ಮಾನವ- ಪ್ರಾಣಿ ಸಂಘರ್ಷಕ್ಕೆ ಸ್ವಾರ್ಥವೇ ಕಾರಣ: ವಸಂತ ರೆಡ್ಡಿ

| Published : Sep 12 2024, 01:51 AM IST

ಮಾನವ- ಪ್ರಾಣಿ ಸಂಘರ್ಷಕ್ಕೆ ಸ್ವಾರ್ಥವೇ ಕಾರಣ: ವಸಂತ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ಹವಾಮಾನ ಬದಲಾವಣೆಯಿಂದ ಭೂಕುಸಿತ, ಅತಿವೃಷ್ಟಿ ಮಾನವ- ಪ್ರಾಣಿ ಸಂಘರ್ಷ ನಡೆಯುತ್ತಿದ್ದು, ಇದೆಲ್ಲವೂ ಸ್ವಾರ್ಥ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯದ ಮೇಲೆ ಮಾಡಿರುವ ದಬ್ಬಾಳಿಕೆಯೇ ಕಾರಣವಾಗಿದೆ.

ಶಿರಸಿ: ರಾಷ್ಟ್ರೀಯ ಸಂಪತ್ತು, ದೇಶದ ಆಸ್ತಿ ಸಂರಕ್ಷಣೆಗೆ ಸಾರ್ವಜನಿಕರ, ಎಲ್ಲರ ಕಾರಣದಿಂದ ಸಾಧ್ಯವಾಗಿದೆ ಎಂದು ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತ ರೆಡ್ಡಿ ತಿಳಿಸಿದರು.ಬುಧವಾರ ನಗರದ ಝೂ ವೃತ್ತದ ಬಳಿಯ ಮಕ್ಕಳ ಉದ್ಯಾನವನದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಅರಣ್ಯ ಸಂಪತ್ತು ನೈಸರ್ಗಿಕ. ಪ್ರತಿಯೊಬ್ಬರಿಗೂ ಬೇಕು. ಗಾಳಿ, ನೀರು ಎಲ್ಲವೂ ಅರಣ್ಯ ಸಂಪತ್ತಿನ ಕೊಡುಗೆ. ಆದರೆ ಇತ್ತೀಚಿನ ಹವಾಮಾನ ಬದಲಾವಣೆಯಿಂದ ಭೂಕುಸಿತ, ಅತಿವೃಷ್ಟಿ ಮಾನವ- ಪ್ರಾಣಿ ಸಂಘರ್ಷ ನಡೆಯುತ್ತಿದ್ದು, ಇದೆಲ್ಲವೂ ಸ್ವಾರ್ಥ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ಅರಣ್ಯದ ಮೇಲೆ ಮಾಡಿರುವ ದಬ್ಬಾಳಿಕೆಯೇ ಕಾರಣವಾಗಿದೆ ಎಂದರು. ನಗರದ ೧ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಾರವಾರ ಪೀಠ ಶಿರಸಿಯ ನ್ಯಾಯಾಧೀಶ ಕಿರಣ್ ಕಿಣಿ ಮಾತನಾಡಿ, ಅರಣ್ಯ ಸಂರಕ್ಷಣೆಗಾಗಿ ಹುತಾತ್ಮರಾದವರನ್ನು ಗೌರವಿಸೋಣ. ಅವರ ಬದುಕನ್ನು ಆದರ್ಶವಾಗಿ ತೆಗೆದುಕೊಂಡು ಅರಣ್ಯವನ್ನು ಉಳಿಸುವ ಕೆಲಸ ಮಾಡಬೇಕು. ಮನುಷ್ಯನಿಂದ ಕಾಡಲ್ಲ. ಕಾಡಿನಿಂದ ಮನುಷ್ಯ ಎಂದರು. ಈ ವೇಳೆ ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ, ಡಿಎಸ್ಪಿ ಕೆ.ಎಲ್. ಗಣೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಶಿರಸಿ ನ್ಯಾಯಾಲಯದ ಎಪಿಪಿ ಚೇತನಾ, ಪಿ.ಪಿ. ರಾಜೇಶ ಮಳಗಿಕರ್, ಡಿಸಿಎಫ್ ಮುಕುಲ್ ಚಂದ್ ಇದ್ದರು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ರಕ್ತದಾನ ನಡೆಸಲಾಯಿತು.ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ: ಹರ್ಷಭಾನು

ಯಲ್ಲಾಪುರ: ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ. ತಿಳಿಸಿದರು.ಸೆ. 11ರಂದು ಅರಣ್ಯ ಹುತಾತ್ಮರ ದಿನಾಚರಣೆ ಪ್ರಯುಕ್ತ ಇಲ್ಲಿನ ಅರಣ್ಯ ಇಲಾಖೆಯ ಕಚೇರಿ ಆವಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಅರಣ್ಯ ಹುತಾತ್ಮರ ತ್ಯಾಗವನ್ನು ಸ್ಮರಿಸುವುದು ಮತ್ತು ಅವರ ಸೇವೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವೆಂದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂಗಮೇಶ ಪ್ರಭಾಕರ, ವಲಯಾರಣ್ಯಾಧಿಕಾರಿ ಮಹೇಶ ಬೊಚಳ್ಳಿ, ಪತ್ರಾಂಕಿತ ವ್ಯವಸ್ಥಾಪಕ ಪ್ರಕಾಶ ಬೋರಕರ, ಉಪವಲಯಾರಣ್ಯಾಧಿಕಾರಿ ಸುಭಾಷ ಗಾಂವ್ಕರ, ಗಸ್ತು ಅರಣ್ಯ ಪಾಲಕ ಲಕ್ಕಪ್ಪ ಯಮ್ಮಿಕಾಯಿ, ವಾಹನ ಚಾಲಕ ಪರಶುರಾಮ ಮಡಿವಾಳ, ಕ್ಷೇಮಾಭಿವೃದ್ಧಿ ನೌಕರ ಅಬ್ದುಲ್ ಜಲಿಲಖಾನ ಮತ್ತು ಜವಾನ ಕೃಷ್ಣ ಪೆಡ್ನೇಕರ ಮುಂತಾದವರು ಪುಷ್ಪನಮನ ಸಲ್ಲಿಸಿದರು.

ಗಸ್ತು ವನಪಾಲಕ ಶಾನವಾಜ್ ಮುಲ್ತಾನಿ ಸ್ವಾಗತಿಸಿದರು. ಉಪವಲಯಾರಣ್ಯಾಧಿಕಾರಿ ಸಂಜೀವಕುಮಾರ ಬೋರಗಲ್ಲಿ, ಅರಣ್ಯ ಹುತಾತ್ಮರ ಕುರಿತು ಮಾಹಿತಿ ನೀಡಿದರು. ಅರಣ್ಯಾಧಿಕಾರಿಗಳಾದ ಅಶೋಕ ಶಿರಗಾಂವಿ ಮತ್ತು ಶರಣಬಸು ಕಾರ್ಯಕ್ರಮ ನಿರ್ವಹಿಸಿದರು.