ಈಡೇರಿಕೆಗೆ ಆಗ್ರಹಿಸಿ ಕೆಆರ್‌ಎಸ್ ಪ್ರತಿಭಟನೆ

| Published : Jun 30 2025, 12:34 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಲೋಕಾಯುಕ್ತ ಸಂಸ್ಥೆಯಲ್ಲಿನ ಅಕ್ರಮಗಳ ತನಿಖೆಯನ್ನು ಉಚ್ಚ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಸಿಬಿಐ ಸಂಸ್ಥೆಯ ನೇತೃತ್ವದಲ್ಲಿ ತನಿಖೆ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಲೋಕಾಯುಕ್ತ ಸಂಸ್ಥೆಯಲ್ಲಿನ ಅಕ್ರಮಗಳ ತನಿಖೆಯನ್ನು ಉಚ್ಚ ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ಸಿಬಿಐ ಸಂಸ್ಥೆಯ ನೇತೃತ್ವದಲ್ಲಿ ತನಿಖೆ ನಡೆಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಆಡಳಿತದಲ್ಲಿನ ಅಕ್ರಮ, ಅವ್ಯವಹಾರ, ಕರ್ತವ್ಯಲೋಪ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದ ಲೋಕಾಯುಕ್ತ ಸಂಸ್ಥೆಯ ನಿರಂತರವಾಗಿ ಅಕ್ರಮಗಳಲ್ಲಿ ಮತ್ತು ಅವ್ಯವಹಾರಗಳಲ್ಲಿ ಸಿಲುಕುತ್ತಿರುವುದು ದುರದೃಷ್ಟಕರ. ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗುವ ಬಹುತೇಕ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೆ ಮುಕ್ತಾಯವಾಗುತ್ತಿವೆ ಮತ್ತು ಸ್ಪಷ್ಟವಾಗಿ ಭ್ರಷ್ಟಾಚಾರವೆಸಗಿರುವ ಪ್ರಕರಣಗಳು ಕೂಡ ವಿಲೇವಾರಿಯಾಗದೆ ದೂಳು ಹಿಡಿಯುತ್ತಿವೆ ಎಂದು ದೂರದರು.

ಇದು ಲೋಕಾಯುಕ್ತ ಸಂಸ್ಥೆಯ ಹಳ್ಳ ಹಿಡಿರುವುದನ್ನು ತೋರಿಸುತ್ತದೆ. ಲೋಕಾಯುಕ್ತ ಸಂಸ್ಥೆಯ ಘನತೆಯನ್ನು ಮತ್ತು ವಿಶ್ವಾಸವನ್ನು ಎತ್ತಿ ಹಿಡಿಯಬೇಕಾದ ಹೊಣೆಗಾರಿಕೆ ಲೋಕಾಯುಕ್ತ ಅವರ ಮೇಲಿರುತ್ತದೆ, ಆದರೆ ಪ್ರಸ್ತುತ ಲೋಕಾಯುಕ್ತರು ಈ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲರಾಗಿರುವುದು ಸ್ಪಷ್ಟವಾಗಿದೆ ಎಂದರು. ಲೋಕಾಯುಕ್ತ ಸಂಸ್ಥೆಯಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆಯುತ್ತಿದ್ದರೂ ಕೂಡ ಅದನ್ನು ನಿಯಂತ್ರಿಸುವಲ್ಲಿ ಅವರು ವಿಫಲರಾಗಿದ್ದಾರೆ. ಹಾಗೆಯೆ, ನ್ಯಾ. ಬಿ. ಎಸ್. ಪಾಟೀಲ್ ಅವರ ಕುಟುಂಬದವರು ಅವರ ಸ್ಥಾನವನ್ನು ದುರ್ಬಳಕೆ ಮಾಡಿರುವ ಬಗ್ಗೆ ಗಂಭೀರ ಆರೋಪವಿದ್ದು, ಆ ಬಗೆಗಿನ ಪ್ರಕರಣವು ನ್ಯಾಯಾಲಯದಲ್ಲಿದೆ. ಇಂತಹವರು ಲೋಕಾಯುಕ್ತರ ಸ್ಥಾನದಲ್ಲಿ ಮುಂದುವರೆಯುವುದು ಉಚಿತವಲ್ಲ. ಈ ವಿಚಾರಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅವರಿಂದ ರಾಜಿನಾಮೆ ಪಡೆಯಬೆಕು ಅಥವಾ ಅವರನ್ನು ವಜಾ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧ್ಯಕ್ಷ ಅಶೋಕ ಜಾದವ, ಗಣಪತಿ ರಾಠೋಡ, ಆನಂದ ಹಡಪದ, ಪ್ರವೀಣ ಕನಸೇ, ವಿಕ್ರಮ ವಾಗಮೋರೆ, ದುರಗಪ್ಪ ಬೂದಿಹಾಳ, ನಬಿ ಹುಣಶ್ಯಾಳ, ಹಣಮಂತ ಮಟ್ಟೆ, ಭಜರಂಗ ಪವಾರ, ಪಿನಿಕ್ಸ್ ಶರಣಪ್ಪ, ಹಣಮಂತ ಮಟ್ಟೇ, ಹಮಿದ ಇನಾಮದಾರ,ಲಕ್ಷ್ಮಣ ಚಡಚಣ, ಅಣ್ಣಾ ಪೂಜಾರಿ, ಪ್ರವೀಣ ರಾಯಗೊಂಡ, ಸಾಗರ ಕುಂಬಾರ, ದೇಶು ಚವ್ಹಾಣ ಉಪಸ್ಥಿತರಿದ್ದರು.