಮಂಜೂರು; ಡಾ.ಎಂ.ಎನ್‌.ಆರ್‌:ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷರು, ನವೋದಯ ಗ್ರಾಮ ವಿಕಾಸ ಚಾರಿಟೇಬಲ್‌ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಆಗಿರುವ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳು ಸಾಲ ನೀಡಲು ನಿರಾಕರಿಸಿದಾಗ ರೈತರ ಕೈಹಿಡಿದದ್ದು ಸಹಕಾರಿ ಸಂಘಗಳು. ಸಹಕಾರಿ ಬ್ಯಾಂಕ್‌ಗಳು ಅರ್ಧ ದಿನದಲ್ಲಿ ಸಾಲ ಮಂಜೂರುಗೊಳಿಸುವ ಮೂಲಕ ಜನತೆಗೆ ನೆರವಾಗುತ್ತಿವೆ. ಅವಿಭಜಿತ ದ.ಕ.ಜಿಲ್ಲೆ ಬ್ಯಾಂಕ್‌ಗಳ ತವರು. ಆದರೆ, ಈಗ ಬಹುತೇಕ ಬ್ಯಾಂಕ್‌ಗಳು ವಿಲೀನಗೊಂಡಿದ್ದು, ಕನ್ನಡೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ತೊಡಕು ಸಹಕಾರಿ ಬ್ಯಾಂಕ್‌ಗಳಲ್ಲಿ ಇಲ್ಲ. ಸಹಕಾರಿ ಬ್ಯಾಂಕ್‌ಗಳು ವಿಕಸನಗೊಂಡು ಪ್ರತಿ ಹಳ್ಳಿಗಳಲ್ಲಿ ಸೇವೆ ನೀಡುತ್ತಿವೆ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಇಂತಹ ಸಮಾರಂಭ ಸಂಘಟಿಸಿದಾಗ ಮಂತ್ರಿಗಳು ಗೈರಾಗುತ್ತಿದ್ದಾರೆ. ಮುಂದೆ ಇಂತಹ ಪರಿಸ್ಥಿತಿ ಬರಬಾರದು. ಅದಕ್ಕಾಗಿ ಮುಂದಿನ ಬಾರಿಯಾದರೂ ಮಂಗಳೂರು ಮತ್ತು ಉಡುಪಿಯವರು ಸಚಿವರಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಶಕ್ತಿ ತುಂಬಬೇಕು ಎಂದು ಸ್ಪೀಕರ್‌ ಯು.ಟಿ.ಖಾದರ್‌ ಮತ್ತು ಮಂಜುನಾಥ ಭಂಡಾರಿ ಅವರನ್ನು ಉದ್ದೇಶಿಸಿ ಡಾ.ರಾಜೇಂದ್ರ ಕುಮಾರ್‌ ಹೇಳಿದರು.