ಸಾರಾಂಶ
ಉಡುಪಿ: ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಗುಂಡಿಗಳ ಜೊತೆ ಸೆಲ್ಫಿ ಪೋಟೊ ಹಂಚಿಕೊಳ್ಳುವ ಅಭಿಯಾನ ಮಾಡುವ ಮೊದಲು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯಿಂದ ನಿರಂತರ ಅಮೂಲ್ಯ ಜೀವಹಾನಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ರೊಚ್ಚಿಗೆದ್ದಿರುವುದನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಹೆದ್ದಾರಿಯ ದುರಸ್ತಿಯ ಬಗ್ಗೆ ಕೇಂದ್ರ ಸರ್ಕಾರದಿಂದ ಅನುದಾನ ತರುವ ಬಗ್ಗೆ ಪ್ರಯತ್ನಿಸಬೇಕಿತ್ತು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಜಿಲ್ಲಾ ಬಿಜೆಪಿಯವರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಸಾವಿನ ಕೂಪಗಳ ಜೊತೆ ಸೆಲ್ಫಿ ಪೋಟೊ ತೆಗೆದು ಅದನ್ನು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವರಿಗೆ ಕಳುಹಿಸಿದ್ದರೆ ಈ ಅಭಿಯಾನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿತ್ತು ಎಂದರು. ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದ ಶಾಸಕರು ಬಿಜೆಪಿಯವರು ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರು ಬಿಜೆಪಿ ಅವರು ನಗರಸಭೆ ಆಡಳಿತವಿರುವುದು ಬಿಜೆಪಿಯವರದ್ದು. ಪರ್ಕಳದ ರಾಷ್ಟ್ರೀಯ ಹೆದ್ದಾರಿ, ಮಲ್ಪೆಯಿಂದ ಕರಾವಳಿ ತನಕ ರಾಷ್ಟ್ರೀಯ ಹೆದ್ದಾರಿ, ಸಂತಕಟ್ಟೆ ರಾಷ್ಟ್ರೀಯ ಹೆದ್ದಾರಿ, ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಬಗ್ಗೆ ಯಾವಾಗ ತಮ್ಮ ಬಾಯಿ ತೆರೆಯುತ್ತಿರಿ. ಜಿಲ್ಲಾ ಬಿಜೆಪಿ ಈ ಅಭಿಯಾನ ಪ್ರಾರಂಭಿಸುವ ಮೊದಲು ಇಲ್ಲಸಲ್ಲದ ವಿಚಾರಗಳಿಂದಲೇ ಕಾಲಹರಣ ಮಾಡುತ್ತಿರುವ ಜಿಲ್ಲೆಯ ಸಂಸದರ, ಐದು ಶಾಸಕರನ್ನು ರಸ್ತೆ ಗುಂಡಿಗಳ ಬಳಿಗೆ ಕರೆದುಕೊಂಡು ಹೋಗಿ ಅಲ್ಲಿ ಸೆಲ್ಫಿ ಪೋಟೊ ತೆಗೆದು ಅವರು ತಮ್ಮ ಕರ್ತವ್ಯವನ್ನು ನೆನಪಿಸಿಕೊಳ್ಳುವಂತೆ ಮಾಡಬೇಕಿತ್ತು.
ಹಾಗೆಯೇ ರಾಜ್ಯದ ಕೋಟ್ಯಾಂತರ ಮಂದಿಗೆ ಆರ್ಥಿಕ ಚೈತನ್ಯ ಕಲ್ಪಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸುವಂತೆ ರಮೇಶ್ ಕಾಂಚನ್ ಎಚ್ಚರಿಕೆ ನೀಡಿದರು.