ಸಾರಾಂಶ
ಶಾಸಕರ ಬೆಂಬಲಿಗನೊಬ್ಬ ಅಣೆಕಟ್ಟೆ ಮೇಲೆ ಸೆಲ್ಫಿ ವೀಡಿಯೋ ಮಾಡಿ ರೀಲ್ಸ್ ಮಾಡುವ ಮೂಲಕ ದರ್ಬಾರು ನಡೆಸಿದ್ದು, ಮತ್ತೊಮ್ಮೆ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಬಳಿ ಭದ್ರತಾ ಲೋಪ ಕಂಡು ಬಂದಿದೆ.
ಶ್ರೀರಂಗಪಟ್ಟಣ : ಶಾಸಕರ ಬೆಂಬಲಿಗನೊಬ್ಬ ಅಣೆಕಟ್ಟೆ ಮೇಲೆ ಸೆಲ್ಫಿ ವೀಡಿಯೋ ಮಾಡಿ ರೀಲ್ಸ್ ಮಾಡುವ ಮೂಲಕ ದರ್ಬಾರು ನಡೆಸಿದ್ದು, ಮತ್ತೊಮ್ಮೆ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಬಳಿ ಭದ್ರತಾ ಲೋಪ ಕಂಡು ಬಂದಿದೆ.
ಶಾಸಕ ರಮೇಶ ಬಂಡಿಸಿದ್ದೇಗೌಡರ ಬೆಂಬಲಿಗ ಮಧು ಎಂಬಾತ ಕನ್ನಂಬಾಡಿ ಅಣೆಕಟ್ಟೆ ಮೇಲ್ಬಾಗದಲ್ಲಿ ಮಾಡಿರುವ ರೀಲ್ಸ್ ದರ್ಬಾರ್‌ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತಿದೆ.
ಅಣೆಕಟ್ಟೆ ಮೇಲೆ ಸಾರ್ವಜನಿಕರ ಪ್ರವೇಶ ನಿಷೇಧ ಇದ್ದರೂ ಸಹ ಶಾಸಕರ ಬೆಂಬಲಿಗನಿಗೆ ರೀಲ್ಸ್ ಮಾಡಲು ಬಿಟ್ಟಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿವೆ. ಸಾಮಾನ್ಯ ಜನರಿಗೊಂದು ಕಾನೂನು ಶಾಸಕರ ಬೆಂಬಲಿಗನಿಗೊಂದು ಕಾನೂನಾ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
ಸರ್ಕಾರ ಲಕ್ಷ ಲಕ್ಷ ಖರ್ಚು ಮಾಡಿ ಅಣೆಕಟ್ಟೆ ಭದ್ರತೆಗಾಗಿಯೇ ಪ್ರತ್ಯೇಕವಾಗಿ ಕೈಗಾರಿಕಾ ಭದ್ರತಾ ಪಡೆಯನ್ನು ರಕ್ಷಣೆಗೆ ನಿಯೋಜಿಸಲಾಗಿದ್ದರೂ ಮೇಲಿಂದ ಮೇಲೆ ಅಣೆಕಟ್ಟೆ ಮೇಲೆ ಸೆಲ್ಫಿ ಹಾಗೂ ರೀಲ್ಸ್ ಮಾಡುವ ಮೂಲಕ ಅಣೆಕಟ್ಟೆ ಭದ್ರತೆ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ.
ಇತ್ತೀಚೆಗಷ್ಟೆ ಮೂರು ಯುವಕರು ಅಣೆಕಟ್ಟೆ ಕೆಳಭಾಗಕ್ಕೆ ತೆರಳಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು, ಮತ್ತೊಮ್ಮೆ ಭದ್ರತಾ ವೈಫಲ್ಯವಾಗಿರುವುದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.