ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಇತ್ತೀಚಿನ ದಿನಗಳಲ್ಲಿ ಮಾನವೀಯ ಮೌಲ್ಯ ಕಡಿಮೆಯಾಗುತ್ತಿದ್ದು, ಸ್ವಾರ್ಥ ಹೆಚ್ಚಾಗುತ್ತಿದೆ. ಇದು ಸಮಾಜದ ಅಭಿವೃದ್ಧಿಗೆ ಪೂರಕವಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಸಿ. ಶಾಮ್ ಪ್ರಸಾದ್ ಅಭಿಪ್ರಾಯಪಟ್ಟರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಇತರರಂತೆ ಬದುಕಬೇಕೆಂಬುದು ಎಲ್ಲರಲ್ಲಿಯೂ ಬರಬೇಕು. ಆದರೆ ನಾನು ಬದುಕಿದರೆ ಸಾಕು, ಇತರರು ಹೇಗಿದ್ದಾರೋ ಹಾಗೆಯೇ ಇರಲಿ ಎಂಬುದು ಹೆಚ್ಚಾಗುತ್ತಿದೆ. ಇದು ಸಮಾಜದ ಅಭಿವೃದ್ಧಿಗೆ ಒಳ್ಳೆಯದಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಪ್ರತಿಪಾದಿಸಿದರು. ಮಾನವ ಹಕ್ಕು ಉಲ್ಲಂಘನೆಯು ಸುಸಂಸ್ಕೃತರಲ್ಲಿ ಹೆಚ್ಚಾಗುತ್ತಿದೆ. ದೌರ್ಜನ್ಯಗಳು ಹೆಚ್ಚು ತಿಳಿದವರಿಂದಲೇ ಆಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ ಎಂದರು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರು ತಮ್ಮ ತಮ್ಮ ಕಾಲಘಟ್ಟದಲ್ಲಿ ಸಮಾಜದ ಏಳಿಗೆಗೆ ಹೋರಾಟ ಮಾಡಿದ್ದಾರೆ. ಸಾಮರಸ್ಯದ ಬದುಕು ಮತ್ತು ಸಮಾನತೆಗಾಗಿ ದುಡಿದಿದ್ದಾರೆ ಎಂದು ಶಾಮ್ ಪ್ರಸಾದ್ ಸ್ಮರಿಸಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್ ಮಾತನಾಡಿ ವಿದ್ಯಾರ್ಥಿಗಳು ಕಾನೂನಿನ ಅರಿವು ಪಡೆಯಬೇಕು. ಸಂವಿಧಾನಾತ್ಮಕವಾಗಿ ರಚನೆಯಾಗಿರುವ ಪ್ರತಿಯೊಂದು ವಿಷಯದ ಬಗ್ಗೆಯೂ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದರು.
ಕೃತ್ಯ ಸಾಬೀತಾಗುವವರೆಗೂ ಅಪರಾಧಿಯಾಗಿರುವುದಿಲ್ಲ ಆರೋಪಿ ಆಗಿರುತ್ತಾನೆ. ಪ್ರತಿಯೊಂದು ಹಂತದಲ್ಲಿ ಪರಿಶೀಲಿಸಿಯೇ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಆರೋಪಿಗೂ ಮಾತನಾಡಲು ಅವಕಾಶ ನೀಡುತ್ತದೆ. ಮಾನವ ಹಕ್ಕು ನಿರಪರಾಧಿಗೆ ಶಿಕ್ಷೆಯಾಗಬಾರದೆಂಬ ಉದ್ದೇಶ ಹೊಂದಿದೆ ಎಂದು ತಿಳಿಸಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಕಾನೂನು ನೆರವು ಅಭಿರಕ್ಷಕರಾದ ಕೆ.ಆರ್. ವಿದ್ಯಾಧರ ಗೌಡ ಮಾತನಾಡಿ ಮಾನವ ಹಕ್ಕುಗಳನ್ನು ಸಂರಕ್ಷಿಸಬೇಕು. ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು. ಇತರರನ್ನು ಗೌರವಿಸಿದಲ್ಲಿ ಮಾನವ ಹಕ್ಕನ್ನು ಸಂರಕ್ಷಿಸಿದಂತೆ ಎಂದರು. ನಗರದ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಕೋರನ ಸರಸ್ವತಿ ಮಾತನಾಡಿ 10ನೇ ಶತಮಾನದಲ್ಲಿ ಪಂಪ ಹೇಳುವಂತೆ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನರು ಅಂದಿನಿಂದಲೂ ಸಮಾನತೆಗಾಗಿ ಹೋರಾಟ ನಡೆಸುತ್ತಾ ಬಂದಿದ್ದು ಮಾನವಹಕ್ಕಿನ ಅಡಿಪಾಯ ಇದಾಗಿದೆ ಎಂದು ತಿಳಿಸಿದರು. ಕಾನೂನು ಸಡಿಲವಾದಂತೆ ಕಾನೂನು ಉಲ್ಲಂಘನೆ ಆಗುತ್ತದೆ. ಆದ್ದರಿಂದ ಕಾನೂನು ಕೂಡ ಸಡಿಲವಾಗಬಾರದು. ಈ ನಿಟ್ಟಿನಲ್ಲಿ ಮಾನವ ಹಕ್ಕನ್ನು ತಿಳಿದುಕೊಳ್ಳುವ ಅತ್ಯವಶ್ಯಕತೆ ಇದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಅಧಿಕಾರಿ ಕನ್ನಿಕಾ ಇತರರು ಇದ್ದರು. ಪ್ರಾಧ್ಯಾಪಕರಾದ ಎಚ್.ಪಿ.ನಿರ್ಮಲ ಸ್ವಾಗತಿಸಿದರು. ವನಿತಾ ನಿರೂಪಿಸಿ, ವಂದಿಸಿದರು.